
ಕಾಂಗ್ರೆಸ್
ಬೆಂಗಳೂರು: ಎರಡೂವರೆ ವರ್ಷಗಳ ಬಳಿಕ ‘ನಾಯಕತ್ವ ಬದಲಾವಣೆ’ ಎಂಬ ವಿಷಯದ ಸುತ್ತ ಗಿರಕಿ ಹೊಡೆಯುತ್ತಿದ್ದ ಆಡಳಿತಾರೂಢ ಕಾಂಗ್ರೆಸ್‌ನ ಒಳ ರಾಜಕಾರಣ, ಈಗ ‘ಉತ್ತರಾಧಿಕಾರಿ ಪರ್ವ’ದ ಕಡೆಗೆ ಹೊರಳಿದೆ.
ಬೆಳಗಾವಿಯಲ್ಲಿ ಬುಧವಾರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಗ ಡಾ. ಯತೀಂದ್ರ ಅವರು, ‘ನನ್ನ ತಂದೆ ರಾಜಕಾರಣದ ಸಂಧ್ಯಾಕಾಲದಲ್ಲಿದ್ದಾರೆ. ಅವರಂತೆಯೇ ಸೈದ್ಧಾಂತಿಕ ರಾಜಕಾರಣದಲ್ಲಿ ನಂಬಿಕೆ ಇಟ್ಟಿರುವ ಸಚಿವ ಸತೀಶ ಜಾರಕಿಹೊಳಿ ಅವರು ಸಿದ್ದರಾಮಯ್ಯ ನಂತರ ಅಹಿಂದ ನಾಯಕತ್ವ ವಹಿಸಿಕೊಳ್ಳಲು ಸಮರ್ಥರು. ಹಾಗಂತ ನಾಯಕತ್ವ ಬದಲಾವಣೆಯ ಪ್ರಶ್ನೆ ಇಲ್ಲ’ ಎಂದಿದ್ದರು. ಯತೀಂದ್ರ ಅವರ ಮಾತು ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.
‘2028ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನು ಮುಖ್ಯಮಂತ್ರಿಯಾಗಲು ಬಯಸುವೆ. ನಾನು 30 ವರ್ಷಗಳಿಂದ ಅಹಿಂದ ಪರ ಹೋರಾಡುತ್ತಿದ್ದೇನೆ. ಅಹಿಂದ ಇಲ್ಲದೇ ಸರ್ಕಾರ ರಚಿಸಲು ಆಗದು. ನಾಯಕತ್ವಕ್ಕೆ ಇನ್ನೂ ಸಾಕಷ್ಟು ಸಮಯವಿದೆ. ಮುಂದೆ ನೋಡೋಣ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಇತ್ತ ಬೆಂಗಳೂರಿನಲ್ಲಿ ಮಾತನಾಡಿದ ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರು, ‘ಮುಖ್ಯಮಂತ್ರಿ ಸ್ಥಾನಕ್ಕೆ ಎಲ್ಲರೂ ಸಮರ್ಥರೇ. ಇಲ್ಲಿ ಯಾರೂ ಸನ್ಯಾಸಿಗಳಲ್ಲ’ ಎನ್ನುವ ಮೂಲಕ ತಾವೂ ಆಕಾಂಕ್ಷಿ ಎಂದು ತಮ್ಮ ದಾಳ ಉರುಳಿಸಿದ್ದಾರೆ.
ಸಚಿವರಾದ ಜಿ. ಪರಮೇಶ್ವರ, ಪ್ರಿಯಾಂಕ್ ಖರ್ಗೆ, ಆರ್.ಬಿ. ತಿಮ್ಮಾಪುರ, ಈಶ್ವರ ಖಂಡ್ರೆ ಅವರೆಲ್ಲರೂ ಪ್ರತಿಕ್ರಿಯೆ ನೀಡಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರ ಯಾವತ್ತೂ ಧ್ವನಿ ಎತ್ತುತ್ತಿರುವ ರಾಮನಗರ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು, ‘ಯತೀಂದ್ರ ಅವರ ಮಾತಿನ್ನೂ ಬಲಿತಿಲ್ಲ. ಜತೆಗೆ ಶಕ್ತಿಯೂ ಇಲ್ಲ. ಅವರು ವಿಧಾನಸಭೆ ಸದಸ್ಯರೂ ಅಲ್ಲ. ಅವರು ತಮ್ಮ ಇತಿಮಿತಿ ಅರಿತು ಗೌರವಯುತ ಹೇಳಿಕೆ ನೀಡಬೇಕು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.