ADVERTISEMENT

ಕೆ.ಎಸ್.ಈಶ್ವರಪ್ಪ ಅವರಿಗೆ ಸಿ.ಎಂ ಸ್ಥಾನ ನೀಡಿ: ಹಿಂದುಳಿದ ವರ್ಗಗಳ ಮುಖಂಡರ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 19:30 IST
Last Updated 23 ಜುಲೈ 2021, 19:30 IST
ಸುದ್ದಿಗೋಷ್ಠಿಯಲ್ಲಿ (ಎಡದಿಂದ ಮೂರನೆಯವರು) ಕೆ.ಮುಕುಡಪ್ಪ ಮಾತನಾಡಿದರು. ಹಿಂದುಳಿದ ವರ್ಗಗಳ ಮುಖಂಡರಾದ ತಿಪ್ಪಣ್ಣ ರೆಡ್ಡಿ, ಶಿವಪ್ಪ, ಬಸವರಾಜ ಬಾಳೇಕಾಯಿ, ಪ್ರಸನ್ನ ಕುಮಾರ್, ವಿಶ್ವನಾಥ್, ಅಮರೇಶ್ ಕಾಮನಕೇರಿ, ಬಸವರಾಜ ಓಟೂರು ಹಾಗೂ ಇತರರು ಇದ್ದರು.
ಸುದ್ದಿಗೋಷ್ಠಿಯಲ್ಲಿ (ಎಡದಿಂದ ಮೂರನೆಯವರು) ಕೆ.ಮುಕುಡಪ್ಪ ಮಾತನಾಡಿದರು. ಹಿಂದುಳಿದ ವರ್ಗಗಳ ಮುಖಂಡರಾದ ತಿಪ್ಪಣ್ಣ ರೆಡ್ಡಿ, ಶಿವಪ್ಪ, ಬಸವರಾಜ ಬಾಳೇಕಾಯಿ, ಪ್ರಸನ್ನ ಕುಮಾರ್, ವಿಶ್ವನಾಥ್, ಅಮರೇಶ್ ಕಾಮನಕೇರಿ, ಬಸವರಾಜ ಓಟೂರು ಹಾಗೂ ಇತರರು ಇದ್ದರು.   

ಬೆಂಗಳೂರು:‘ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದು ವರೆಯಬೇಕು. ಅವರನ್ನು ಬದಲಾವಣೆ ಮಾಡಿದರೆ, ಕುರುಬ ಸಮುದಾಯದ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು’ ಎಂದು ಹಿಂದುಳಿದ ವರ್ಗಗಳ ಮುಖಂಡರು ಬಿಜೆಪಿ ವರಿಷ್ಠರಿಗೆ ಮನವಿ ಮಾಡಿದ್ದಾರೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದಅಹಿಂದ ಮುಖಂಡ ಕೆ.ಮುಕುಡಪ್ಪ ಅವರು, ‘ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಕ್ಕಲಿಗ ಸಮುದಾಯದ ಡಿ.ವಿ.ಸದಾನಂದಗೌಡ ಹಾಗೂ ಲಿಂಗಾಯತ ಸಮುದಾಯದ ಜಗದೀಶ್ ಶೆಟ್ಟರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕುರುಬ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಹಾಗಾಗಿ, ಕುರುಬ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಬೇಕು’ ಎಂದರು.

ಕೋಲಿ ಸಮಾಜದ ಮುಖಂಡ ತಿಪ್ಪಾರೆಡ್ಡಿ, ಸವಿತಾ ಸಮಾಜದ ಶಿವಪ್ಪ, ಮಾಲಿ ಸಮಾಜದ ಬಸವರಾಜ ಬಾಳೇಕಾಯಿ, ಯಾದವ ಸಮಾಜದ ಪ್ರಸನ್ನ ಕುಮಾರ್, ವಿಶ್ವಕರ್ಮ ಸಮು ದಾಯದ ವಿಶ್ವನಾಥ್ ವಿಶ್ವಕರ್ಮ, ಈಡಿಗ ಸಮಾಜದ ಬಸವರಾಜ ಓಟೂರು ಸೇರಿದಂತೆಹಿಂದುಳಿದ ವರ್ಗಗಳ ಮುಖಂಡರು ಕೆ.ಎಸ್.ಈಶ್ವರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿದರು.

ADVERTISEMENT

ಹಿಂದುಳಿದ ವರ್ಗಕ್ಕೆ ಮುಖ್ಯಮಂತ್ರಿ ಸ್ಥಾನ:ಪ್ರೊ.ನರಸಿಂಹಪ್ಪ ಆಗ್ರಹ

‘ಹಿಂದುಳಿದ ವರ್ಗಗಳ ಮುಂಚೂಣಿ ನಾಯಕರಾದ ಸಚಿವ ಕೆ.ಎಸ್.ಈಶ್ವರಪ್ಪ, ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ಶಾಸಕ ಸುನೀಲ್ ಕುಮಾರ್ ಈ ನಾಲ್ವರಲ್ಲಿ ಒಬ್ಬರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು’ ಎಂದು ಹಿಂದುಳಿದ ವರ್ಗದ ಮುಖಂಡ ಹಾಗೂ ಹಿರಿಯ ಹೋರಾಟಗಾರ ಪ್ರೊ.ನರಸಿಂಹಪ್ಪ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಈಗ ಸಾಮಾನ್ಯ ವರ್ಗದ ಜನರೂ ಕೇಂದ್ರದ ಮಂತ್ರಿಗಳಾಗಿದ್ದಾರೆ. ಇದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆಗಳು. ರಾಜ್ಯದ ಮಂತ್ರಿಮಂಡಲ ಕೆಲವೇ ವರ್ಗಗಳಿಗೆ ಸೀಮಿತಗೊಂಡಿದ್ದು, ಎಲ್ಲ ವರ್ಗಗಳಿಗೆ ಅವಕಾಶ ಸಿಗಬೇಕು. ಹಿಂದುಳಿದ ಜಾತಿಯವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು’ ಎಂದು ಒತ್ತಾಯಿಸಿದರು.

ರಾಜು ಕ್ಷತ್ರಿಯ ಸಮಾಜದ ಮುಖಂಡ ಲಕ್ಷೀಕಾಂತ ರಾಜು, ‘ಸ್ವಾಮೀಜಿ ಗಳಿಗೆ ಮಠಗಳಲ್ಲಿ ಮಾಡಲು ಬಹಳಷ್ಟು ಕೆಲಸ ಇದೆ. ಅದನ್ನು ಬಿಟ್ಟು ಮಂತ್ರಿ ಗಳಂತೆ ಕೆಲಸ ಮಾಡುವುದು ಸರಿಯಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.