ADVERTISEMENT

ಬೆಂಗಳೂರಿನಲ್ಲಿ ಯುಎಸ್‌ ಕಾನ್ಸುಲೇಟ್‌ ಕಾರ್ಯಾರಂಭ: ವೀಸಾ ಸದ್ಯಕ್ಕಿಲ್ಲ

​ಪ್ರಜಾವಾಣಿ ವಾರ್ತೆ
Published 17 ಜನವರಿ 2025, 15:16 IST
Last Updated 17 ಜನವರಿ 2025, 15:16 IST
<div class="paragraphs"><p>ಬೆಂಗಳೂರಿನಲ್ಲಿ ಅಮೆರಿಕದ ಕಾನ್ಸುಲೇಟ್‌ ಕಚೇರಿ ಉದ್ಘಾಟನಯ ನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್‌ ಗ್ಯಾರ್‌ಸೆಟಿ ಮತ್ತು ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಪರಸ್ಪರ ಅಭಿನಂದಿಸಿದರು &nbsp;</p></div>

ಬೆಂಗಳೂರಿನಲ್ಲಿ ಅಮೆರಿಕದ ಕಾನ್ಸುಲೇಟ್‌ ಕಚೇರಿ ಉದ್ಘಾಟನಯ ನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್‌ ಗ್ಯಾರ್‌ಸೆಟಿ ಮತ್ತು ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಪರಸ್ಪರ ಅಭಿನಂದಿಸಿದರು  

   

–ಪಿಟಿಐ ಚಿತ್ರ

ಬೆಂಗಳೂರು: ಬೆಂಗಳೂರಿನಲ್ಲಿ ಅಮೆರಿಕದ ಕಾನ್ಸುಲೇಟ್‌ ಕಚೇರಿ ಶುಕ್ರವಾರ ಕಾರ್ಯಾರಂಭ ಮಾಡಿದ್ದು, ಇಲ್ಲಿಂದಲೇ ವೀಸಾ ಸೇವೆ ಪಡೆಯಲು ಕರ್ನಾಟಕದ ಜನರು ಇನ್ನಷ್ಟು ತಿಂಗಳು ಕಾಯಬೇಕಿದೆ.

ADVERTISEMENT

ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಅವರು ನಗರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನೂತನ ಕಾನ್ಸುಲೇಟ್‌ ಅನ್ನು ಉದ್ಘಾಟಿಸಿದರು.

ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್‌ ಗ್ಯಾರ್‌ಸೆಟಿ, ‘ಇಲ್ಲಿ ಅಮೆರಿಕದ ಪ್ರಜೆಗಳ ಸಹಾಯ ಮತ್ತು ಇತರ ಸೇವೆಗಳನ್ನು ಮಾತ್ರವೇ ಆರಂಭಿಸಲಾಗುತ್ತಿದೆ. ವೀಸಾ ಸೇವೆ ಇಲ್ಲಿ ಲಭ್ಯವಿರುವುದಿಲ್ಲ’ ಎಂದು ಹೇಳಿದರು.

‘ದೇಶದಲ್ಲಿ ನಾಲ್ಕು ಕಾನ್ಸುಲೇಟ್‌ಗಳಲ್ಲಿ ವೀಸಾ ಸೇವೆ ಒದಗಿಸುತ್ತಿದ್ದು, ಪ್ರತಿ ಕಾನ್ಸುಲೇಟ್‌ಗೂ ಕೆಲ ರಾಜ್ಯಗಳ ಅಧಿಕಾರ ವ್ಯಾಪ್ತಿಯನ್ನು ಹಂಚಲಾಗಿದೆ. ಬೆಂಗಳೂರಿನಲ್ಲಿ ವೀಸಾ ಸೇವೆ ಒದಗಿಸುವುದಕ್ಕೂ ಮುನ್ನ ಎಲ್ಲ ಕಾನ್ಸುಲೇಟ್‌ಗಳ ವ್ಯಾಪ್ತಿಯನ್ನು ಮರುಹಂಚಿಕೆ ಮಾಡಬೇಕಿದೆ. ನಂತರ ಬೆಂಗಳೂರು ಕಾನ್ಸುಲೇಟ್‌ಗೂ ವೀಸಾ ನೀಡಿಕೆ ವ್ಯಾಪ್ತಿಯನ್ನು ನಿಗದಿ ಮಾಡಬೇಕಿದೆ. ಇದೊಂದು ದೀರ್ಘ ಪ್ರಕ್ರಿಯೆ ಆಗಿದ್ದು, ಹಲವು ತಿಂಗಳು ಬೇಕಾಗಬಹುದು’ ಎಂದು ಮೂಲಗಳು ಸ್ಪಷ್ಟಪಡಿಸಿವೆ.

‘ಅಮೆರಿಕದ 90,000ದಷ್ಟು ಪ್ರಜೆಗಳು, ಅಧಿಕಾರಿ–ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈ ಕಾನ್ಸುಲೇಟ್‌ ಕಾರ್ಯಾರಂಭದಿಂದ ಆ ಮಂದಿಗೆ ಅನುಕೂಲವಾಗಲಿದೆ’ ಎಂದು ಹೇಳಿವೆ.

ಬೆಂಗಳೂರಿನ ಅಮೆರಿಕ ಕಾನ್ಸುಲೇಟ್‌ ಸದ್ಯಕ್ಕೆ ವಿಠ್ಠಲ್‌ ಮಲ್ಯ ರಸ್ತೆಯಲ್ಲಿರುವ ಜೆ.ಡಬ್ಲ್ಯು.ಮ್ಯಾರಿಯೆಟ್‌ ಬ್ಯುಸಿನೆಸ್‌ ಸ್ಪೇಸ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ತಾತ್ಕಾಲಿಕ ಕಚೇರಿ ಆಗಿದ್ದು, ರಾಜ್ಯ ಸರ್ಕಾರವು ಸೂಕ್ತ ಸ್ಥಳವನ್ನು ಒದಗಿಸಿದ ನಂತರ ಶಾಶ್ವತ ಕಚೇರಿ ಆರಂಭವಾಗಲಿದೆ.

ಭಾರತದಲ್ಲಿ ಕೋಲ್ಕತ್ತ, ಚೆನ್ನೈ, ಮುಂಬೈ ಮತ್ತು ಹೈದರಾಬಾದ್‌ನಲ್ಲಿ ಕಾನ್ಸುಲೇಟ್‌ಗಳಿದ್ದು, ಅಲ್ಲಿ ಅಮೆರಿಕದ ನಾಗರಿಕ ಸಹಾಯ ಸೇವೆ ಮತ್ತು ವೀಸಾ ಸೇವೆ ಲಭ್ಯವಿದೆ. ಆದರೆ ಬೆಂಗಳೂರಿನಲ್ಲಿ ಕಾನ್ಸುಲೇಟ್‌ ಇಲ್ಲದೇ ಇದ್ದುದರಿಂದ ರಾಜ್ಯದ ಜನರು ಅಮೆರಿಕದ ವೀಸಾ ಪಡೆಯಲು ಚೆನ್ನೈಗೆ ಹೋಗಬೇಕಾಗಿದೆ.

ಹೀಗಾಗಿ, ಇಲ್ಲಿ ಕಾನ್ಸುಲೇಟ್‌ ಆರಂಭಿಸಬೇಕು ಎಂದು ಎರಡೂವರೆ ದಶಕಗಳಲ್ಲಿ ರಾಜ್ಯದಲ್ಲಿದ್ದ ಸರ್ಕಾರಗಳು, ಕೇಂದ್ರದ ವಿದೇಶಾಂಗ ಸಚಿವರು ಮತ್ತು ಸಂಸದರೂ ಅಮೆರಿಕದ ರಾಯಭಾರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಭಾರತದಲ್ಲಿ ನಾಲ್ಕು ಕಾನ್ಸುಲೇಟ್‌ ಇರುವುದರಿಂದ ಇಲ್ಲಿ ಕಾನ್ಸುಲೇಟ್‌ ಆರಂಭಿಸುವ ಮನವಿ ಫಲಿಸಿರಲಿಲ್ಲ. ಈಗ ಕಚೇರಿ ಆರಂಭವಾಗಿದ್ದರೂ ವೀಸಾ ಸೇವೆ ಈಗಲೇ ಲಭ್ಯವಿರುವುದಿಲ್ಲ.

‘ಎಲ್ಲ ಸೇವೆಗಳು ಶೀಘ್ರ ಆರಂಭವಾಗಲಿ’

ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಯಲ್ಲಿ ವಾರ್ಷಿಕ 8.83 ಲಕ್ಷ ಪಾಸ್‌ಪೋರ್ಟ್‌ಗಳನ್ನು ನೀಡಲಾಗುತ್ತಿದೆ. ಇಲ್ಲಿ ಕಾನ್ಸುಲೇಟ್‌ನ ಅವಶ್ಯ ಎಷ್ಟಿದೆ ಎಂಬುದನ್ನು ಈ ಸಂಖ್ಯೆಯೇ ವಿವರಿಸುತ್ತದೆ. ಬೆಂಗಳೂರಿನಲ್ಲಿ ಅಮೆರಿಕದ ನೂರಾರು ನಾಗರಿಕರು ನೆಲಸಿದ್ದಾರೆ. ಕರ್ನಾಟಕದ ಜನತೆ ಜತೆಗೆ ಇಲ್ಲಿ ಕಾನ್ಸುಲೇಟ್‌ ಬೇಕು ಎಂಬುದು ಆ ನಾಗರಿಕರ ಬೇಡಿಕೆಯೂ ಆಗಿತ್ತು. ಅದು ಈಗ ಈಡೇರಿದೆ. ಎಲ್ಲ ಸೇವೆಗಳು ಶೀಘ್ರ ಆರಂಭವಾದಷ್ಟೂ ಅನುಕೂಲ ಹೆಚ್ಚಾಗಲಿದೆ.

-ಎಸ್‌.ಜೈಶಂಕರ್‌ ವಿದೇಶಾಂಗ ಸಚಿವ

‘ಗಟ್ಟಿಗೊಳ್ಳಲಿದೆ ದ್ವಿಪಕ್ಷೀಯ ಸಂಬಂಧ’

ಅಮೆರಿಕವು ವಿದೇಶದಲ್ಲಿ ಅತಿಹೆಚ್ಚು ಕಾನ್ಸುಲೇಟ್‌ ಮತ್ತು ವಿದೇಶಾಂಗ ವ್ಯವಹಾರಗಳ ಕಚೇರಿಗಳನ್ನು ಭಾರತದಲ್ಲಿ ಹೊಂದಿದೆ. 1776ರಲ್ಲಿ ಅಮೆರಿಕ ಸ್ವಾತಂತ್ರ್ಯಗೊಂಡ ನಂತರ ಮೊದಲ ಕಾನ್ಸುಲೇಟ್‌ ಆರಂಭವಾಗಿದ್ದು ಫ್ರಾನ್ಸ್‌ನಲ್ಲಿ. ಎರಡನೆಯದ್ದು ಕೋಲ್ಕತ್ತದಲ್ಲಿ. ಭಾರತವು ಅಮೆರಿಕಕ್ಕೆ ಎಷ್ಟು ಮುಖ್ಯ ಎಂಬುದನ್ನು ಅದು ತೋರಿಸುತ್ತದೆ. ಈಗ ಐದನೇ ಕಾನ್ಸುಲೇಟ್‌ ಆರಂಭವಾಗಿರುವುದು ನಮ್ಮ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.

ಎರಿಕ್‌ ಗ್ಯಾರ್‌ಸೆಟಿ ಭಾರತದಲ್ಲಿನ ಅಮೆರಿಕ ರಾಯಭಾರಿ

‘ಇಲ್ಲಿ ಕಾನ್ಸುಲೇಟ್‌ ಅವಶ್ಯ ಇತ್ತು’

ಬೆಂಗಳೂರು ಯೋಜಿತ ನಗರವಲ್ಲ ಎಂಬ ಅಪವಾದ ಇದೆ. ಆದರೆ ದೇಶದಲ್ಲೇ ಅತಿಹೆಚ್ಚು ಸುರಕ್ಷಿತ ನಗರ ಎಂಬ ಖ್ಯಾತಿ ಬೆಂಗಳೂರಿನದ್ದು. ಹೀಗಾಗಿಯೇ ಜಾಗತಿಕ ಕಂಪನಿಗಳಲ್ಲಿ ಹಲವು ತಮ್ಮ ಕೇಂದ್ರ ಕಚೇರಿಯನ್ನು ಇಲ್ಲಿ ಹೊಂದಿವೆ. ದೇಶದಿಂದ ಮಾಹಿತಿ ತಂತ್ರಜ್ಞಾನ ಸೇವೆಯು ಅತಿಹೆಚ್ಚು ರಫ್ತಾಗುವುದು ಇಲ್ಲಿಂದಲೇ. ಇಲ್ಲಿ ಅಮೆರಿಕದ ಕಾನ್ಸುಲೇಟ್‌ನ ಅವಶ್ಯ ಇತ್ತು. ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಆ ಪ್ರಯತ್ನ ಆರಂಭಿಸಿದ್ದರು. ಹಲವರ ಪ್ರಯತ್ನದ ನಂತರ ಅದು ಈಗ ಈಡೇರಿದೆ. -ಡಿ.ಕೆ.ಶಿವಕುಮಾರ್‌ ಉಪ ಮುಖ್ಯಮಂತ್ರಿ

ನಗರದಲ್ಲಿವೆ 12 ರಾಯಭಾರ ಕಚೇರಿಗಳು

ಭಾರತದಲ್ಲಿ ಅತಿಹೆಚ್ಚು ವಿದೇಶಿ ರಾಯಭಾರ ಕಚೇರಿಗಳನ್ನು ಹೊಂದಿರುವ ನಗರ ಬೆಂಗಳೂರು. ಇದು ಬೆಂಗಳೂರಿನ ಪ್ರಾಮುಖ್ಯ ಎಷ್ಟು ಎಂಬುದನ್ನು ಹೇಳುತ್ತದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಹೇಳಿದರು.  ನಗರದಲ್ಲಿ ವಿವಿಧ ದೇಶಗಳ ರಾಯಭಾರ ಕಚೇರಿಗಳು ಹೈಕಮಿಷನ್‌ ಕಚೇರಿ ಮತ್ತು ಕಿರು ರಾಯಭಾರ ಕಚೇರಿಗಳು ಇವೆ. ಅವುಗಳ ವಿವರ ಇಂತಿದೆ.

* ಫ್ರಾನ್ಸ್‌ನ ಕಾನ್ಸುಲೇಟ್‌ ಜನರಲ್‌

* ಜಪಾನ್‌ನ ಕಾನ್ಸುಲೇಟ್‌ ಜನರಲ್‌

* ಕೆನಡಾದ ಕಾನ್ಸುಲೇಟ್‌ ಜನರಲ್‌

* ಇಟಲಿಯ ಕಾನ್ಸುಲೇಟ್‌ ಜನರಲ್‌

* ಸ್ವಿಟ್ಜರ್ಲೆಂಡ್‌ನ ಕಾನ್ಸುಲೇಟ್‌ ಜನರಲ್‌

* ಇಸ್ರೇಲ್‌ನ ಕಾನ್ಸುಲೇಟ್‌ ಜನರಲ್‌

* ಬ್ರಿಟನ್‌ನ ಡೆಪ್ಯುಟಿ ಹೈಕಮಿಷನ್‌ 

* ಸ್ಪೇನ್‌ನ ಹಾನರರಿ ಕಾನ್ಸುಲೇಟ್‌

* ಕೊಲಂಬಿಯದ ಹಾನರರಿ ಕಾನ್ಸುಲೇಟ್‌

* ಜೆಕ್‌ ರಿಪಬ್ಲಿಕ್‌ನ ಹಾನರರಿ ಕಾನ್ಸುಲೇಟ್‌

* ಜಿಬೋಟಿಯ ಹಾನರರಿ ಕಾನ್ಸುಲೇಟ್‌

* ಎಲ್‌ ಸಾಲ್ವಡಾರ್‌ ಹಾನರರಿ ಕಾನ್ಸುಲೇಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.