ಕಾಂಗ್ರೆಸ್
ನವದೆಹಲಿ: ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನ ಹಾಗೂ 32 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಪ್ರಕ್ರಿಯೆಗೆ ಅಂತಿಮ ರೂಪ ನೀಡಲು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಗುರುವಾರ ಸಂಜೆ ಸುದೀರ್ಘ ಸಭೆ ನಡೆಸಿದರು.
ಮೂವರು ನಾಯಕರು ಸಂಜೆ ಆರರಿಂದ ರಾತ್ರಿ 9 ಗಂಟೆಯವರೆಗೆ ಕಸರತ್ತು ನಡೆಸಿದರು. ಒಮ್ಮತದ ಅಭಿಪ್ರಾಯಕ್ಕೆ ಬರಲು ವಿಫಲರಾದರು. ಇದೇ 16ರಂದು ಸುರ್ಜೇವಾಲಾ ಅವರು ಬೆಂಗಳೂರಿಗೆ ಬರಲಿದ್ದು, ಅಂದು ಮತ್ತೆ ಸಭೆ ನಡೆಯಲಿದೆ.
ಮೊದಲ ಹಂತದಲ್ಲಿ 35 ನಿಗಮ ಮಂಡಳಿಗಳಿಗೆ ಶಾಸಕರನ್ನು ನೇಮಕ ಮಾಡಲಾಗಿದೆ. ಎರಡನೇ ಹಂತದಲ್ಲಿ 40 ನಿಗಮ ಮಂಡಳಿಗಳಿಗೆ ಪಕ್ಷದ ಮುಖಂಡರನ್ನು ನೇಮಿಸಲಾಗಿದೆ. ಉಳಿದ 32 ನಿಗಮ ಮಂಡಳಿಗಳಿಗೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ನೇಮಿಸುವ ಸಂಬಂಧ ಚರ್ಚಿಸಲಾಯಿತು. ನಿಗಮ ಮಂಡಳಿಗಳಿಗೆ ನಿರ್ದೇಶಕರು ಹಾಗೂ ಸದಸ್ಯರ ನೇಮಕ ಆಗಬೇಕಿದೆ. ಸುಮಾರು 695 ಮುಖಂಡರು ಹಾಗೂ ಕಾರ್ಯಕರ್ತರನ್ನು ನೇಮಿಸಲು ಅವಕಾಶ ಇದೆ. ಈ ಮಂಡಳಿಗಳಲ್ಲಿ ವಿವಿಧ ಸಮುದಾಯಗಳಿಗೆ ನೀಡಿರುವ ಅವಕಾಶ, ಯಾವೆಲ್ಲ ಸಮುದಾಯಗಳಿಗೆ ಅವಕಾಶ ಸಿಕ್ಕಿಲ್ಲ ಎಂಬ ಬಗ್ಗೆ ಬೆಳಕು ಚೆಲ್ಲಿದ ಮುಖ್ಯಮಂತ್ರಿ, ಮುಂದಿನ ಹಂತದ ನೇಮಕದ ಸಂದರ್ಭದಲ್ಲಿ ಅವಕಾಶ ವಂಚಿತ ಸಮುದಾಯಗಳಿಗೆ ಆದ್ಯತೆ ನೀಡಬೇಕು ಎಂದರು.
ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳ ನಾಮನಿರ್ದೇಶನದ ವಿಷಯದಲ್ಲಿ ಮೂವರು ನಾಯಕರು ಸಹಮತಕ್ಕೆ ಬರಲಿಲ್ಲ. ವಿವಿಧ ಕ್ಷೇತ್ರಗಳ ನಾಲ್ವರ ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್ ಅನುಮೋದನೆ ಪಡೆಯಲಾಗಿದೆ. ಆದರೆ, ರಾಷ್ಟ್ರೀಯ ನಾಯಕರೊಬ್ಬರ ಹಸ್ತಕ್ಷೇಪದಿಂದ ಈ ಪಟ್ಟಿಗೆ ತಡೆ ಬಿದ್ದಿದೆ. ಈ ನಾಲ್ವರ ಹೆಸರನ್ನೇ ಅಂತಿಮಗೊಳಿಸಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು. ‘ಈ ಪಟ್ಟಿಯಲ್ಲಿ ನನ್ನ ಬೆಂಬಲಿಗರಿಗೆ ಅವಕಾಶ ಸಿಕ್ಕಿಲ್ಲ. ಹಿರಿಯ ಮುಖಂಡ ಬಿ.ಎಲ್.ಶಂಕರ್ ಅಥವಾ ಮುಖಂಡ ವಿನಯ್ ಕಾರ್ತಿಕ್ ಪೈಕಿ ಒಬ್ಬರಿಗೆ ಅವಕಾಶ ಕಲ್ಪಿಸಬೇಕು’ ಎಂದು ಡಿ.ಕೆ. ಶಿವಕುಮಾರ್ ಪಟ್ಟು ಹಿಡಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.