ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು: ‘ಜೆಡಿಎಸ್ ಅಧಿಕಾರಕ್ಕೆ ಬರುವುದು ಸಾಧ್ಯವೇ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಲ್ಲಿನ ಮಂಡಕಳ್ಳಿ ವಿಮಾನನಿಲ್ದಾಣದಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘2028ರಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಜೆಡಿಎಸ್– ಬಿಜೆಪಿಯವರು ಮೈತ್ರಿ ಮಾಡಿಕೊಂಡರು ಕೂಡ ಅಧಿಕಾರಕ್ಕೆ ಬರುವುದಕ್ಕೆ ಸಾಧ್ಯವೇ ಇಲ್ಲ’ ಎಂದರು.
‘ನಮಗೂ ಸಮಯ ಬರುತ್ತದೆ’ ಎಂಬ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಜೆಡಿಎಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ಅವರು ಯಾವ ಅರ್ಥದಲ್ಲಿ ಹೇಳುತ್ತಾರೆಯೋ ಗೊತ್ತಿಲ್ಲ. 17 ಸ್ಥಾನ ಗೆದ್ದಿರುವವರಿಗೆ ಹೇಗೆ ಅಧಿಕಾರ ಸಿಗುತ್ತದೆ?’ ಎಂದು ಕೇಳಿದರು.
‘ಸುಮ್ಮನೆ ರಾಜಕೀಯ ಭಾಷಣ ಮಾಡಿದಾಕ್ಷಣಕ್ಕೆ ಆಗುತ್ತದೆಯೇ? ನಾನು ಅಧ್ಯಕ್ಷನಾಗಿದ್ದಾಗ 2004ರಲ್ಲಿ 59 ಸ್ಥಾನಗಳನ್ನು ಜೆಡಿಎಸ್ ಗೆದ್ದಿತ್ತು. ಈಗ ಎಷ್ಟಿದ್ದಾರೆ’ ಎಂದು ಪ್ರಶ್ನಿಸಿದರು.
ಇವರಿಗೆ ಬಿಟ್ಟು ಬಿಡ್ತಾರಾ?:
‘ಹಾಗೊಂದು ವೇಳೆ ಬಿಜೆಪಿಯವರು ಜಾಸ್ತಿ ಗೆದ್ದರೆ ಸುಮ್ಮನೆ ಬಿಟ್ಟುಬಿಡುತ್ತಾರೆಯೇ? ನೀವೇ ಸಿಎಂ ಆಗಿ ಎಂದು ಜೆಡಿಎಸ್‌ನವರಿಗೆ ಹೇಳುತ್ತಾರೆಯೇ? ಎಲ್ಲಕ್ಕಿಂತಲೂ ಮುಖ್ಯವಾಗಿ, ಯಾವುದೇ ಕಾರಣಕ್ಕೂ ಅವರು ಗೆಲ್ಲುವುದೇ ಇಲ್ಲ’ ಎಂದರು.
‘ಕಾನೂನಿನ ಪ್ರಕಾರ ಪ್ರಜ್ವಲ್ ರೇವಣ್ಣ ಬಂಧನವಾಗಿದೆ. ಇದರಲ್ಲಿ ಸರ್ಕಾರವಾಗಲಿ, ನಾವಾಗಲಿ ಮಧ್ಯಪ್ರವೇಶಿಸಿಲ್ಲ. ರೇವಣ್ಣ ಅವರದು ಮಾತ್ರವಲ್ಲ, ಯಾವುದೇ ಪ್ರಕರಣದಲ್ಲೂ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ. ಅಧಿಕಾರಿಗಳಿಗೆ ಸರ್ಕಾರ ಬಹುಮಾನ ಕೊಟ್ಟಿಲ್ಲ. ಯಾರು ಕೊಡಲು ಹೋಗುತ್ತಾರೆ? ಅದೆಲ್ಲಾ ಸುಳ್ಳು’ ಎಂದರು.
‘ಹಾಗೇನಾದರೂ ಅಧಿಕಾರಕ್ಕೆ ಬಂದರೆ ಅವರೂ (ಜೆಡಿಎಸ್) ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ’ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್ ಜೊತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.