ADVERTISEMENT

ಮತ ಕಳವು ಮಾಡಿಯೇ ಗೆದ್ದ ಕಾಂಗ್ರೆಸ್‌: ರಮೇಶ್‌ ಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 15:42 IST
Last Updated 9 ಆಗಸ್ಟ್ 2025, 15:42 IST
ರಮೇಶ್‌ ಗೌಡ
ರಮೇಶ್‌ ಗೌಡ   

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಮತ ಕಳವು ಆರೋಪ ಮಾಡುತ್ತಿರುವ ಕಾಂಗ್ರೆಸ್‌ ಪಕ್ಷ ಹಿಂದಿನಿಂದಲೂ ಅದೇ ವೃತ್ತಿ ಮಾಡಿಕೊಂಡು ಬಂದಿದೆ ಎಂದು ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಎಚ್‌.ಎಂ. ರಮೇಶ್‌ ಗೌಡ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, 2023ರ ವಿಧಾನಸಭೆ, ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲೂ ಮತ ಕಳವು ಮಾಡಿಯೇ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಮಹದೇವಪುರ ಕ್ಷೇತ್ರದಲ್ಲಿ ಮತ ಕಳವು ಮಾಡಲಾಗಿದೆ ಎಂಬ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಆರೋಪ ಸುಳ್ಳು ಎಂದರು.

ವಿಧಾನಸಭೆ ಚುನಾವಣೆಯಲ್ಲಿ ರಾಮನಗರ, ಮಾಗಡಿ, ಕುಣಿಗಲ್‌ ಸೇರಿ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ‘ಗಿಫ್ಟ್‌ ಕೂಪನ್‌’ ಹಂಚಿ, ಇತರೆ ಕ್ಷೇತ್ರಗಳಲ್ಲಿ ಗ್ಯಾರಂಟಿ ಯೋಜನೆಯ ಕಾರ್ಡ್‌ಗಳನ್ನು ಬಳಸಿಕೊಂಡು ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಉಪ ಚುನಾವಣೆಯ ಸಮಯದಲ್ಲೇ ಗೃಹಲಕ್ಷ್ಮಿ ಯೋಜನೆ ಬಾಕಿ ಹಣ ಜಮೆ ಮಾಡಿ ಮಹಿಳೆಯರ ಮತ ಪಡೆದಿತ್ತು ಎಂದು ದೂರಿದರು.

ADVERTISEMENT

‘ಜೆಡಿಎಸ್‌ ಹಾಗೂ ಬಿಜೆಪಿ ಒಟ್ಟಾಗಿ ಲೋಕಸಭೆ ಚುನಾವಣೆ ಎದುರಿಸಿದವು. ಆದರೆ, ಎಲ್ಲಾ ಕ್ಷೇತ್ರಗಳನ್ನು ಗೆಲ್ಲಲು ಆಗಲಿಲ್ಲ. ಆದರೂ, ಚುನಾವಣಾ ಆಯೋಗವನ್ನು ದೂರಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರು 136 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದ್ದರು. ಅಷ್ಟು ಕರಾರುವಕ್ಕಾಗಿ ಸಂಖ್ಯೆ ಹೇಳಿದ್ದಾರೆ ಎಂದರೆ ಮತ ಕಳವು ಮಾಡಿರುವ ಅನುಮಾನವಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.