ADVERTISEMENT

ಪಾದಯಾತ್ರೆಯಿಂದ ನೀರು ಬರುವುದಿಲ್ಲ: ತೇಜಸ್ವಿ ಸೂರ್ಯ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2022, 16:40 IST
Last Updated 19 ಫೆಬ್ರುವರಿ 2022, 16:40 IST
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ   

ಬೆಂಗಳೂರು: ‘ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆಯಿಂದ ಕಾವೇರಿ ನದಿಯ ನೀರು ಬೆಂಗಳೂರಿಗೆ ಬರುವುದಿಲ್ಲ’ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಪಾದಯಾತ್ರೆಯಿಂದ ನೀರು ಬರುವುದೇ ಆಗಿದ್ದರೆ ಎಲ್ಲರೂ ಪಾದಯಾತ್ರೆ ಮಾಡುತ್ತಿದ್ದರು. ಬೆಂಗಳೂರಿಗೆ ಕಾವೇರಿ ನೀರು ಬಂದಿರುವುದು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಬಿಜೆಪಿಯ ಪ್ರಯತ್ನಗಳಿಂದ. ಕಾಂಗ್ರೆಸ್‌ ಪಕ್ಷದ ಪಾದಯಾತ್ರೆಯಿಂದ ಅಲ್ಲ’ ಎಂದರು.

‘ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡುವ ವಿಷಯದಲ್ಲಿ ಬಿಜೆಪಿಗೆ ಕಾಂಗ್ರೆಸ್‌ ಪಕ್ಷದ ಸಲಹೆ ಬೇಕಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಏನು ಕೆಲಸ ಆಗಿದೆ ಎಂಬುದನ್ನು ಆ ಪಕ್ಷದ ನಾಯಕರು ಬಹಿರಂಗವಾಗಿ ಹೇಳಲಿ’ ಎಂದು ಸವಾಲು ಹಾಕಿದರು.

ADVERTISEMENT

‘ಬೆಂಗಳೂರಿನ ಸಂಸದರು ನಗರಕ್ಕಾಗಿ ಏನು ತಂದಿದ್ದಾರೆ ಎಂದು ಕೆಲವು ಪ್ರಶ್ನಿಸುತ್ತಿದ್ದಾರೆ. ಹಿಂದಿನ ಒಂದು ವರ್ಷದ ಅವಧಿಯಲ್ಲಿ ಬೆಂಗಳೂರಿನಲ್ಲಿ 40 ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ 75 ಜನೌಷಧಿ ಕೇಂದ್ರಗಳಿವೆ. ಇದರಿಂದ ಲಕ್ಷಾಂತರ ಜನರು ಕಡಿಮೆ ದರದಲ್ಲಿ ಔಷಧಿ ಖರೀದಿಸಲು ಸಾಧ್ಯವಾಗಿದೆ’ ಎಂದರು.

‘ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಆದರೆ, ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯಲ್ಲಿ (ಇಪಿಎಫ್‌ಒ) ಒಂದು ವರ್ಷದ ಅವಧಿಯಲ್ಲಿ 13 ಲಕ್ಷ ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ 1.68 ಲಕ್ಷ ಮಂದಿ ನೋಂದಣಿ ಮಾಡಿಸಿದ್ದಾರೆ. ನವೋದ್ಯಮಗಳಿಗೂ ಕೇಂದ್ರ ಸರ್ಕಾರದಿಂದ ಹೆಚ್ಚಿನ ಉತ್ತೇಜನ ದೊರಕಿದೆ’ ಎಂದು ತೇಜಸ್ವಿ ಹೇಳಿದರು.

‘ಕೇಂದ್ರ ಸರ್ಕಾರದ ಪ್ರಸಕ್ತ ವರ್ಷದ ಬಜೆಟ್‌ ಮುಂದಿನ 25 ವರ್ಷಗಳ ಅವಧಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡಿದೆ. ಮೂಲಸೌಕರ್ಯ ಅಭಿವೃದ್ಧಿಗಾಗಿಯೇ ₹ 25 ಲಕ್ಷ ಕೋಟಿ ಮೀಸಲಿಡಲಾಗಿದೆ. ಈ ಬಜೆಟ್‌ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಜನೆಗೆ ಕಾರಣವಾಗಲಿದೆ’ ಎಂದರು.

‘ಕಾಂಗ್ರೆಸ್‌ ಜವಾಬ್ದಾರಿ ಮರೆತಿದೆ’

‘ಕಾಂಗ್ರೆಸ್‌ ಪಕ್ಷವು ವಿರೋಧ ಪಕ್ಷವಾಗಿ ತನ್ನ ಜವಾಬ್ದಾರಿ ಮರೆತಿದೆ. ಯಾರಿಗೂ ಉಪಯೋಗವಿಲ್ಲದ ವಿಷಯ ಮುಂದಿಟ್ಟುಕೊಂಡು ವಿಧಾನಮಂಡಲ ಕಲಾಪಕ್ಕೆ ಅಡ್ಡಿಪಡಿಸಿ, ಜನರ ತೆರಿಗೆ ಹಣವನ್ನು ವ್ಯರ್ಥ ಮಾಡುತ್ತಿದೆ’ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

‘ಹಿಜಾಬ್‌– ಕೇಸರಿ ಶಾಲು ವಿವಾದ ಹೈಕೋರ್ಟ್‌ನಲ್ಲಿದೆ. ಈ ಬಗ್ಗೆ ನಾನು ಮಾತನಾಡುವುದು ಸರಿಯಲ್ಲ. ನ್ಯಾಯಾಲಯದ ತೀರ್ಪು ಬಂದ ಬಳಿಕ ಪ್ರತಿಕ್ರಿಯಿಸುವೆ’ ಎಂದರು.

‘ಸಚಿವ ಕೆ.ಎಸ್‌. ಈಶ್ವರಪ್ಪ ಅವರ ಹೇಳಿಕೆ ಕುರಿತು ಪಕ್ಷದ ನಾಯಕರು ಈಗಾಗಲೇ ಮಾತನಾಡಿದ್ದಾರೆ. ಅದು ಈಶ್ವರಪ್ಪನವರ ವೈಯಕ್ತಿಕ ಹೇಳಿಕೆ. ಆ ಬಗ್ಗೆ ನಾನು ಮಾತನಾಡುವಂತಹದ್ದು ಏನೂ ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.