ADVERTISEMENT

ಕಾಂಗ್ರೆಸ್‌ ಪಕ್ಷದಲ್ಲೀಗ ಔತಣ ಕೂಟದ ರಾಜಕೀಯ: CM, DCM ಬಣ ಗುದ್ದಾಟ ಜೋರು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 0:49 IST
Last Updated 13 ಡಿಸೆಂಬರ್ 2025, 0:49 IST
<div class="paragraphs"><p>ಸಿಎಂ, ಡಿಸಿಎಂ</p></div>

ಸಿಎಂ, ಡಿಸಿಎಂ

   

ಸುವರ್ಣ ವಿಧಾನಸೌಧ (ಬೆಳಗಾವಿ): ಆಡಳಿತಾರೂಢ ಕಾಂಗ್ರೆಸ್‌ ಪಕ್ಷದಲ್ಲೀಗ ಔತಣ ಕೂಟದ ರಾಜಕೀಯ ಗರಿಗೆದರಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬಣಗಳ ಚಟುವಟಿಕೆ ಜೋರಾಗಿದ್ದು, ನಾಯಕತ್ವ ಬದಲಾವಣೆಯ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ತಮ್ಮ ನಾಯಕರ ಪರ ಹೇಳಿಕೆಗಳು, ಎದುರಾಳಿ ಬಣದವರ ಮೇಲೆ ಟೀಕಾಪ್ರಹಾರಗಳೂ ಶುರುವಾಗಿವೆ.

ಶಾಸಕಾಂಗ ಪಕ್ಷ ಸಭೆಯಲ್ಲಿ ಎಐಸಿಸಿ ವೀಕ್ಷಕರ ಮುಂದೆಯೇ ಮುಖ್ಯಮಂತ್ರಿ ಆಯ್ಕೆ ಮಾಡಲಾಗಿದೆ. ಆಗ ಯಾವುದೇ ಗಡುವು ನೀಡಿಲ್ಲ. ಸದ್ಯ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದು, ಕುರ್ಚಿ ಖಾಲಿ ಇಲ್ಲ
ಕೆ.ಜೆ. ಜಾರ್ಜ್‌,ಇಂಧನ ಸಚಿವ
ಸಿದ್ದರಾಮಯ್ಯ ಅವರು ಜವಾಬ್ದಾರಿಯಿಂದ ಮಾತನಾಡುತ್ತಿದ್ದು, ಗೌರವಯುತವಾಗಿ ನಡೆದುಕೊಳ್ಳುತ್ತಿದ್ದಾರೆ. ಅದು ನಮಗೂ ಮಾರ್ಗದರ್ಶನವಾಗಿದ್ದು, ಅದೇ ನಮಗೆ ಅಂತಿಮ
ದಿನೇಶ್‌ ಗುಂಡೂರಾವ್, ಆರೋಗ್ಯ ಸಚಿವ

ಔತಣಕೂಟಕ್ಕೆ ನಾನೇನು ಮಾಡಲಿ’

ADVERTISEMENT

‘ಔತಣಕೂಟ ಸಭೆ ಮಾಡಿದರೆ ಅದಕ್ಕೆ ನಾನೇನು ಮಾಡಲಿ. ಅವರು ನಿತ್ಯ ಎಲ್ಲ ಶಾಸಕರು, ಸಚಿವರನ್ನು ಕರೆದು ಸಭೆ ಮಾಡುತ್ತಿದ್ದಾರೆ. ಅದಕ್ಕೆ ನಾನೇನು ಮಾಡಲಿ’ ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಪ್ರಶ್ನಿಸಿದರು.

‌ಶಿವಕುಮಾರ್ ಬಣದ ಸಚಿವರು, ಶಾಸಕರು ಔತಣ ಕೂಟ ಸಭೆ ನಡೆಸಿರುವ ಬಗ್ಗೆ ಸುದ್ದಿಗಾರರು ಕೇಳಿದಾಗ ಅವರು ಈ ರೀತಿ ಪ್ರತಿಕ್ರಿಯಿಸಿದರು.

‘ನಾನು ಏನು ಹೇಳಬೇಕೊ ಅದನ್ನು ಹೇಳಿ ಆಗಿದೆ. ಬೇರೆಯವರು ಏನು ಹೇಳುತ್ತಾರೊ ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದೂ ಹೇಳಿದರು.

‘ಅಧಿವೇಶನ ಮುಗಿದ ತಕ್ಷಣ ಡಿಕೆಶಿ ಸಿ.ಎಂ’

‘ಅಧಿವೇಶನ ಮುಗಿದ ತಕ್ಷಣ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ’ ಎಂದು ರಾಮನಗರದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

‘ನನ್ನ ಹಣೆಯಲ್ಲಿ ಬರೆದಿದ್ದಕ್ಕೆ ನಾನು ಶಾಸಕ ಆಗಿಲ್ಲವೇ? ಹಾಗೆಯೇ ಶಿವಕುಮಾರ್ ಅವರ ಹಣೆಯಲ್ಲಿ ಬರೆದಿದೆ. ಅವರು ಮುಖ್ಯಮಂತ್ರಿ ಆಗುತ್ತಾರೆ. ಗುರುವಾರ ನಾವು 55 ಜನ ಶಾಸಕರು ಊಟಕ್ಕೆ ಸೇರಿದ್ದೆವು. ಊಟ ಮಾಡಿದ್ದೇವೆ ಅಷ್ಟೇ’ ಎಂದರು.

‘ಅವರು ಕಷ್ಟಪಟ್ಟಿದ್ದಕ್ಕೆ ಅಧಿವೇಶನ ಮುಗಿದ ಬಳಿಕ ಆದಷ್ಟು ಬೇಗ ಆ ಫಲ ಸಿಗುತ್ತದೆ. ನಂಬರ್ ಮುಖ್ಯ ಅಲ್ಲ, ಹೈಕಮಾಂಡ್‌ನ ನಿರ್ದೇಶನ ಮುಖ್ಯ. ಹೈಕಮಾಂಡ್ ಹೇಳಿದರೆ ಯಾರು ಯಾಕೆ ಕೇಳಲ್ಲ? ಸಂಖ್ಯಾಬಲ ಮುಖ್ಯ ಅಲ್ಲ’ ಎಂದು ಹೇಳಿದರು.

‘ಡಿಕೆಶಿ ಯಾಕೆ ಸಿ.ಎಂ ಆಗಬಾರದು’

‘ಶಿವಕುಮಾರ್ ಅವರು ಎಂಟು ಬಾರಿ ಶಾಸಕರಾಗಿ, ಹಲವು ಇಲಾಖೆಗಳ ಮಂತ್ರಿಯಾಗಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ. ಹೀಗಾಗಿ ಅವರಿಗೂ ಮುಖ್ಯಮಂತ್ರಿಯಾಗುವ ಅವಕಾಶ ಸಿಗಬೇಕು’ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಎಸ್.ಟಿ. ಸೋಮಶೇಖರ್ ಹೇಳಿದರು.

ಗುರುವಾರ ನಡೆದ ಔತಣ ಕೂಟದಲ್ಲಿ ಭಾಗಿಯಾಗಿದ್ದ ಸೋಮಶೇಖರ್ ಅವರು, ‘ಶಿವಕುಮಾರ್ ಆಪ್ತರೊಂದಿಗೆ ನಡೆದ ಭೋಜನಕೂಟದಲ್ಲಿ ರಾಜಕೀಯ ಚರ್ಚೆ ನಡೆದಿಲ್ಲ’ ಎಂದರು.

‘ಅತಂತ್ರರಿಗೆ ಮಾತನಾಡುವ ನೈತಿಕತೆ ಇಲ್ಲ’

‘ಅನರ್ಹರಾಗಿರುವ ಶಾಸಕರಿಗೆ ನಮ್ಮ ಪಕ್ಷದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ನಾನು ಇದ್ದೇನೆ ಎಂದು ತೋರಿಸಿಕೊಳ್ಳುವುದಕ್ಕೆ ಮಾತನಾಡುತ್ತಾರೆ’ ಎಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದರು.

ಎಸ್.ಟಿ. ಸೋಮಶೇಖರ್ ಮಾತಿಗೆ ತಿರುಗೇಟು ನೀಡಿದ ಅವರು, ‘ಬಿಜೆಪಿಯಿಂದ ಉಚ್ಚಾಟಿತರಾಗಿರುವ ಸೋಮಶೇಖರ್‌ ಸ್ವತಂತ್ರರಾಗಿದ್ದು, ನಮ್ಮ ಪಕ್ಷಕ್ಕೆ ಸೇರುವುದಕ್ಕೆ ಆಗುವುದಿಲ್ಲ. ಅವರು ಅಲ್ಲೂ ಇಲ್ಲ ಇಲ್ಲೂ ಇಲ್ಲ ಅತಂತ್ರರು’ ಎಂದರು.

ಡಿಕೆಶಿ ಮುಖ್ಯಮಂತ್ರಿ ಆಗುತ್ತಾರೆ: ಉದಯ ಕದಲೂರು

‘ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು, ಆಗುತ್ತಾರೆ. ಯಾವುದೇ ಕ್ಷಣದಲ್ಲಾದರೂ ಆಗಬಹುದು’ ಎಂದು ಮದ್ದೂರು ಶಾಸಕ ಉದಯ ಕದಲೂರು ಹೇಳಿದರು.

ಔತಣಕೂಟ ಸಭೆಯಲ್ಲಿ ಭಾಗವಹಿಸಿದ್ದ ಅವರು, ‘ನಾವೆಲ್ಲಾ ಊರು ಬಿಟ್ಟು ಬಂದಿದ್ದೇವೆ, ಅದಕ್ಕೆ ಔತಣಕ್ಕೆ ಸೇರಿದ್ದೆವು. ಅದರಲ್ಲಿ ತಪ್ಪಿಲ್ಲ' ಎಂದರು.

‘ಯತೀಂದ್ರ ಹೇಳಿಕೆಗಳಿಗೆ ಮಹತ್ವ ಕೊಡುವ ಅಗತ್ಯವಿಲ್ಲ. ಡಿ.ಕೆ. ಶಿವಕುಮಾರ್ ಜೊತೆ ಎಲ್ಲ 140 ಶಾಸಕರು ಇದ್ದಾರೆ. ಎಲ್ಲರಿಗೂ ಬಿ ಫಾರಂ ಕೊಟ್ಟವರು ಶಿವಕುಮಾರ್’ ಎಂದರು.

‘ನಾಯಕತ್ವದ ಕುರಿತು ಹೇಳಿಕೆ ನೀಡದಂತೆ ಯಾರು ಹೇಳಿಲ್ಲ, ಈ ಬಗ್ಗೆ ಹೈಕಮಾಂಡ್ ಚರ್ಚೆ ಮಾಡಲಿದೆ’ ಎಂದೂ ಉದಯ್‌ ಹೇಳಿದರು.

ಎಂಎಲ್‌ಸಿ ಮಾತನಾಡಿದ್ದಕ್ಕೆ ಮಹತ್ವ ಇಲ್ಲ: ಶಿವಗಂಗಾ

‘ನಾನು ಶಾಸಕ, ನನಗೆ ವೋಟ್‌ ಇದೆ. ಶಾಸಕರು ಮಾತನಾಡಿದರೆ ಮಾತ್ರ ಮಹತ್ವ ಕೊಡಿ. ಎಂಎಲ್‌ಸಿ (ವಿಧಾನಪರಿಷತ್ ಸದಸ್ಯ) ಮಾತನಾಡಿದ್ದಕ್ಕೆ ಮಹತ್ವವನ್ನೇ ಕೊಡಬೇಡಿ’ ಎಂದು ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಅವರು ಯತೀಂದ್ರ ಅವರನ್ನು ಉದ್ದೇಶಿಸಿ ಹೇಳಿದರು.

‘ಯತೀಂದ್ರ ಅವರಿಗೆ ನಮ್ಮ ಹೈಕಮಾಂಡ್ ಹೇಳಿದೆಯಾ? ಜೆ.ಎಚ್. ಪಟೇಲ್ ನನ್ನ ದೊಡ್ಡಪ್ಪ. ನಾನೂ ಮುಖ್ಯಮಂತ್ರಿಯಾಗಿದ್ದವರ ಮಗನೇ. ಹಾಗಂತ ನಾನು ಹೇಳಿಬಿಟ್ಟರೆ ಎಲ್ಲವೂ ನಡೆಯುತ್ತದೆಯೇ’ ಎಂದು ಪ್ರಶ್ನಿಸಿದರು.

‘ಶಿವಕುಮಾರ್ ಮುಖ್ಯಮಂತ್ರಿ ಆಗುವ ಸಮಯ ಬರುತ್ತದೆ. ಡಿಸೆಂಬರ್ ಮುಗಿಯಲಿ, ರಕ್ತದಲ್ಲಿ ಬರೆದುಕೊಟ್ಟ ಬಗ್ಗೆ ಹೇಳುತ್ತೇನೆ. ರಕ್ತ ಇದೆಯಾ, ಒಣಗಿದೆಯಾ ಅಂತ ಜನವರಿಯಲ್ಲಿ ಮಾತನಾಡುತ್ತೇನೆ’ ಎಂದು ಹೇಳಿದರು.

ವರಿಷ್ಠರಿಗೆ ಮಾಹಿತಿ ಕೊಡುವೆ: ಬೇಳೂರು

‘ನಾನು ದೆಹಲಿಗೆ ಹೋಗಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಎಲ್ಲ ಮಾಹಿತಿ ನೀಡುತ್ತೇನೆ’ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

‘ಔತಣಕೂಟ ಸಭೆ ನಡೆಸುವುದರಿಂದ ವಿರೋಧ ಪಕ್ಷದವರಿಗೆ ನಾವು ಆಹಾರ ಆಗುತ್ತಿದ್ದೇವೆ. ಅಧಿವೇಶನ ನಡೆಯುತ್ತಿರುವಾಗ, ಯಾರೂ ಹೇಳಿಕೆಗಳನ್ನು ಕೊಡಬಾರದು. ಯಾರು ಯಾವುದೇ ಹೇಳಿಕೆಗಳನ್ನು ನೀಡಿದರೂ ಸಚಿವರಾಗಲು ಸಾಧ್ಯ ಇಲ್ಲ. ಮುಖ್ಯಮಂತ್ರಿ ಮಾಡಲು ಸಾಧ್ಯವಿಲ್ಲ’ ಎಂದರು.

ಪಾರ್ಟಿ ಮಾಡಲು ಬಂದಿದ್ದೀರಾ: ಕಿಡಿ

‘ಕಾಂಗ್ರೆಸ್ ನಾಯಕರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಇಲ್ಲಿಯೂ ‘ಡಿನ್ನರ್ ಪಾರ್ಟಿ’ ಮುಂದುವರಿಸಿರುವುದು ನಾಡಿನ ಜನತೆ ಮತ್ತು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ನೀವಿಲ್ಲಿ ಅಧಿವೇಶನಕ್ಕೆ ಬಂದಿದ್ದೀರಾ, ಪಾರ್ಟಿ ಮಾಡಲು ಬಂದಿದ್ದೀರಾ?’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿ ಕಾರಿದರು.

‘ನೀವೇನೂ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಲ್ಲ. ಇಡೀ ರಾಜ್ಯದ ಮುಖ್ಯಮಂತ್ರಿ. ಇಷ್ಟೊಂದು ಗೊಂದಲ ಇಟ್ಟುಕೊಂಡು ಕಾಟಾಚಾರಕ್ಕೆ ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದು ಬೇಡ. ಅಧಿವೇಶನ‌ ಮುಂದೂಡಿ ಎಂದು ಸಲಹೆ ನೀಡಿದ್ದೆ. ಇವರು ಜನಾಧಿವೇಶನವನ್ನು ತಮ್ಮ ಕುರ್ಚಿ ಕಾಪಾಡುವ ಅಧಿವೇಶನ ಮಾಡಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.

‘ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಕಸರತ್ತು ಮಾಡುತ್ತಿದ್ದಾರೆ. ಶಿವಕುಮಾರ್‌ ತಂಡವು ಸಿದ್ದರಾಮಯ್ಯ ಅವರನ್ನು‌ ಕುರ್ಚಿಯಿಂದ ಹೇಗೆ ಬೀಳಿಸಬೇಕು ಎಂದು ತಂತ್ರಗಾರಿಕೆ ರೂಪಿಸಲು ಸಭೆ ಮಾಡುತ್ತಿದೆ. ಆಡಳಿತ ಯಂತ್ರ ಕುಸಿದು ಬಿದ್ದಿದೆ’ ಎಂದು ವಿಜಯೇಂದ್ರ ಆಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.