ADVERTISEMENT

ಕೊರೊನಾ: ರಾಜ್ಯದಲ್ಲಿ 2000 ಗಡಿ ದಾಟಿದ ಸೋಂಕಿತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 24 ಮೇ 2020, 19:32 IST
Last Updated 24 ಮೇ 2020, 19:32 IST
   

ಬೆಂಗಳೂರು: ಮಹಾರಾಷ್ಟ್ರದಿಂದ ವಾಪಸ್ ಆದವರಲ್ಲಿ 100 ಮಂದಿ ಸೇರಿದಂತೆ ರಾಜ್ಯದಲ್ಲಿ ಭಾನುವಾರ ಒಂದೇ ದಿನ 130 ಜನರು ಸೋಂಕಿತರಾಗಿದ್ದು, ರಾಜ್ಯದಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಈಗ ಎರಡು ಸಾವಿರದ ಗಡಿ (2,089) ದಾಟಿದೆ.

ರಾಜ್ಯದಲ್ಲಿ ಮಾ.8 ರಂದು ಬೆಂಗಳೂರಿನಲ್ಲಿ ಪ್ರಥಮ ಕೋವಿಡ್ ಪ್ರಕರಣ ವರದಿಯಾಗಿತ್ತು. ಅದಾದ ಬಳಿಕ ಪ್ರಕರಣಗಳ ಸಂಖ್ಯೆ 500ರ ಗಡಿ ತಲುಪಲು 27 ದಿನಗಳು ಬೇಕಾಗಿದ್ದವು. ಆದರೆ, ಕಡೆಯ 500 ಪ್ರಕರಣಗಳು ಕೇವಲ ಮೂರು ದಿನಗಳಲ್ಲಿ ವರದಿಯಾಗಿವೆ. ಈ ಮೊದಲು ವಿದೇಶದಿಂದ ಬಂದವರು ಹಾಗೂ ರೋಗಿಗಳ ಸಂಪರ್ಕದಿಂದ ಹೆಚ್ಚಿನ ಪ್ರಕರಣಗಳು ವರದಿಯಾಗಿದ್ದವು. ಆದರೆ, ಲಾಕ್‌ ಡೌನ್‌ ಸಡಿಲಿಸಿದ ಬಳಿಕ ಅನ್ಯ ರಾಜ್ಯಗಳಿಂದ ತವರೂರಿಗೆ ವಾಪಸ್ ಆದವರು ಅಧಿಕ ಸಂಖ್ಯೆಯಲ್ಲಿ ಸೋಂಕಿತರಾಗುತ್ತಿದ್ದಾರೆ. ಅದರಲ್ಲೂ ಏ.24ರ ಬಳಿಕ ಮಹಾರಾಷ್ಟ್ರದಿಂದ ಬಂದವರಲ್ಲಿ 812 ಮಂದಿಗೆ ಸೋಂಕು ತಗುಲಿದೆ.

ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಮುಖ ಮಾಡಿದ ಬೆನ್ನಲ್ಲಿಯೇ ಪ್ರಯೋಗಾಲಯಗಳ ಸಂಖ್ಯೆಯನ್ನೂ ಹೆಚ್ಚಳ ಮಾಡಿ, ಪರೀಕ್ಷೆಯ ಸಂಖ್ಯೆಯನ್ನು 12 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಭಾನುವಾರ ಒಂದೇ ದಿನ 10,117 ಮಂದಿಯ ಗಂಟಲ ದ್ರವದ ಮಾದರಿಯನ್ನು ಪರೀಕ್ಷಿಸಲಾಗಿದೆ. ಇದರಿಂದಾಗಿ ಈವರೆಗೆ ಪರೀಕ್ಷೆಗೆ ಒಳಗಾದವರ ಸಂಖ್ಯೆ ಎರಡು ಲಕ್ಷದ ಗಡಿ (2,06,313) ದಾಟಿದೆ.

ADVERTISEMENT

ಚಿಕ್ಕಬಳ್ಳಾಪುರದಲ್ಲಿ 27, ಯಾದಗಿರಿಯಲ್ಲಿ 24, ಉಡುಪಿಯಲ್ಲಿ 23, ಮಂಡ್ಯದಲ್ಲಿ 15, ಹಾಸನದಲ್ಲಿ 14, ಕಲಬುರ್ಗಿಯಲ್ಲಿ 6, ಬೀದರ್‌ನಲ್ಲಿ 6, ದಾವಣಗೆರೆಯಲ್ಲಿ 4, ಉತ್ತರ ಕನ್ನಡದಲ್ಲಿ 2, ಶಿವಮೊಗ್ಗದಲ್ಲಿ 2, ತುಮಕೂರಿನಲ್ಲಿ 2 ಹಾಗೂ ಬೆಂಗಳೂರು, ವಿಜಯಪುರ, ದಕ್ಷಿಣ ಕನ್ನಡ, ಧಾರವಾಡ, ಕೊಡಗಿನಲ್ಲಿ ತಲಾ ಒಂದು ಪ್ರಕರಣ ಹೊಸದಾಗಿ ವರದಿಯಾಗಿದೆ.

ಚಿಕ್ಕಬಳ್ಳಾಪುರದಲ್ಲಿ ವರದಿಯಾದ ಒಟ್ಟು ಪ್ರಕರಣಗಳಲ್ಲಿ 26 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಅಲ್ಲಿನ ಬಾಗೇಪಲ್ಲಿಯ ಗರ್ಭಿಣಿಗೆ ಸೋಂಕು ತಗುಲಿದೆ. 23 ವರ್ಷದ ಯುವತಿಗೆ ಸೋಂಕು ತಗುಲಿರುವಬಗ್ಗೆ ಪತ್ತೆ ಹಚ್ಚಲಾಗುತ್ತಿದೆ.ಉಡುಪಿಯಲ್ಲಿ ವರದಿಯಾದ ಬಹುತೇಕ ಪ್ರಕರಣಗಳಿಗೆ ಮಹಾರಾಷ್ಟ್ರದ ನಂಟಿದ್ದು, ಸೋಂಕಿತರಲ್ಲಿ ಒಂದು ವರ್ಷದ ಮಗು ಕೂಡ ಸೇರಿದೆ. ಕಂಟೈನ್‌ಮೆಂಟ್‌ ವಲಯದಲ್ಲಿ ಕಾರ್ಯನಿರ್ವಹಿಸಿದ್ದ ಮೂವರು ಪೊಲೀಸ್ ಸಿಬ್ಬಂದಿ ಸೋಂಕಿತರಾಗಿದ್ದಾರೆ. ಅಲ್ಲಿನ ಕಾರ್ಕಳ ತಾಲ್ಲೂಕಿನ 9 ತಿಂಗಳ ಗರ್ಭಿಣಿಗೆ ಸೋಂಕು ತಗುಲಿದೆ.

ಮಂಡ್ಯದಲ್ಲಿ 869ನೇ ರೋಗಿಯ ಸಂಪರ್ಕದಿಂದ ನಾಲ್ವರು ಸೋಂಕಿತರಾಗಿದ್ದಾರೆ. ಉಳಿದವರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಹಾಸನದಲ್ಲಿ ಕಂಟೈನ್‌ಮೆಂಟ್‌ ವಲಯದಲ್ಲಿ ಸಂಚರಿಸಿದ ಐವರಿಗೆ ಸೋಂಕು ತಗುಲಿದೆ. 8 ಮಂದಿ ಮಹಾರಾಷ್ಟ್ರದಿಂದ ಹಾಗೂ ಒಬ್ಬರು ದಕ್ಷಿಣ ಕನ್ನಡಕ್ಕೆ ಪ್ರಯಾಣ ಮಾಡಿದ ಇತಿಹಾಸ ಹೊಂದಿದ್ದಾರೆ. ದಕ್ಷಿಣ ಕನ್ನಡದ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿಗೂ ಸೋಂಕು ತಗುಲಿದೆ.

ದಾವಣಗೆರೆಯಲ್ಲಿ ಕಂಟೈನ್‌ಮೆಂಟ್‌ ವಲಯದಲ್ಲಿ ಸಂಚರಿಸಿದ ಇಬ್ಬರಿಗೆ ಸೋಂಕು ತಗುಲಿದೆ. 48 ವರ್ಷದ ವ್ಯಕ್ತಿ ಹಾಗೂ 33 ವರ್ಷದ ಮಹಿಳೆ ರೋಗಿಗಳ ಸಂಪರ್ಕದಿಂದ ಸೋಂಕಿತರಾಗಿದ್ದಾರೆ. ಕೊಡಗಿನಲ್ಲಿ ಮುಂಬೈನಿಂದ ವಾಪಸ್ ಆಗಿದ್ದ 26 ವರ್ಷದ ಬ್ಯಾಂಕ್ ಉದ್ಯೋಗಿಯಲ್ಲಿಸೋಂಕು ಕಾಣಿಸಿಕೊಂಡಿದೆ. ತುಮಕೂರಿನಲ್ಲಿ ಕ್ವಾರಂಟೈನ್‌ನಲ್ಲಿದ್ದವರಲ್ಲಿ ಇಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅವರು ಗುಜರಾತ್ ಪ್ರಯಾಣದ ಇತಿಹಾಸ ಹೊಂದಿದ್ದಾರೆ. ಮಹಾರಾಷ್ಟ್ರದಿಂದ ಬಂದಿದ್ದ ಉತ್ತರ ಕನ್ನಡದ ಯಲ್ಲಾಪುರದ ದಂ‍ಪತಿ ಸೋಂಕಿತರಾಗಿದ್ದಾರೆ. ಧಾರವಾಡದಲ್ಲಿ ಆಂಧ್ರಪ್ರದೇಶದಿಂದ ಬಂದಿದ್ದ 24 ವರ್ಷದ ಯುವತಿಗೆ ಸೋಂಕು ತಗುಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.