ADVERTISEMENT

ಗೆಲ್ಲುವ ಕುದುರೆಗೆ ‘ಕೈ’ ಹುಡುಕಾಟ

ಜೆಡಿಎಸ್‌–ಕಾಂಗ್ರೆಸ್‌ ಸೀಟು ಹಂಚಿಕೆ ವರಿಷ್ಠರ ತೀರ್ಮಾನಕ್ಕೆ– ವೇಣುಗೋಪಾಲ್‌

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 19:12 IST
Last Updated 2 ಸೆಪ್ಟೆಂಬರ್ 2018, 19:12 IST

ಬೆಂಗಳೂರು: ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆಗೆ ಪಣತೊಟ್ಟಿರುವ ಕಾಂಗ್ರೆಸ್‌, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚಿನ ಸ್ಥಾನಗಳ ನಿರೀಕ್ಷೆಯಲ್ಲಿ ‘ಗೆಲ್ಲುವ ಕುದುರೆಗಳಿಗಾಗಿ’ ಹುಡುಕಾಟ ನಡೆಸಿದೆ.

ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ನೇತೃತ್ವದಲ್ಲಿ ಶನಿವಾರ ಮತ್ತು ಭಾನುವಾರ ಲೋಕಸಭೆ ಕ್ಷೇತ್ರವಾರು ಪಕ್ಷದ ಪ್ರಮುಖರ ಸರಣಿ ಸಭೆಯಲ್ಲಿ, ಚುನಾವಣೆಗೆ ಸಮರೋಪಾದಿಯಲ್ಲಿ ಸಜ್ಜುಗೊಳ್ಳುವ ಜೊತೆಗೆ ಸೂಕ್ತ ಅಭ್ಯರ್ಥಿಯ ಆಯ್ಕೆ ಬಗ್ಗೆಯೂ ಚರ್ಚೆ ನಡೆದಿದೆ.

ಸಭೆಯಲ್ಲಿ ಲೋಕಸಭೆ ಕ್ಷೇತ್ರಗಳ ಸದ್ಯದ ರಾಜಕೀಯ ಸ್ಥಿತಿಗತಿಯನ್ನು ವಿಶ್ಲೇಷಿಸಲಾಗಿದ್ದು, ಅಳೆದು ತೂಗಿ ಅರ್ಹ ಅಭ್ಯರ್ಥಿಗಳಿಗೆ ಮಣೆ ಹಾಕಲು ಒಮ್ಮತಕ್ಕೆ ಬರಲಾಗಿದೆ. ಪಕ್ಷದ ಜಿಲ್ಲಾ ಮುಖಂಡರ ಅಭಿಪ್ರಾಯ ಆಲಿಸಿದ ವೇಣುಗೋಪಾಲ್‌, ಹೈಕಮಾಂಡ್‌ ಅಂತಿಮಗೊಳಿಸಿದ ಅಭ್ಯರ್ಥಿಯ ಬೆನ್ನಿಗೆ ನಿಂತು ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಸಂದೇಶ ರವಾನಿಸಿದ್ದಾರೆ.

ADVERTISEMENT

‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟ ರಾಜ್ಯದ ಎಲ್ಲ 28 ಸ್ಥಾನಗಳನ್ನು ಗೆಲ್ಲಲಿದೆ. ಇದಕ್ಕೆ ಬೇಕಾದ ಕಾರ್ಯತಂತ್ರ ರೂಪಿಸಿದ್ದೇವೆ. ಸೀಟು ಹಂಚಿಕೆ ಬಗ್ಗೆ ರಾಷ್ಟ್ರಿಯ ಮಟ್ಟದ ಸಮಿತಿ ತೀರ್ಮಾನ ಕೈಗೊಳ್ಳಲಿದೆ’ ಎಂದು ವೇಣುಗೋಪಾಲ್‌ ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ಸಮಾವೇಶ: ‘ಚುನಾವಣೆ ಸನ್ನದ್ಧತೆ ಕುರಿತು ಸಮಾಲೋಚನೆ ಸರಣಿ ಸಭೆಗಳನ್ನು ನಡೆಸಿದ್ದೇವೆ. ಕ್ಷೇತ್ರವಾರು ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಕಾರ್ಯಕ್ರಮಗಳ ಪಟ್ಟಿ ಸಿದ್ಧಪಡಿಸಿದ್ದೇವೆ. ಅಕ್ಟೋಬರ್‌ನಲ್ಲಿ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಮಟ್ಟದ ಸಮಾವೇಶ ನಡೆಸಲಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ಕೆಲವು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಯ ವಿರುದ್ಧ ಬಂಡಾಯ ಏಳುವುದನ್ನು ತಪ್ಪಿಸಲು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವಂತೆ ಓಲೈಸಿಕೊಂಡು ಹೋಗುವ ರೀತಿಯಲ್ಲಿ ಕಾರ್ಯತಂತ್ರ ರೂಪಿಸಲು ಸಭೆಯಲ್ಲಿ ಚರ್ಚೆ ನಡೆದಿದೆ.

ಹುಬ್ಬಳ್ಳಿ– ಧಾರವಾಡ ಲೋಕಸಭಾ ಕ್ಷೇತ್ರದಿಂದ ಹಿಂದುಳಿದ ಸಮುದಾಯದವರಿಗೆ ಟಿಕೆಟ್‌ ನೀಡಬೇಕು ಎಂದು ಧಾರವಾಡ ಜಿಲ್ಲೆಯ ಕೆಲವು ನಾಯಕರು ಒತ್ತಾಯಿಸಿದರು. 2014ರ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವ ಅನುಭವಿಸಿದ ಲಿಂಗಾಯತ ಸಮುದಾಯದ ವಿನಯ ಕುಲಕರ್ಣಿ ಅವರನ್ನೇ ಮತ್ತೆ ಕಣಕ್ಕಿಳಿಸುವಂತೆ ಕೆಲವರು ಆಗ್ರಹಿಸಿದರೆ, ಮತ್ತೊಬ್ಬ ಮುಖಂಡ ಎಸ್‌.ಆರ್‌. ಮೋರೆ ಅವರನ್ನು ಈ ಬಾರಿಗೆ
ಪರಿಗಣಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ಚಿತ್ರದುರ್ಗ ಕ್ಷೇತ್ರದ ಹಾಲಿ ಸಂಸದ ಎಂ. ಚಂದ್ರಪ್ಪ ಬದಲು ತಮಗೆ ಟಿಕೆಟ್‌ ನೀಡಬೇಕೆಂದು ಮುಖಂಡ ಶಿವಮೂರ್ತಿ ನಾಯಕ್‌ ಅವರು ಬೆಂಬಲಿಗರ ಜೊತೆ ಕೆಪಿಸಿಸಿ ಕಚೇರಿ ಎದುರು ಭಾನುವಾರ ಪ್ರತಿಭಟನೆ ನಡೆಸಿದರು. ಸಭೆಯ ಸಂದರ್ಭದಲ್ಲೇ ನಡೆದ ಈ ಪ್ರತಿಭಟನೆ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಗೊತ್ತಾಗಿದೆ.

ಬಳಿಕ ಮಾತನಾಡಿದ ಶಿವಮೂರ್ತಿ, ‘ನಾನು ಸ್ಪರ್ಧಿಸಲು ಬಯಸಿದ್ದೇನೆ. ನನಗೇ ಟಿಕೆಟ್ ನೀಡಬೇಕೆಂದು ಜಿಲ್ಲೆಯ ಬುಡಕಟ್ಟು ಜನ, ಕೃಷಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ. ಟಿಕೆಟ್‌ ನೀಡದಿದ್ದರೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಕೋರಿಕೆ ಸಲ್ಲಿಸುತ್ತೇನೆ’ ಎಂದರು.

ಹಾವೇರಿ ಜಿಲ್ಲಾ ಮುಖಂಡರ ಸಭೆಯ ಬಳಿಕ ಎಚ್.ಕೆ. ಪಾಟೀಲ, ‘ಜಿ.ಎಸ್ ಪಾಟೀಲ ನೇತೃತ್ವದಲ್ಲಿ ಶೀಘ್ರದಲ್ಲೇ ಸಭೆ ಸೇರಿ 15 ದಿನಗಳ ಒಳಗೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ’ ಎಂದರು.

‘2019ರ ಚುನಾವಣೆಗೆ ಜಿಲ್ಲಾವಾರು ನಾಯಕರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್‌ಗೆ ವರದಿ ಸಲ್ಲಿಸಲಾಗುವುದು. ಯಾರು ಅಭ್ಯರ್ಥಿಯಾಗಬೇಕು ಎಂಬುದನ್ನು ಹೈಕಮಾಂಡ್‌ ನಿರ್ಧರಿಸಲಿದೆ’ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.