
ಸಿದ್ದರಾಮಯ್ಯ
ಮೈಸೂರು: ‘ನಾಯಕತ್ವ ಬದಲಾವಣೆ, ಸಂಪುಟ ವಿಸ್ತರಣೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ. ನಾನು, ಶಿವಕುಮಾರ್ ಸೇರಿದಂತೆ ಎಲ್ಲರೂ ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು 'ಶಾಸಕರ ದೆಹಲಿ ಭೇಟಿ ಉದ್ದೇಶದ ಬಗ್ಗೆ ಗೊತ್ತಿಲ್ಲ. ಯಾರೋ ಕೆಲವರು ಹೋಗಿರಬಹುದು. ಹೈಕಮಾಂಡ್ ಎಂದೂ ನಾಯಕತ್ವ ಬದಲಾವಣೆ ಬಗ್ಗೆ ಹೇಳಿಲ್ಲ. ಮುಂದೆಯೂ ನಾನೇ ಬಜೆಟ್ ಮಂಡಿಸುತ್ತೇನೆ' ಎಂದರು.
' ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಬರಲಿದ್ದು, ಶನಿವಾರ ಅವರನ್ನು ಭೇಟಿಯಾಗುತ್ತೇನೆ' ಎಂದರು.
ಇಲ್ಲಿಯೇ ಖರೀದಿಸಿ: 'ಮೆಕ್ಕೆಜೋಳದ ಎಂಎಸ್‌ಪಿ ಕ್ವಿಂಟಲ್‌ಗೆ ₹2400 ನಿಗದಿ ಆಗಿದೆ. ಆದರೆ ಈವರೆಗೆ ಕೇಂದ್ರ ಸರ್ಕಾರದಿಂದ ರಾಜ್ಯದಲ್ಲಿ ಖರೀದಿ ಕೇಂದ್ರ ಆರಂಭ ಆಗಿಲ್ಲ. ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಆಗಿದೆ. ರೈತರು ಸುಮಾರು 55 ಲಕ್ಷ ಟನ್‌ನಷ್ಟು ಜೋಳ ಬೆಳೆದಿದ್ದಾರೆ. ಕೇಂದ್ರವು ಇಲ್ಲಿ ಖರೀದಿ ಬದಲಿಗೆ ವಿದೇಶದಿಂದ 70 ಲಕ್ಷ ಟನ್ ಆಮದಿಗೆ ಮುಂದಾಗಿರುವುದು ಸರಿಯಲ್ಲ. ಕೇಂದ್ರದ ನೋಡಲ್ ಏಜೆನ್ಸಿಗಳು ಇಲ್ಲಿಯೇ ಖರೀದಿ ಮಾಡಬೇಕು' ಎಂದು ಆಗ್ರಹಿಸಿದರು.
' ಡಿಸ್ಟಿಲರಿ ಏಜೆನ್ಸಿಗಳು ಮುಕ್ತ ಮಾರುಕಟ್ಟೆ ಬದಲಿಗೆ ಖರೀದಿ ಕೇಂದ್ರದ ಮೂಲಕವೇ ಮೆಕ್ಕೆಜೋಳ ಖರೀದಿಸುವಂತೆ ಸೂಚಿಸಲಾಗಿದೆ. ರೈತರಿಗೆ ಅಗತ್ಯ ಸಹಾಯ ಒದಗಿಸಲಾಗುವುದು. 10 ಲಕ್ಷ ಟನ್ ಜೋಳ ಖರೀದಿಗೆ ಕೂಡಲೇ ಖರೀದಿ ಕೇಂದ್ರ ತೆರೆಯಲು ಸೂಚಿಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೂ ಪತ್ರ ಬರೆಯಲಾಗುವುದು' ಎಂದರು.
'ಕಬ್ಬಿನ ಎಂಎಸ್‌ಪಿ ದರ ನಿಗದಿ, ಎಥೆನಾಲ್ ಉತ್ಪಾದನೆ, ಅತಿವೃಷ್ಟಿ ಪರಿಹಾರ ಸಂಬಂಧ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಪೂರಕವಾಗಿ ಸ್ಪಂದಿಸುವ ನಿರೀಕ್ಷೆ ಇದೆ' ಎಂದರು.
ಸಚಿವ ಎಚ್.ಕೆ. ಪಾಟೀಲ ಮಾತನಾಡಿ ' ಹೆಸರುಕಾಳು ಖರೀದಿ ಸಂಬಂಧ ಎಫ್ ಎಕ್ಯು ಬದಲಾವಣೆ ಮಾಡಲು ಕೇಂದ್ರವನ್ನು ಭೇಟಿ ಮಾಡುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.