ADVERTISEMENT

ಕಟೀಲು ದೇವಸ್ಥಾನದಲ್ಲಿ ನಿರ್ಬಂಧ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 2:09 IST
Last Updated 8 ಜೂನ್ 2020, 2:09 IST
ಕಟೀಲು ದುರ್ಗಾಪರಮೇಶ್ವರಿ
ಕಟೀಲು ದುರ್ಗಾಪರಮೇಶ್ವರಿ    

ಮುಲ್ಕಿ: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಲಾಕ್‌ಡೌನ್‌ ವೇಳೆ ಇದ್ದ ನಿರ್ಬಂಧವನ್ನೇ ಮುಂದುವರಿಸಲು ತೀರ್ಮಾನಿಸಿದೆ.

‘ದರ್ಶನಕ್ಕೆ ಅವಕಾಶ ನೀಡಿದರೆ ಅತಿ ಹೆಚ್ಚು ಭಕ್ತರು ಕಟೀಲಿಗೆ ಬರುವ ಸಾಧ್ಯತೆ ಇದೆ. ಭಾರಿ ಸಂಖ್ಯೆಯಲ್ಲಿ ಜನರು ಕ್ಷೇತ್ರಕ್ಕೆ ಬಂದರೆ ಅವರನ್ನು ನಿಯಂತ್ರಿಸುವ ವ್ಯವಸ್ಥೆ ನಮ್ಮಲ್ಲಿ ಸದ್ಯಕ್ಕೆ ಇಲ್ಲ. ಜತೆಗೆ ಕಟೀಲು ಗ್ರಾಮ ಪಂಚಾಯಿತಿ ಹಾಗೂ ಸಮೀಪದ ಎಕ್ಕಾರು ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಕೋವಿಡ್‌–19 ಪ್ರಕರಣಗಳು ದೃಢಪಟ್ಟಿವೆ. ಈ ಕಾರಣದಿಂದ ನಿರ್ಬಂಧ ತೆರವುಗೊಳಿಸದಿರಲು ನಿರ್ಧರಿಸಲಾಗಿದೆ’ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ತಿರುಮಲ ತಿರುಪತಿ ಮಾದರಿಯಲ್ಲಿ ಆನ್‌ಲೈನ್‌ ದರ್ಶನದ (ಉಚಿತವಾಗಿ) ವ್ಯವಸ್ಥೆ ಮಾಡುವ ಸಿದ್ಧತೆ ನಡೆದಿದೆ. ಈ ನಿಟ್ಟಿನಲ್ಲಿ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗುತ್ತಿದೆ. ನಂತರ ಹಂತ ಹಂತವಾಗಿ ದೇವಳವನ್ನು ತೆರೆಯುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಗೋಕರ್ಣ: ಸ್ಥಳೀಯರಿಗೆ ಪ್ರವೇಶ
ಗೋಕರ್ಣ: ಸರ್ಕಾರದ ಆದೇಶದಂತೆ ಗೋಕರ್ಣ ಮಹಾಬಲೇಶ್ವರದೇವಸ್ಥಾನದಲ್ಲಿ ಆರಂಭದ 15 ದಿನ ಸ್ಥಳೀಯರಿಗೆ ಮಾತ್ರಮಹಾಬಲೇಶ್ವರನ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಕಡ್ಡಾಯವಾಗಿ ಮಾಸ್ಕ್‌ ಧರಿಸಲೇಬೇಕು ಹಾಗೂ ಅಂತರ ಕಾಯ್ದುಕೊಳ್ಳಬೇಕು’ ಎಂದು ದೇವಸ್ಥಾನದ ಆಡಳಿತಧಿಕಾರಿ ಜಿ.ಕೆ.ಹೆಗಡೆ ತಿಳಿಸಿದ್ದಾರೆ.

ಗರ್ಭಗುಡಿಗೆ ಪ್ರವೇಶವಿಲ್ಲ: ಸ್ಥಳೀಯರಿಗೂ ನಂದಿಗೃಹದವರೆಗೆ ಮಾತ್ರ ಹೋಗಲು ಅವಕಾಶವಿದ್ದು, ಅಲ್ಲಿಂದಲೇ ದರ್ಶನ ಪಡೆಯಬೇಕು. ತೀರ್ಥ ಮತ್ತು ಪ್ರಸಾದ ವಿತರಣೆ ಇರುವುದಿಲ್ಲ ಎಂದಿದ್ದಾರೆ.

ಮಾರಿಕಾಂಬಾ ದೇವಾಲಯ ದರ್ಶನ ಆರಂಭ
ಶಿರಸಿ: ಇಲ್ಲಿನ ಮಾರಿಕಾಂಬಾ ದೇವಾಲಯದಲ್ಲಿ ಸೋಮವಾರದಿಂದ ದೇವಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 8ರಿಂದ ಸಂಜೆ 6 ಗಂಟೆಯ ತನಕ ಭಕ್ತರು ಮಾರಿಕಾಂಬೆಯ ದರ್ಶನ ಪಡೆಯಬಹುದು’ ಎಂದು ಧರ್ಮದರ್ಶಿ ಮಂಡಳಿ ಅಧ್ಯಕ್ಷ ಡಾ.ವೆಂಕಟೇಶ ನಾಯ್ಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.