ಬೆಂಗಳೂರು: ಅಕ್ರಮವಾಗಿ ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ನಡೆಸಿದ ಪ್ರಕರಣದಲ್ಲಿ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರನ್ನು ನಗರದ 35ನೇ ಸಿಸಿಎಚ್ ನ್ಯಾಯಾಲಯವು ಇದೇ 28ರವರೆಗೆ ಜಾರಿ ನಿರ್ದೇಶನಾಲಯದ (ಇ.ಡಿ) ಕಸ್ಟಡಿಗೆ ನೀಡಿದೆ.
ಬೆಟ್ಟಿಂಗ್ ಸಂಬಂಧ ಹಣ ಅಕ್ರಮ ವರ್ಗಾವಣೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ವೀರೇಂದ್ರ ಮತ್ತು ಅವರ ಕ್ಯಾಸಿನೊಗಳ ವಿರುದ್ಧ ಇ.ಡಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದರು. ಬೆಂಗಳೂರು, ಚಿತ್ರದುರ್ಗ, ಹುಬ್ಬಳ್ಳಿ, ಗೋವಾ, ಮುಂಬೈ, ಜೋಧಪುರ, ಗ್ಯಾಂಗ್ಟಕ್ ಸೇರಿ ದೇಶದ 31 ಸ್ಥಳಗಳಲ್ಲಿ ಶುಕ್ರವಾರ ದಾಳಿ ನಡೆಸಿದ್ದರು.
ಸಿಕ್ಕಿಂನ ಗ್ಯಾಂಗ್ಟಕ್‌ನಲ್ಲಿ ಶನಿವಾರ ಬೆಳಿಗ್ಗೆ ವೀರೇಂದ್ರ ಅವರನ್ನು ಬಂಧಿಸಿದ್ದ ಇ.ಡಿ ಅಧಿಕಾರಿಗಳು, ಅಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು. ಟ್ರಾನ್ಸಿಟ್ ರಿಮ್ಯಾಂಡ್ ಪಡೆದು, ಅಲ್ಲಿಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ತಡರಾತ್ರಿ ಕರೆತಂದಿದ್ದರು.
ವಿಮಾನ ನಿಲ್ದಾಣದಿಂದ ನೇರವಾಗಿ, ಶಾಂತಿನಗರದಲ್ಲಿರುವ ಇ.ಡಿ ಕಚೇರಿಗೆ ಕರೆತರಲಾಗಿತ್ತು. ಅಲ್ಲಿಯೇ ನಾಲ್ಕು ತಾಸು ವಿಚಾರಣೆ ನಡೆಸಿ, ನಗರದ 35ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶ ಸೈಯದ್ ಬಿ. ರೆಹಮಾನ್ ಅವರ ಎದುರು ಹಾಜರುಪಡಿಸಲಾಯಿತು. ಆರೋಪಿಯನ್ನು 14 ದಿನ ಕಸ್ಟಡಿಗೆ ನೀಡಬೇಕು ಎಂದು ಇ.ಡಿ ಪರ ವಕೀಲರು ಮನವಿ ಮಾಡಿದರು. ಆದರೆ, ಐದು ದಿನಗಳವರೆಗೆ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶಿಸಿದರು ಎಂದು ಮೂಲಗಳು ಮಾಹಿತಿ ನೀಡಿವೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಸಿನೊ ಉದ್ಯಮಿ ಸಮುಂದರ್ ಸಿಂಗ್ ಅವರ ವಿಚಾರಣೆಯನ್ನು ಶಾಂತಿನಗರದ ಕಚೇರಿಯಲ್ಲಿ ನಡೆಸಲಾಗುತ್ತಿದೆ. ಅವರನ್ನೂ ಶೀಘ್ರವೇ ನ್ಯಾಯಾಲಯಕ್ಕೆ ಹಾಜರುಪಡಿಸಿ, ಕಸ್ಟಡಿಗೆ ಪಡೆಯಲಾಗುತ್ತದೆ ಎಂದು ಇ.ಡಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.