ADVERTISEMENT

ಬಿಡ್ ಬಿಟ್ಟುಕೊಡಲು ಕಮಿಷನ್‌: ರಾಜ್ಯ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಅಮಾನತು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 20:29 IST
Last Updated 3 ಫೆಬ್ರುವರಿ 2026, 20:29 IST
<div class="paragraphs"><p>ಅಮಾನತು</p></div>

ಅಮಾನತು

   

ಬೆಂಗಳೂರು: ಗುತ್ತಿಗೆ ಬಿಡ್‌ಗೆ ಸಂಬಂಧಿಸಿದಂತೆ ಶೇ 3ರಷ್ಟು ಕಮಿಷನ್‌ಗೆ ಬೇಡಿಕೆ ಇಟ್ಟ ರಾಜ್ಯ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಜಗನ್ನಾಥ್‌ ಬಿ. ಶೇಗಜಿ ಹಾಗೂ ಸಂಘಟನಾ ಕಾರ್ಯದರ್ಶಿ ಹಣಮಂತ ರಾಯಪ್ಪ ಚಿಂಚಲಿ ಅವರನ್ನು ಸಂಘದಿಂದ ಅಮಾನತು ಮಾಡಲಾಗಿದೆ.

ಜಗನ್ನಾಥ್‌ ಮತ್ತು ಹಣಮಂತ ಅವರು ಗುತ್ತಿಗೆ ಬಿಡ್‌ಗೆ ಸಂಬಂಧಿಸಿದಂತೆ ಗುತ್ತಿಗೆದಾರರ ಜೊತೆ ಶೇ 3ರಷ್ಟು ಕಮಿಷನ್‌ ಪಡೆಯುವ ಬಗೆಗಿನ ಮಾತುಕತೆಯ ಆಡಿಯೊ ಮತ್ತು ವಿಡಿಯೊ ಮಂಗಳವಾರ ಬೆಳಿಗ್ಗೆ ಬಹಿರಂಗವಾಗಿತ್ತು. ಮಾಧ್ಯಮಗಳಲ್ಲಿ ಇದು ಪ್ರಸಾರವಾಗಿದ್ದನ್ನು ಗಂಭೀರವಾಗಿ ಪರಿಗಣಿಸಿದ ಸಂಘ ಅವರನ್ನು ಅಮಾನತು ಮಾಡಿ, ವಿಚಾರಣೆಗೆ ಆರು ಹಿರಿಯ ಸದಸ್ಯರ ಸಮಿತಿಯನ್ನು ನೇಮಿಸಿದೆ.

ADVERTISEMENT

‘ಪ್ರಕರಣದ ಬಗ್ಗೆ ಸಂಘದಲ್ಲಿ ಮಂಗಳವಾರ ಮಧ್ಯಾಹ್ನ ಸಭೆ ನಡೆಸಲಾಯಿತು. ಸಂಘದ ಧ್ಯೇಯೋದ್ದೇಶ ಮತ್ತು ಗೌರವಕ್ಕೆ ಧಕ್ಕೆ ತರುವಂತೆ ವರ್ತಿಸಿರುವ ಜಗನ್ನಾಥ್‌ ಹಾಗೂ ಹಣಮಂತ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಅವರ ನಿರ್ದೇಶಕ ಸ್ಥಾನದ ವಿಚಾರಣೆಯನ್ನು ಕಾಯ್ದಿರಿಸಿ ಸಂಘದಿಂದ ಅವರನ್ನು ಬಿಡುಗಡೆ ಮಾಡಲಾಗಿದೆ. ಎಲ್ಲ 32  ಆಡಳಿತ ಮಂಡಳಿ ಸದಸ್ಯರ ಜೊತೆ, ದೂರವಾಣಿ ಮೂಲಕ ಅಭಿಪ್ರಾಯ ಸಂಗ್ರಹಿಸಲಾಯಿತು. ಸತ್ಯಾಸತ್ಯತೆಯನ್ನು ಅರಿಯಲು ಹಾಗೂ ವಿಚಾರಣೆ ನಡೆಸಲು ಸಂಘದ ಆರು ಹಿರಿಯ ಸದಸ್ಯರ ಸಮಿತಿ ರಚಿಸಲಾಗಿದೆ’ ಎಂದು ಸಂಘದ ಅಧ್ಯಕ್ಷ ಆರ್‌. ಮಂಜುನಾಥ್‌ ಅವರು ಮಾಹಿತಿ ನೀಡಿದರು.

‘ಸರ್ಕಾರದಿಂದ ಗುತ್ತಿಗೆದಾರರಿಗೆ ಬಾಕಿ ಇರುವ ₹37 ಸಾವಿರ ಕೋಟಿ ಹಣವನ್ನು ಬಿಡುಗಡೆ ಮಾಡಿಸಲು ಸಂಘ ಹೋರಾಡುತ್ತಿರುವ ಸಮಯದಲ್ಲಿ, ನಮ್ಮ ಸಂಘದ ಸದಸ್ಯರೇ ಇಂತಹ ಮಾತುಗಳನ್ನಾಡಿರುವುದು ನಮಗೆ ಆಘಾತಕಾರಿಯಾಗಿದೆ. ಸಂಘದ ಗುತ್ತಿಗೆದಾರರ ಹಿತ ಕಾಪಾಡಲು ನಾವು ಎಂದಿಗೂ ಹೋರಾಟ ಮಾಡುತ್ತೇವೆ. ಇಂತಹ ವಿಷಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.