ADVERTISEMENT

ಬಿಜೆಪಿಯು ಚಡ್ಡಿ ಕಟ್ಟಿಕೊಳ್ಳುವುದನ್ನು ತಮ್ಮ ನಾಯಕರಿಗೆ ಕಲಿಸಲಿ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜೂನ್ 2022, 10:36 IST
Last Updated 7 ಜೂನ್ 2022, 10:36 IST
   

ಬೆಂಗಳೂರು: ಬಿಜೆಪಿ ನಾಯಕರಿಗೆ ಚಡ್ಡಿ ಎಂದರೆ ಅಲರ್ಜಿ. ಅವರು (ಬಿಜೆಪಿಯವರು) ಚಡ್ಡಿಯನ್ನು ಭದ್ರವಾಗಿ ಕಟ್ಟಿಕೊಳ್ಳುವ ತರಬೇತಿಯನ್ನು ಮೊದಲು ತಮ್ಮ ನಾಯಕರಿಗೆ ನೀಡಲಿ ಎಂದು ಕಾಂಗ್ರೆಸ್‌ ತಿರುಗೇಟು ನೀಡಿದೆ.

ಪಠ್ಯಪುಸ್ತಕದಲ್ಲಿ ಆರ್‌ಎಸ್‌ಎಸ್‌ ನೀತಿ ಅಳವಡಿಸಲಾಗುತ್ತಿದೆ ಎಂದು ಆರೋಪಿಸಿದ್ದ ಎನ್‌ಎಸ್‌ಯುಐ ಪದಾಧಿಕಾರಿಗಳು,ಜೂ.1 ರಂದು ತಿಪಟೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಮನೆ ಮುಂಭಾಗ ಪ್ರತಿಭಟನೆ ನಡೆಸಿ, ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು.

ಆ ವೇಳೆ ಆರ್‌ಎಸ್‌ಎಸ್‌ ಮತ್ತು ಎನ್‌ಎಸ್‌ಯುಐ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು.

ADVERTISEMENT

ಅದಕ್ಕೆ ಸಂಭಂಧಿಸಿದಂತೆ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್‌ ನಾಯಕರುಎನ್‌ಎಸ್‌ಯುಐಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸಬೇಕು. ಇಲ್ಲವಾದರೆ ರಾಜ್ಯದಾದ್ಯಂತ ಚಡ್ಡಿ ಸುಡುವ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.

ಅದಾದ ಬಳಿಕ ಚಡ್ಡಿ ವಿಚಾರವಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ.

ದೇಶದಾದ್ಯಂತ ಸೋತು ಸುಣ್ಣವಾಗಿರುವ ಕಾಂಗ್ರೆಸ್‌ನ ನಿರುದ್ಯೋಗಿ ನಾಯಕರು ಚಡ್ಡಿ ಸುಡುವ ಅಭಿಯಾನ ನಡೆಸಿ, ದೇಶದೆದುರು ಬೆತ್ತಲಾಗಲು ಹೊರಟಿದ್ದಾರೆ ಎಂದುಬಿಜೆಪಿ ವ್ಯಂಗ್ಯವಾಡಿತ್ತು.

ಇದಕ್ಕೆ ಪ್ರತಿಯಾಗಿ ಇಂದು ಸರಣಿ ಟ್ವೀಟ್‌ಗಳನ್ನು ಮಾಡಿರುವ ಕಾಂಗ್ರೆಸ್‌, 'ಕಂಡ ಕಂಡಲ್ಲಿ ಚಡ್ಡಿ ಬಿಚ್ಚುವ ಸಂಸ್ಕೃತಿಯ ಬಿಜೆಪಿ ನಾಯಕರಿಗೆ ಚಡ್ಡಿ ಬಗ್ಗೆ ಪ್ರೇಮ ಉಕ್ಕುತ್ತಿರುವುದೇಕೆ?ಬಿಜೆಪಿ ನಾಯಕರಿಗೆ ಚಡ್ಡಿ ಎಂದರೆ ಅಲರ್ಜಿ ಎಂಬುದನ್ನು ರಮೇಶ್ ಜಾರಕಿಹೊಳಿ, ರಘುಪತಿ ಭಟ್ ಸೇರಿದಂತೆ ಹಲವರು ನಿರೂಪಿಸಿದ್ದಾರೆ.ಬಿಜೆಪಿಯು, ಮೊದಲು ತಮ್ಮ ನಾಯಕರಿಗೆ ಚಡ್ಡಿಯನ್ನು ಭದ್ರವಾಗಿ ಕಟ್ಟಿಕೊಳ್ಳುವ ತರಬೇತಿ ಕೊಡಲಿ' ಎಂದು ಕುಟುಕಿದೆ.

'ಬಿಜೆಪಿ ನಾಯಕರ ಚಡ್ಡಿ ಬಿಚ್ಚುವ ಪುರಾಣವನ್ನು ಕರ್ನಾಟಕವಷ್ಟೇ ಅಲ್ಲ, ಇಡೀ ದೇಶ ನೋಡಿದೆ.ಇಷ್ಟೆಲ್ಲ 'ಚಡ್ಡಿ ಅಲರ್ಜಿ' ಹೊಂದಿರುವವರು ಚಡ್ಡಿ ಸುಟ್ಟರೆ ಬುಡಕ್ಕೆ ಬೆಂಕಿ ಬಿದ್ದಂತೆ ಆಡುತ್ತಿರುವುದೇಕೆ?ಬಿಜೆಪಿ ಮೊದಲು ತಮ್ಮ ನಾಯಕರಿಗೆ ಚಡ್ಡಿ ಕಳಿಸಿಕೊಡಲಿ, ಚಡ್ಡಿಯನ್ನು ಭದ್ರವಾಗಿ ಹಾಕಿಕೊಳ್ಳುವುದನ್ನು ಕಲಿಸಿ ತಮ್ಮ ಮರ್ಯಾದೆ ಕಾಪಾಡಿಕೊಳ್ಳಲಿ' ಎಂದು ತಿರುಗೇಟು ನೀಡಿದೆ.

ಪಠ್ಯಪುಸ್ತಕ ಪರಿಷ್ಕರಣೆ ವಿಚಾರವಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ವಿರುದ್ಧವೂ ಗುಡುಗಿರುವ ಕಾಂಗ್ರೆಸ್‌, 'ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾದ ಸರ್ಕಾರದಶಿಕ್ಷಣ ಸಚಿವರು ಚಡ್ಡಿ ಗ್ಯಾಂಗ್‌ನ ಕೇಶವಕೃಪಕ್ಕೆ ಹೋಗಿ ಪಠ್ಯ ಪರಿಷ್ಕರಣೆಯ ವರದಿ ನೀಡುತ್ತಿರುವುದು ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಮಾಡುತ್ತಿರುವ ಅವಮಾನ.ಪಠ್ಯ ತಿರುಚುವಿಕೆಯ ಹಿಂದೆ ಸಂವಿಧಾನ ವಿರೋಧಿ ಆರ್‌ಎಸ್‌ಎಸ್‌ ಇದೆ ಎಂಬುದು ಈಗ ಸ್ಪಷ್ಟವಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.