ADVERTISEMENT

ಕಾಂಗ್ರೆಸ್‌ ನಾಯಕರು ಭಯೋತ್ಪಾದಕರಿಗಾಗಿ ಕಣ್ಣೀರು ಹಾಕಿದ್ದರು: ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 17:40 IST
Last Updated 10 ಜುಲೈ 2022, 17:40 IST

ಬೆಂಗಳೂರು: ‘ಬಾತ್ಲಾ ಹೌಸ್‌ನಲ್ಲಿ ಭಯೋತ್ಪಾದಕರ ಎನ್‌ಕೌಂಟರ್‌ ನಡೆದಾಗ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಕಣ್ಣೀರು ಹಾಕಿದ್ದರು. ಆ ಪಕ್ಷದ ನಾಯಕರು ಈಗ ಬಿಜೆಪಿಗೆ ಭಯೋತ್ಪಾದಕರ ಜತೆ ನಂಟಿದೆ ಎಂಬ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದರು.

ಬಿಜೆಪಿ ರಾಜ್ಯ ಘಟಕದ ಕಚೇರಿ ಜಗನ್ನಾಥ ಭವನದಲ್ಲಿ ಭಾನುವಾರ ನಡೆದ ಬಿಜೆಪಿ ಅಸಂಘಟಿತ ಕಾರ್ಮಿಕರ ಪ್ರಕೋಷ್ಠದ ರಾಜ್ಯ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ‘ರಾಜಸ್ಥಾನದಲ್ಲಿ ದರ್ಜಿ ಕನ್ಹಯ್ಯ ಲಾಲ್‌ ಕೊಲೆ ಪ್ರಕರಣದ ಆರೋಪಿಯೊಬ್ಬ ಬಿಜೆಪಿ ನಾಯಕರ ಜತೆ ನಿಂತಿದ್ದ ಫೋಟೊ ಹಂಚಿಕೊಂಡು ನಮ್ಮ ಪಕ್ಷದ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಯೋತ್ಪಾದಕ ಅಫ್ಜಲ್‌ ಗುರು ಜತೆ ನಿಂತು ಫೋಟೊ ತೆಗೆಸಿಕೊಂಡಿರಲಿಲ್ಲವೆ’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಪಕ್ಷದ ನೇತೃತ್ವದ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿನ ಸಂವಿಧಾನದ 370ನೇ ವಿಧಿ ಜಾರಿಗೊಳಿಸಿದ್ದು ದೇಶದಲ್ಲಿ ಭಯೋತ್ಪಾದನೆ ಹೆಚ್ಚಲು ಕಾರಣ. ಈಗ ಬಿಜೆಪಿ ಸರ್ಕಾರ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದೆ. ಭಯೋತ್ಪಾದಕರು, ಭ್ರಷ್ಟರ ಜತೆ ಇದ್ದು, ಪೋಷಿಸಿದವರೇ ಈಗ ಆ ಎರಡೂ ವಿಚಾರದ ಕುರಿತು ಮಾತನಾಡುತ್ತಿದ್ದಾರೆ ಎಂದರು.

ADVERTISEMENT

ಎಲ್ಲ ಜನರ ಪಕ್ಷ: ‘ಬಿಜೆಪಿ ಎಂದರೆ ನಗರ ವಾಸಿಗಳ ಪಕ್ಷ ಎಂಬ ಮಾತು ಹಿಂದೆ ಇತ್ತು. ಈಗ ಎಲ್ಲ ಜನರೂ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಪೇಜ್‌ ಪ್ರಮುಖರನ್ನು ನೇಮಿಸುವವರೆಗೆ ಬಂದಿದ್ದೇವೆ. ಮುಂದೆ ಪ್ರತಿ ಇಬ್ಬರು ಮತದಾರರಿಗೆ ಒಬ್ಬ ಪ್ರಮುಖರನ್ನು ನೇಮಿಸುವಷ್ಟು ಶಕ್ತಿ ಪಕ್ಷಕ್ಕೆ ಇದೆ’ ಎಂದು ಜೋಶಿ ಹೇಳಿದರು.

ಅಸಂಘಟಿತ ಕಾರ್ಮಿಕರಿಗಾಗಿ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಕಾರ್ಮಿಕರಿಗಾಗಿ ಇ–ಶ್ರಮ ಕಾರ್ಡ್‌ ಯೋಜನೆ ಜಾರಿಗೊಳಿಸಿದ್ದು, ಈವರೆಗೆ 28 ಕೋಟಿ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸಲಾಗಿದೆ. ಇದರಿಂದ ದೇಶದ ಯಾವುದೇ ಭಾಗಕ್ಕೆ ವಲಸೆ ಹೋದರೂ ಆ ಕಾರ್ಮಿಕರು ಸರ್ಕಾರದ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗಲಿದೆ ಎಂದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ರಾಜ್ಯ ಅಸಂಘಟಿತರ ಕಾರ್ಮಿಕರ ಪ್ರಕೋಷ್ಠದ ಸಂಚಾಲಕ ಬ್ಯಾಟರಂಗೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.