ADVERTISEMENT

ಕೋವಿಡ್ ಕರ್ಫ್ಯೂ: ಬಿ.ಎಸ್.ಯಡಿಯೂರಪ್ಪ ಸರ್ಕಾರದ ಕುತಂತ್ರ ಬುದ್ದಿ ಎಂದ ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 10:38 IST
Last Updated 26 ಏಪ್ರಿಲ್ 2021, 10:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹೆಚ್ಚುತ್ತಿರುವ ಕೋವಿಡ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ 14 ದಿನ ಕೋವಿಡ್ ಕರ್ಫ್ಯೂ ಜಾರಿ ಮಾಡಿರುವ ಸರ್ಕಾರದ ನಡೆಯನ್ನು ಕಾಂಗ್ರೆಸ್ ಟೀಕಿಸಿದೆ.

ಈ ಕುರಿತು ಪಕ್ಷದ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಪ್ರತಿಕ್ರಿಯಿಸಲಾಗಿದ್ದು, ಕರ್ಫ್ಯೂ ನಿರ್ಧಾರದ ಮೂಲಕ ಸರ್ಕಾರವು ಕುತಂತ್ರ ಬುದ್ಧಿ ತೋರಿದೆ ಎಂದು ಟೀಕಿಸಲಾಗಿದೆ.

‘ಅಧಿಕೃತವಾಗಿ ಲಾಕ್‌ಡೌನ್ ಘೋಷಿಸದೆಯೇ ಲಾಕ್‌ಡೌನ್ ಸ್ಥಿತಿ ನಿರ್ಮಿಸುವ ಮೂಲಕ ಚಾಪೆಯ ಕೆಳಗೆ ನುಸುಳುವ ಕುತಂತ್ರ ಬುದ್ದಿ ತೋರುತ್ತಿದೆ ಸರ್ಕಾರ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ, ಈ ಸಮಯದಲ್ಲಿ ಜನತೆಗೆ ನೆರವಿನ ಔದಾರ್ಯತೆ ತೋರಬೇಕೇ ಹೊರತು, ತಂತ್ರಗಾರಿಕೆಯನ್ನಲ್ಲ. ಈಗಾಗಲೇ ಸಾಕಷ್ಟು ಸಂಕಷ್ಟದಲ್ಲಿರುವ ಜನತೆಗೆ ನೆರವಿನ ಪ್ಯಾಕೇಜನ್ನು ಕೂಡಲೇ ಬಿಡುಗಡೆಗೊಳಿಸಿ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

‘ಸರ್ಕಾರದ ಕೆಲವು ನಿರ್ಧಾರಗಳು ದ್ವಂದ್ವಗಳಿಂದ ಕೂಡಿವೆ. ಸರ್ಕಾರವು ವಾಹನ ಸಂಚಾರಗಳಿಗೆ ನಿಷೇಧವನ್ನೂ ಹೇರಿದೆ, ಜೊತೆಗೆ ಉತ್ಪಾದನಾ ವಲಯಕ್ಕೆ, ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ನಿರ್ಬಂಧವಿಲ್ಲ ಎಂದಿದೆ. ಸಂಚಾರಕ್ಕೆ ಅವಕಾಶವಿಲ್ಲದೆ ಇವ್ಯಾವುವೂ ಕಾರ್ಯಚರಿಸುವುದಿಲ್ಲ ಎನ್ನುವ ಕನಿಷ್ಠ ಪ್ರಜ್ಞೆ ಇಲ್ಲವೇ ಅಥವಾ ಅಪವಾದ ತಪ್ಪಿಸಿಕೊಳ್ಳಲು ತಂತ್ರಗಾರಿಕೆಯೇ?’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಪ್ರಶ್ನಿಸಿದೆ.

ಕೇಂದ್ರದ ವಿರುದ್ಧವೂ ಆಕ್ರೋಶ

ಕೋವಿಡ್ ಪರಿಸ್ಥಿತಿ ನಿರ್ವಹಣೆಗೆ ಸಂಬಂಧಿಸಿ ಕೇಂದ್ರ ಸರ್ಕಾರದ ವಿರುದ್ಧವೂ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ‘ಪಿಎಂ ಕೇರ್ಸ್‌ ಫಂಡ್‌’ನ ಹಣಕಾಸು ನೆರವಿನಲ್ಲಿ ದೇಶದಲ್ಲಿ 551 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಭಾನುವಾರ ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ‘ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವುದು ಅಂದರೆ ಇದುವೇ! ಪಿಎಂ ಕೇರ್ಸ್ ಎಂಬ ಖಾಸಗಿ ನಿಧಿ ಸ್ಥಾಪಿಸಿ ಸಂಗ್ರಹವಾದ ಹಣ ಬಳಸದೇ ಕುಳಿತರು. 2ನೇ ಅಲೆಯ ಬಗ್ಗೆ ಹಿಂದೆಯೇ ತಜ್ಞರು ನೀಡಿದ ಎಚ್ಚರಿಕೆ ನಿರ್ಲಕ್ಷಿಸಿದವರು ಈಗ ಆಕ್ಸಿಜನ್ ಘಟಕಗಳನ್ನು ಸ್ಥಾಪಿಸುತ್ತಾರಂತೆ! ಇವು ಕಾರ್ಯಾರಂಭವಾಗುವುದು 8ನೇ ಅಲೆಗೊ? 9ನೇ ಅಲೆಗೊ?’ ಎಂದು ವ್ಯಂಗ್ಯವಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.