ADVERTISEMENT

ಸಂಸದ ತೇಜಸ್ವಿ ಸೂರ್ಯಗೆ 10 ಸೆಟ್‌ ದೋಸೆ ಕಳುಹಿಸಿದ ಕಾಂಗ್ರೆಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಸೆಪ್ಟೆಂಬರ್ 2022, 9:39 IST
Last Updated 11 ಸೆಪ್ಟೆಂಬರ್ 2022, 9:39 IST
 ಒಳಚಿತ್ರದಲ್ಲಿ ತೇಜಸ್ವಿ ಸೂರ್ಯ
ಒಳಚಿತ್ರದಲ್ಲಿ ತೇಜಸ್ವಿ ಸೂರ್ಯ   

ಬೆಂಗಳೂರು ದಕ್ಷಿಣ ಕ್ಷೇತ್ರದಸಂಸದ ತೇಜಸ್ವಿ ಸೂರ್ಯ ಅವರು, 'ಇನ್‌ಸ್ಟಾಗ್ರಾಂನಲ್ಲಿ ದೋಸೆ ಚಿತ್ರ ನೋಡಿ ಟೆಂಪ್ಟ್‌ ಆಗಿ ದೋಸೆ ತಿನ್ನಲು ಬಂದಿದ್ದೇನೆ' ಎಂದು ಹೇಳುತ್ತಾ ಪದ್ಮನಾಭ ನಗರದ ಹೋಟೆಲ್‌ವೊಂದರಲ್ಲಿ ದೋಸೆ ಸವಿಯುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ರಾಜಧಾನಿ ಬೆಂಗಳೂರಿನಲ್ಲಿ ಕಳೆದ 51 ವರ್ಷಗಳಲ್ಲೇ ದಾಖಲೆ ಪ್ರಮಾಣದ ಮಳೆ ಸುರಿದು, ಜನರು ಸಂಕಷ್ಟಕ್ಕೆ ಸಿಲುಕಿದ್ದ ಹೊತ್ತಿನಲ್ಲಿ ವೈರಲ್‌ ಆದ ಆ ವಿಡಿಯೊವಿಚಾರವಾಗಿ ರಾಜಕೀಯ ಪಕ್ಷಗಳ ನಾಯಕರು ಹಾಗೂ ನಾಗರಿಕರು ಸೂರ್ಯ ಅವರನ್ನು ಕಟುವಾಗಿ ಟೀಕಿಸಿದ್ದರು.

ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಕಾಂಗ್ರೆಸ್‌ ಕಾರ್ಯಕರ್ತರು,ಜನರ ಸಂಕಷ್ಟಕ್ಕೆ ಸ್ಪಂದಿಸದ ಸಂಸದರ ನಡೆಯನ್ನು ಖಂಡಿಸಿ, ನಗರದ ವಿವಿಧ ರೆಸ್ಟೋರೆಂಟ್‌ಗಳಲ್ಲಿ ತಯಾರಿಸಲಾದ 10 ಸೆಟ್‌ ದೋಸೆಗಳನ್ನು ಅವರ ಕಚೇರಿಗೆ ಕಳುಹಿಸಿಕೊಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.

ಈ ವಿಡಿಯೊ ಹಂಚಿಕೊಂಡಿರುವ ಕಾಂಗ್ರೆಸ್‌ ಕಾರ್ಯಕರ್ತರೊಬ್ಬರು, 'ತೇಜಸ್ವಿ ಸೂರ್ಯ ಅವರು ಕರ್ತವ್ಯ ನಿರ್ವಹಣೆಯಲ್ಲಿ ತೋರಿದ ಬೇಜವಾಬ್ದಾರಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದೇವೆ. ಅವರಿಗೆ ಬೆಂಗಳೂರಿನ ಅತ್ಯುತ್ತಮ ಹೋಟೆಲ್‌ಗಳ ವಿವಿಧ ರೀತಿಯ 10 ದೋಸೆಗಳನ್ನು ಕಳುಹಿಸಿಕೊಟ್ಟಿದ್ದೇವೆ. ಅವರು ಉಚಿತವಾಗಿ ಈ ದೋಸೆಗಳನ್ನು ಪಡೆಯಲಿ. ಹೋಟೆಲ್‌ ಮಾರ್ಕೆಟಿಂಗ್‌ ಬಗ್ಗೆ ಹಾಗೂ ತಮ್ಮ ಕ್ಷೇತ್ರದ ಜನರಿಗಾಗಿ ಕೆಲಸ ಮಾಡುವ ಬಗ್ಗೆ ಚಿಂತಿಸದಿರಲಿ' ಎಂದು ಚಾಟಿ ಬೀಸಿದ್ದಾರೆ.

ಕಳೆದ ವಾರ ವೈರಲ್‌ ಆಗಿದ್ದ ವಿಡಿಯೊದಲ್ಲಿತೇಜಸ್ವಿ ಸೂರ್ಯ ಅವರು, 'ಪದ್ಮನಾಭ ನಗರದ ಸಾತ್ವಿ ಕಿಚನ್‌ಗೆ ಬಂದಿದ್ದೆ. ಇನ್‌ಸ್ಟಾಗ್ರಾಂನಲ್ಲಿ ದೋಸೆ ಫೋಟೊ ನೋಡಿ ಬಹಳ ಟೆಂಪ್ಟ್‌ಆಗಿ ಇಲ್ಲಿಗೆ ಬಂದಿದ್ದು. ತುಂಬಾ ಚೆನ್ನಾಗಿದೆ ಬೆಣ್ಣೆ ಮಸಾಲೆ. ನೀವೂ ಬನ್ನಿ. ತಿಂದಾಗಲೇನೆ ಅದರ ಆಸ್ವಾದನೆ ನಿಮಗೆ ಗೊತ್ತಾಗುವುದು' ಎಂದು ಜನರನ್ನು ಆಹ್ವಾನಿಸಿದ್ದರು.

ಹಾಗೆಯೇ, ಮನೆಯಲ್ಲಿ ಮಾಡುವ ಉಪ್ಪಿಟ್ಟನ್ನು ನಾವು ತಿನ್ನುತ್ತಿರಲಿಲ್ಲ. ಆದರೆ, ಇಲ್ಲಿ ಉಪ್ಪಿಟ್ಟು ಬಹಳ ಚೆನ್ನಾಗಿದೆ. ಅದನ್ನೂ ಟ್ರೈ ಮಾಡಿ ಎಂದು ಸಲಹೆ ನೀಡಿದ್ದರು.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಕಾಂಗ್ರೆಸ್, ‘ಮತಿ (ಬುದ್ಧಿ) ದೋಷ ಇರುವವರನ್ನು ಆಯ್ಕೆ ಮಾಡಿದರೆ, ಜನ ಮುಳುಗುವಾಗ ‘ದೋಸೆ’ ತಿನ್ನಲು ಹೋಗುತ್ತಾರೆ! ಬೆಂಗಳೂರು ಮುಳುಗಿದೆ, ಜನತೆ ಪರದಾಡುತ್ತಿದ್ದಾರೆ. ಆದರೆ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರಿಗೆ ದೋಸೆ ತಿನ್ನುವ ಟೆಂಪ್ಟ್ ಆಗಿದ್ಯಂತೆ! ಮಕ್ಕಳಾಟ ಆಡಿಕೊಂಡಿದ್ದ ಅಪ್ರಬುದ್ಧರನ್ನು ಸಂಸದರನ್ನಾಗಿಸಿದರೆ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ’ ಎಂದು ವಾಗ್ದಾಳಿ ನಡೆಸಿತ್ತು.

ಕಾಂಗ್ರೆಸ್‌ ವಕ್ತಾರೆ ಲಾವಣ್ಯ ಬಲ್ಲಾಳ್‌ ಅವರು,ಬೆಂಗಳೂರು ಮುಳುಗುತ್ತಿರುವ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಒಳ್ಳೆಯ ಉಪಹಾರ ಸೇವಿಸುತ್ತಿದ್ದಾರೆ. ಅವರು (ಸೂರ್ಯ) ಯಾವುದಾದರು ಒಂದು ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.