ADVERTISEMENT

ಪಿಎಂ ಕೇರ್ಸ್ ಬದಲು ಮುಖ್ಯಮಂತ್ರಿ ನಿಧಿಗೆ ದೇಣಿಗೆ ನೀಡಿ: ಕೆಪಿಸಿಸಿ ಲಕ್ಷ್ಮಣ್

ಪಿಎಂ ಕೇರ್ಸ್‌ ನಿಧಿಯ ಮಾಹಿತಿ ಬಹಿರಂಗಗೊಳಿಸಿ–ಕಾಂಗ್ರೆಸ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2020, 14:17 IST
Last Updated 17 ಏಪ್ರಿಲ್ 2020, 14:17 IST
ಕೆಪಿಸಿಸಿ ವಕ್ತಾರ ಲಕ್ಷ್ಮಣ್
ಕೆಪಿಸಿಸಿ ವಕ್ತಾರ ಲಕ್ಷ್ಮಣ್   

ಮೈಸೂರು: ‘ಕೋವಿಡ್‌–19 ನಿಯಂತ್ರಣ ಹಾಗೂ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವವರ ನೆರವಿಗಾಗಿ ದೇಣಿಗೆ ಕೊಡಲಿಚ್ಚಿಸುವ ರಾಜ್ಯದ ಜನರು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಡಿ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮನವಿ ಮಾಡಿದರು.

‘ಪಿಎಂ ಕೇರ್ಸ್‌ ನಿಧಿಗೆ ದೇಣಿಗೆ ನೀಡಿದರೆ, ರಾಜ್ಯದ ಜನರಿಗೆ ಉಪಕಾರಿಯಾಗಲ್ಲ. ಅದರ ನೆರವು ನಮಗೆ ಸಿಗುವುದು ಅಷ್ಟಕ್ಕಷ್ಟೇ. ಆದ್ದರಿಂದ ದಾನ ನೀಡುವ ಎಲ್ಲರೂ ಸಿಎಂ ನಿಧಿಗೆ ನೀಡಿ’ ಎಂದು ಶುಕ್ರವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೋರಿದರು.

‘ಲಾಕ್‌ಡೌನ್‌ನ ಸಂಕಷ್ಟದಲ್ಲಿ ಸಿಲುಕಿರುವ ರಾಜ್ಯದ ರೈತರ ನೆರವಿಗೆ ಸರ್ಕಾರ ಧಾವಿಸದಾಗಿದೆ. ಘೋಷಣೆಗಳೆಲ್ಲ ಹೇಳಿಕೆಗೆ ಸೀಮಿತವಾಗಿವೆ. ರೈತರೊಟ್ಟಿಗೆ ನಾವಿದ್ದೇವೆ ಎಂದು ಸಚಿವರು ನೀಡುವ ಹೇಳಿಕೆ ಕಣ್ಣೋರೆಸುವ ತಂತ್ರವಾಗಿದೆ. ಸಚಿವರಾದ ಕೆ.ಎಸ್.ಈಶ್ವರಪ್ಪ, ಜಗದೀಶಶೆಟ್ಟರ್ ನಾಪತ್ತೆಯಾಗಿದ್ದಾರೆ. ಸುಧಾಕರ್, ಶ್ರೀರಾಮುಲು ಕೋವಿಡ್–19 ಟಾಸ್ಕ್‌ಫೋರ್ಸ್ ಸಮಿತಿ ಸಭೆಗೆ ಗೈರಾಗಿದ್ದಾರೆ. ಇಂತಹ ಹೊತ್ತಲ್ಲೂ ರಾಜಕೀಯ ತಿಕ್ಕಾಟ ಇವರಿಗೆ ಬೇಕಿದೆಯಾ ?’ ಎಂದು ಲಕ್ಷ್ಮಣ್ ಕಿಡಿಕಾರಿದರು.

ADVERTISEMENT

‘ಪ್ರಜಾಪ್ರಭುತ್ವ ವ್ಯವಸ್ಥೆ ಅಳವಡಿಸಿಕೊಂಡಿರುವ ಯಾವೊಂದು ದೇಶದಲ್ಲೂ ನಮ್ಮಲ್ಲಿ ಇದೀಗ ಪ್ರಧಾನಿ ಮೋದಿ ಆರಂಭಿಸಿದ ಪಿಎಂ ಕೇರ್ಸ್‌ ಫಂಡ್ ತರಹದ ನಿಧಿ ಸ್ಥಾಪನೆಗೊಂಡಿಲ್ಲ. ಸಂಕಷ್ಟದ ಅವಧಿಯಲ್ಲಿ ಇದನ್ನು ಯಾರೊಬ್ಬರೂ ಪ್ರಶ್ನಿಸಬಾರದು. ಜನರಲ್ಲಿನ ಸಂಶಯ ದೂರವಾಗಬೇಕು ಎಂದರೇ, ಈ ನಿಧಿಗೆ ಹರಿದು ಬರುತ್ತಿರುವ ದೇಣಿಗೆ ಎಷ್ಟು ? ಯಾವ್ಯಾವುದಕ್ಕೆ ವ್ಯಯಿಸಲಾಗಿದೆ ? ಎಂಬ ಮಾಹಿತಿಯನ್ನು ಮೊದಲು ಬಹಿರಂಗಗೊಳಿಸಲಿ’ ಎಂದು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ ಆಗ್ರಹಿಸಿದರು.

ಮೂಲೆ ನಿವೇಶನದ ಹರಾಜಿನ ಮೇಲೆ ಕಣ್ಗಾವಲು: ‘ರಾಜ್ಯದ 10 ನಗರಾಭಿವೃದ್ಧಿ ಪ್ರಾಧಿಕಾರದ ಒಡೆತನದಲ್ಲಿರುವ 19 ಸಾವಿರ ಮೂಲೆ ನಿವೇಶನಗಳನ್ನು ಹರಾಜು ಹಾಕಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಇದರ ಮೇಲೆ ಕಾಂಗ್ರೆಸ್ ಹದ್ದಿನ ಕಣ್ಗಾವಲಿಡಲಿದೆ’ ಎಂದು ಕೆಪಿಸಿಸಿ ವಕ್ತಾರರು ತಿಳಿಸಿದರು.

‘ಎಲ್ಲ ಪಕ್ಷದಲ್ಲೂ ರಿಯಲ್ ಎಸ್ಟೇಟ್ ಮಾಫಿಯಾದ ರಾಜಕಾರಣಿಗಳಿದ್ದಾರೆ. ಅದರಲ್ಲೂ ಬಿಜೆಪಿಯಲ್ಲೇ ಈ ಸಂಖ್ಯೆ ಹೆಚ್ಚಿದೆ. ಸಚಿವರ ಮಕ್ಕಳಿಗೆ ಅನುಕೂಲ ಮಾಡಿಕೊಡಲು ಲಾಕ್‌ಡೌನ್ ಅವಧಿಯಲ್ಲೇ ಮುಖ್ಯಮಂತ್ರಿ ಹರಾಜಿಗೆ ಮುಂದಾಗಿದ್ದಾರೆ. ಇದರ ಪ್ರತಿಯೊಂದು ಬೆಳವಣಿಗೆ ಮೇಲೆ ನಿಗಾ ಇಟ್ಟು, ಗಂಭೀರವಾಗಿ ಪರಿಶೀಲಿಸಲಾಗುವುದು. ಸ್ವಜನಪಕ್ಷಪಾತ, ಅಕ್ರಮದ ವಾಸನೆ ಗೋಚರಿಸುತ್ತಿದ್ದಂತೆ ಹರಾಜಿಗೆ ಅಡ್ಡಿಪಡಿಸಲಾಗುವುದು’ ಎಂದು ಹೇಳಿದರು.

‘ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ತಮ್ಮ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರ ಜತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸುತ್ತಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಈ ವಿದ್ಯಮಾನದ ಬಗ್ಗೆ ಜಿಲ್ಲಾಧಿಕಾರಿ ಬಳಿಗೆ ನಿಯೋಗ ತೆರಳಿ ಚರ್ಚೆ ನಡೆಸಲಿದ್ದೇವೆ’ ಎಂದು ಅವರು ತಿಳಿಸಿದರು.

‘ಡಯಾಲಿಸಿಸ್ ರೋಗಿಗಳ ನೆರವಿಗೆ ಮುಂದಾಗಿ’

‘ದಿನದಿಂದ ದಿನಕ್ಕೆ ಡಯಾಲಿಸಿಸ್ ರೋಗಿಗಳ ಸಂಕಷ್ಟ ಹೆಚ್ಚುತ್ತಿದೆ. ಆರೋಗ್ಯದಲ್ಲಿ ವ್ಯತ್ಯಯವಾಗಿದೆ. ಈ ಹೊತ್ತಲ್ಲಿ ಜಿಲ್ಲಾಡಳಿತ ಇವರ ನೆರವಿಗೆ ಮುಂದಾಗಬೇಕಿದೆ. ತಾಲ್ಲೂಕು ಆಸ್ಪತ್ರೆಗಳಲ್ಲೇ ಡಯಾಲಿಸಿಸ್‌ಗೆ ಅವಕಾಶ ಕೊಡಬೇಕಿದೆ. ಅಗತ್ಯ ಬಿದ್ದರೆ ಸರ್ಕಾರಿ ವಾಹನದಲ್ಲೇ ಮೈಸೂರಿಗೆ ಕರೆ ತಂದು ಡಯಾಲಿಸಿಸ್ ಮಾಡಿಸಿಕೊಳ್ಳಲು ನೆರವು ನೀಡಬೇಕು’ ಎಂದು ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಆಗ್ರಹಿಸಿದರು.

‘ನಂಜನಗೂಡು, ಮೈಸೂರು ಹೊರತುಪಡಿಸಿ ಉಳಿದ ತಾಲ್ಲೂಕುಗಳಲ್ಲಿ ಕೋವಿಡ್ ಪತ್ತೆಯಾಗಿಲ್ಲ. ಇಲ್ಲಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಇತರೆ ರೋಗಿಗಳಿಗೆ ಚಿಕಿತ್ಸೆ ನೀಡಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಲಿ’ ಎಂದು ಅವರು ಒತ್ತಾಯಿಸಿದರು.

‘ಎನ್‌ಡಿಆರ್‌ಎಫ್‌ ನಿಧಿಯಿಂದ ಜಿಲ್ಲೆಗೆ ₹ 13 ಕೋಟಿ ಅನುದಾನ ಬಂದಿದೆ. ಈ ಮೊತ್ತ ಬಳಸಿಕೊಂಡು ಕಾಳಜಿ ಕೇಂದ್ರ ತೆರೆಯುವುದಾಗಿ ಸಂಸದ ಪ್ರತಾಪಸಿಂಹ ತಿಳಿಸಿದ್ದಾರೆ. ಆದಷ್ಟು ಬೇಗ ಇದರ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಜನರಿಗೆ ನೀಡಲಿ’ ಎಂದು ಅಧ್ಯಕ್ಷರು ಒತ್ತಾಯಿಸಿದರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ‘ಹಸಿವು–ಬಡತನದ ಸುನಾಮಿ ಎದುರಿಸಲು ದೇಶ ಸಜ್ಜಾಗಬೇಕಿದೆ. ನೋಂದಣಿಯಾಗದ ಕಟ್ಟಡ ಕಾರ್ಮಿಕರಿಗೂ ಸಹಾಯಧನ ನೀಡಬೇಕಿದೆ. ಕಾಂಗ್ರೆಸ್‌ ಸಹ ಕೋವಿಡ್‌ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಧಾವಿಸಿದೆ. ಶೀಘ್ರದಲ್ಲೇ ರಕ್ತದಾನ ಶಿಬಿರ ಆಯೋಜಿಸಲಿದ್ದೇವೆ’ ಎಂದು ಹೇಳಿದರು.

‌ದ್ವೇಷ ಬಿತ್ತುವಿಕೆ ತಡೆಗಟ್ಟಿ

‘ಕೊರೊನಾ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತಿರುವುದರಲ್ಲೂ ಜನಾಂಗೀಯ, ಧರ್ಮಾಧಾರಿತ ದ್ವೇಷ ಬಿತ್ತುವಿಕೆ ಎಲ್ಲೆಡೆ ನಡೆದಿದೆ. ಸರ್ಕಾರ ತುರ್ತಾಗಿ ಇದಕ್ಕೆ ತಡೆ ಹಾಕಬೇಕಿದೆ’ ಎಂದು ಕೆಪಿಸಿಸಿ ವಕ್ತಾರೆ ಮಂಜುಳಾ ಮಾನಸ ಆಗ್ರಹಿಸಿದರು.

‘ಸಂಕಷ್ಟದ ಹೊತ್ತಲ್ಲೂ ಕೇಂದ್ರ–ರಾಜ್ಯ ಸರ್ಕಾರ ಮಲಗಿವೆ. ಸಚಿವರ ನಡುವೆ ಸಮನ್ವಯವೇ ಇಲ್ಲವಾಗಿದೆ. ಲಾಕ್‌ಡೌನ್‌ ಮುಗಿಯುತ್ತಿದ್ದಂತೆ ಸಾಮಾನ್ಯ ಜನರ ನೆರವಿಗೆ ಧಾವಿಸಲು ಈಗಿನಿಂದಲೇ ಸಜ್ಜಾಗಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.