ADVERTISEMENT

ಒಬಿಸಿ ಒಗ್ಗೂಡಿಸಲು ಕಾಂಗ್ರೆಸ್‌ ಕಾರ್ಯತಂತ್ರ; ಸಲಹಾ ಮಂಡಳಿಯ ಸಭೆಯಲ್ಲಿ ಚರ್ಚೆ

ಸಲಹಾ ಮಂಡಳಿಯ ಸಭೆಯಲ್ಲಿ ಗಂಭೀರ ಚರ್ಚೆ, ಮಹತ್ವದ ನಿರ್ಣಯ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 19:14 IST
Last Updated 16 ಜುಲೈ 2025, 19:14 IST
<div class="paragraphs"><p>ಎಐಸಿಸಿ ಒಬಿಸಿ ಸಲಹಾ ಮಂಡಳಿ ಸಭೆಯಲ್ಲಿ ಮಂಡಳಿಯ ಸಂಚಾಲಕ ಅನಿಲ್ ಜೈ ಹಿಂದ್, ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ರಾಜಸ್ಥಾನದ ಅಶೋಕ್‌ ಗೆಹಲೋತ್, ಪುದುಚೇರಿಯ ವಿ. ನಾರಾಯಣಸ್ವಾಮಿ ಇದ್ದಾರೆ</p></div>

ಎಐಸಿಸಿ ಒಬಿಸಿ ಸಲಹಾ ಮಂಡಳಿ ಸಭೆಯಲ್ಲಿ ಮಂಡಳಿಯ ಸಂಚಾಲಕ ಅನಿಲ್ ಜೈ ಹಿಂದ್, ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ರಾಜಸ್ಥಾನದ ಅಶೋಕ್‌ ಗೆಹಲೋತ್, ಪುದುಚೇರಿಯ ವಿ. ನಾರಾಯಣಸ್ವಾಮಿ ಇದ್ದಾರೆ

   

ಬೆಂಗಳೂರು: ರಾಷ್ಟ್ರ ಮಟ್ಟದಲ್ಲಿ ಇತರ ಹಿಂದುಳಿದ ಸಮುದಾಯವನ್ನು (ಒಬಿಸಿ) ಪಕ್ಷದತ್ತ ಸೆಳೆಯಲು ಎಐಸಿಸಿ ನಾನಾ ಕಾರ್ಯತಂತ್ರ ಹೆಣೆದಿದೆ. ಅದೇ ಉದ್ದೇಶದಿಂದ ಇಲ್ಲಿ ಎರಡು ದಿನ ನಡೆದ ಪಕ್ಷದ ಹಿಂದುಳಿದ ವರ್ಗಗಳ ಒಬಿಸಿ ಸಲಹಾ ಮಂಡಳಿಯ ಸಭೆಯು ಕೆಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯ ಭಾರತ್‌ ಜೋಡೋ ಭವನದಲ್ಲಿ ಮಂಗಳವಾರ ಹಾಗೂ ಶಾಂಗ್ರಿ-ಲಾ ಹೋಟೆಲ್‌ನಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್‌, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಸೇರಿದಂತೆ ಮಂಡಳಿಯ ಸದಸ್ಯರು ಭಾಗವಹಿಸಿ, ಗಂಭೀರ ಚರ್ಚೆ ನಡೆಸಿದರು.

ADVERTISEMENT

ನವದೆಹಲಿಯ ತಾಲ್‌ಕಟೋರ ಕ್ರೀಡಾಂಗಣದಲ್ಲಿ ಇದೇ 25ರಂದು ನಡೆಯಲಿರುವ ‘ಕಾಂಗ್ರೆಸ್‌ ಒಬಿಸಿ ನಾಯಕತ್ವ ಭಾಗೀದಾರಿ ನ್ಯಾಯ ಸಮ್ಮೇಳನ’ವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಲಿದ್ದು, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಮಾರೋಪ ಭಾಷಣ ಮಾಡಲಿದ್ದಾರೆ. ಈ ಸಮ್ಮೇಳನವನ್ನು ಅತ್ಯಂತ ಯಶಸ್ವಿಗೊಳಿಸಲು ಸಭೆಯಲ್ಲಿ ಚರ್ಚೆ ನಡೆಯಿತು.

ಪ್ರತಿಯೊಂದು ರಾಜ್ಯದ ರಾಜಧಾನಿಯಲ್ಲಿ ಪಕ್ಷದ ಒಬಿಸಿ ನಾಯಕರನ್ನು ಸೇರಿಸಿ ಜಾತಿ ಜನಗಣತಿಗೆ ಸಂಬಂಧಿಸಿದಂತೆ ಮತ್ತು ಸಮುದಾಯದ ಸಮಸ್ಯೆಗಳ ಕುರಿತು ಚರ್ಚಿಸಲು ನಿರಂತರವಾಗಿ ಕಾರ್ಯಾಗಾರಗಳನ್ನು ಆಯೋಜಿಸಲು ಜೊತೆಯಾಗಿ ಕೆಲಸ ಮಾಡಲು ಕೂಡಾ ಮಂಡಳಿ ನಿರ್ಧರಿಸಿದೆ. ಅಲ್ಲದೆ, ಎಲ್ಲ ರಾಜ್ಯಗಳ ಕೇಂದ್ರ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್‌ ಗಾಂಧಿ ನೇತೃತ್ವದಲ್ಲಿ ಬೃಹತ್‌ ಸಾರ್ವಜನಿಕ ರ‍್ಯಾಲಿಗಳನ್ನು ಹಮ್ಮಿಕೊಳ್ಳಲು, ದೇಶದಾದ್ಯಂತ ಇರುವ ಒಬಿಸಿ ಸಮುದಾಯವನ್ನು ಸಂಪರ್ಕಿಸಿ, ಸಂಘಟನೆ ಮತ್ತು ಚುನಾವಣಾ ಮಟ್ಟದಲ್ಲಿ ನಾಯಕತ್ವ ಬೆಳೆಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಕಾಂಗ್ರೆಸ್‌ ಪಕ್ಷದ ತತ್ವ, ಸಿದ್ಧಾಂತಗಳ ಕುರಿತು ನಾಯಕರಲ್ಲಿ ಜಾಗೃತಿ ಮೂಡಿಸಲು ಕೂಡಾ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಒಬಿಸಿ ವರ್ಗವನ್ನು ಸಂಘಟಿಸುವ ಉದ್ದೇಶದಿಂದ ‘ಬೆಂಗಳೂರು ಘೋಷಣೆ’ ಹೆಸರಿನಲ್ಲಿ ತೆಗೆದುಕೊಂಡ ನಿರ್ಣಯಗಳ ಮಾಹಿತಿ ನೀಡಿದರು.

‘ಭಾರತೀಯ ಜನಗಣತಿ ಆಯೋಗವು ತೆಲಂಗಾಣ ಸರ್ಕಾರ ನಡೆಸಿದ ಜಾತಿ ಜನಗಣತಿ ಸಮೀಕ್ಷೆಯನ್ನು ಮಾದರಿಯಾಗಿ ಇಟ್ಟುಕೊಂಡು ರಾಷ್ಟ್ರ ಮಟ್ಟದಲ್ಲಿ ಜಾತಿವಾರು ಜನಗಣತಿ ಕೈಗೊಳ್ಳಬೇಕು. ಜಾತಿವಾರು ಜನಗಣತಿಯು ಪ್ರತಿ ಜಾತಿ ಮತ್ತು ವ್ಯಕ್ತಿಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ ಅಂಶಗಳನ್ನು ಒಳಗೊಂಡಿರಬೇಕೆಂದು ಮಂಡಳಿಯು ನಿರ್ಣಯ ತೆಗೆದುಕೊಂಡಿದೆ’ ಎಂದರು.

‘ರಾಜ್ಯದಲ್ಲಿ ಸಲಹಾ ಮಂಡಳಿಯು ಮೊದಲ‌ ಸಭೆ ನಡೆಸಿದೆ. ಮಂಡಳಿಯ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಬೆಂಗಳೂರು ಘೋಷಣೆಯ ನಿರ್ಣಯಗಳಿಗೆ ಕೈ ಎತ್ತುವ ಮೂಲಕ ಸರ್ವಾನುಮತದಿಂದ ಅಂಗೀಕಾರ ನೀಡಲಾಯಿತು. ರಾಹುಲ್ ಗಾಂಧಿಯವರ ನಾಯಕತ್ವದಡಿಯಲ್ಲಿ ಭಾರತವು ಅತ್ಯುನ್ನತ ಸಾಂವಿಧಾನಿಕ ಉದ್ದೇಶವಾದ ಸಾಮಾಜಿಕ ಪರಿವರ್ತನೆಯನ್ನು ಸಾಕಾರಗೊಳಿಸಲಿದೆ. ತನ್ಮೂಲಕ ಈ ದೇಶದಲ್ಲಿ ಸಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ರಾಹುಲ್ ಗಾಂಧಿಯವರ ಧೀರ ಮತ್ತು ನಿರ್ಭಯ ನಾಯಕತ್ವದಡಿಯಲ್ಲಿ ಕಾಂಗ್ರೆಸ್ ಪಕ್ಷದ ಧ್ವಜವನ್ನು ಹಿಡಿದು ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಿಸಲು ನಿರ್ಧರಿಸಿ, ಹೋರಾಡಲು ನಾವೆಲ್ಲರೂ ಪ್ರಮಾಣ ಮಾಡಿದ್ದೇವೆ’ ಎಂದರು.

‘ದಿಟ್ಟ ನಿರ್ಧಾರ’: ‘ಕಾಂಗ್ರೆಸ್ ಪಕ್ಷ ಎಂದೆಂದಿಗೂ ಸಂವಿಧಾನಕ್ಕೆ ಬದ್ಧವಾಗಿರುತ್ತದೆ. ಅಹಿಂದ ತತ್ವವು ಎಲ್ಲರಿಗೂ ಸಮಪಾಲು, ಸಮಬಾಳು ಎಂಬುದಾಗಿದೆ. ಇಂದಿನ ಕಾಲಮಾನದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮಾನತೆ ಇಲ್ಲ. ಈ ಕಾರಣಕ್ಕೆ ಹಿಂದುಳಿದ ಸಮುದಾಯಗಳಿಗೆ ಶಕ್ತಿ ತುಂಬಬೇಕಾಗಿದೆ. ರಾಹುಲ್ ಗಾಂಧಿಯವರು ಪ್ರತಿಪಾದಿಸುತ್ತಿರುವ ಜಾತಿವಾರು ಜನಗಣತಿ ಕೇವಲ ಜಾತಿಗಳ ಗಣತಿ ಆಗಿರದೆ, ಅದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ನಡೆಸುವ ಸಮೀಕ್ಷೆಯಾಗಿದೆ. ಹಿಂದುಳಿದ ಸಮುದಾಯಗಳಿಗೆ ಸಮಾನ ಅವಕಾಶ ಒದಗಿಸುವ ದಿಟ್ಟ ನಿರ್ಧಾರವನ್ನು ರಾಹುಲ್ ಗಾಂಧಿ ಕೈಗೊಂಡಿದ್ದಾರೆ’ ಎಂದರು.

ಮೀಸಲಾತಿ ಪ್ರಮಾಣ ಶೇ 75ಕ್ಕೆ ಹೆಚ್ಚಿಸಲು ಆಗ್ರಹ

*ಮೀಸಲಾತಿ ಪ್ರಮಾಣದ ಮಿತಿಯನ್ನು ಶೇ 75ರಷ್ಟು ಹೆಚ್ಚಿಸಿ, ಹಿಂದುಳಿದ ವರ್ಗಗಳಿಗೆ ಶೈಕ್ಷಣಿಕ, ಆರ್ಥಿಕ, ರಾಜಕೀಯ ಮತ್ತು ಇತರ ಕ್ಷೇತ್ರಗಳಲ್ಲಿ ಸೂಕ್ತ ಅವಕಾಶ ಕಲ್ಪಿಸಬೇಕು

*ಸಂವಿಧಾನದ ವಿಧಿ 15(5)ರ ಪ್ರಕಾರ ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ
ನೀಡಬೇಕು

*ತೆಲಂಗಾಣ ಸರ್ಕಾರ ನಡೆಸಿದ ಜಾತಿವಾರು ಜನಗಣತಿ ಮಾದರಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಜಾತಿವಾರು ಜನಗಣತಿ ಕೈಗೊಳ್ಳಬೇಕು

ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ– ಸಿ.ಎಂ

‘ಹೈಕಮಾಂಡ್‌ ತೆಗೆದುಕೊಳ್ಳುವ ತೀರ್ಮಾನವನ್ನು ನಾನು ಮತ್ತು ಡಿ.ಕೆ. ಶಿವಕುಮಾರ್‌
ಅನುಸರಿಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಕಾಂಗ್ರೆಸ್‌ನಲ್ಲಿ ಹಿಂದುಳಿದ ವರ್ಗದ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ. ಕಾಂಗ್ರೆಸ್ ಅವರನ್ನು ಬದಲಾಯಿಸುತ್ತದೆಯೇ’ ಎಂದು ಸುದ್ದಿಗಾರರು ಎಐಸಿಸಿ ಒಬಿಸಿ ವಿಭಾಗದ ಅಧ್ಯಕ್ಷ ಅನಿಲ್ ಜೈಹಿಂದ್ ಅವರನ್ನು ಪ್ರಶ್ನಿಸಿದಾಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ, ‘ಈ ಪ್ರಶ್ನೆ ಇಲ್ಲಿ ಅಪ್ರಸ್ತುತ. ಇಂದಿನ ಸಭೆಗೆ ಸಂಬಂಧಿಸಿದ್ದಲ್ಲ.
ನೀವು ಕೇಳುವ ಪ್ರಶ್ನೆಯ ವಿಚಾರದಲ್ಲಿ ಹೈಕಮಾಂಡ್‌ ನಿರ್ಣಯ ತೆಗೆದುಕೊಳ್ಳಲಿದೆ’ ಎಂದರು. ‘ಆ ರೀತಿಯ ಯಾವ ಪ್ರಸ್ತಾವವೂ ಇಲ್ಲ. ನಾವೆಲ್ಲರೂ ಸಿದ್ದರಾಮಯ್ಯ ಪರವಾಗಿ ಇದ್ದೇವೆ’ ಎಂದು ಅನಿಲ್ ಜೈಹಿಂದ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.