ADVERTISEMENT

ಉದ್ಯೋಗ ಖಾತರಿ ಅಕ್ರಮ ತನಿಖೆ: ಸಚಿವ ಕೆ.ಎಸ್‌. ಈಶ್ವರಪ್ಪ ಭರವಸೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2020, 20:53 IST
Last Updated 25 ಏಪ್ರಿಲ್ 2020, 20:53 IST
ಕೆ.ಎಸ್‌. ಈಶ್ವರಪ್ಪ
ಕೆ.ಎಸ್‌. ಈಶ್ವರಪ್ಪ    

ಬೆಂಗಳೂರು: ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಕ್ಯಾಸೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದ್ಯೋಗ ಖಾತರಿ ಕಾಮಗಾರಿಗಳಲ್ಲಿ ಅಕ್ರಮ ಪತ್ತೆಯಾದ ಬೆನ್ನಲ್ಲೇ, ಇಡೀ ತಾಲ್ಲೂಕಿನ ಎಲ್ಲ ಪಂಚಾಯಿತಿಗಳಲ್ಲಿ ನಡೆದ ನರೇಗಾ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಲು ಪಂಚಾಯತ್ ರಾಜ್ ಸಚಿವ ಕೆ.ಎಸ್‌. ಈಶ್ವರಪ್ಪ ಆದೇಶಿಸಿದ್ದಾರೆ.

‘ಪ್ರಜಾವಾಣಿ’ ಕಚೇರಿಯಲ್ಲಿ ಶನಿವಾರ ನಡೆದ ಫೋನ್‌ಇನ್ ಕಾರ್ಯಕ್ರಮದಲ್ಲಿ ಕರೆ ಮಾಡಿದ್ದ ಒಂದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕು ಮಂದಿ, ‘500ಕ್ಕಿಂತ ಅಧಿಕ ನಕಲಿ ಉದ್ಯೋಗ ಕಾರ್ಡ್‌ಗಳಿವೆ, ಕೂಲಿ ಹಣ ಸರಿಯಾಗಿ ಕೊಡುತ್ತಿಲ್ಲ’ ಎಂದು ದೂರಿದ್ದರು. ಇಲಾಖೆಯ ಆಯುಕ್ತರಿಂದ ತನಿಖೆ ನಡೆಸುವುದಾಗಿ ಈ ವೇಳೆ ಸಚಿವರು ಭರವಸೆ ನೀಡಿದ್ದರು.

ಕಾರ್ಯಕ್ರಮ ಮುಗಿದ ಬಳಿಕ, ಈ ಬಗ್ಗೆ ಇಲಾಖೆ ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದಾಗ, ಮೂರು ವರ್ಷಗಳಿಂದ ಅಲ್ಲಿ ಇಂತಹ ಅಕ್ರಮ ನಡೆಯುತ್ತಿದೆ, ಪಕ್ಕದ ಜಿಲ್ಲೆಯವರನ್ನೂ ಕರೆಸಿ ಉದ್ಯೋಗ ನೀಡಲಾಗುತ್ತಿದೆ, ಜೆಸಿಬಿ ಬಳಸಿ ಕೆಲಸ ಮಾಡಿಸಲಾಗುತ್ತಿದೆ ಎಂಬ ಸಂಗತಿ ಬಯಲಿಗೆ ಬಂದಿದೆ. ನರೇಗಾ ಕಾಮಗಾರಿಗಳ ಪಾರದರ್ಶಕತೆ ಬಗ್ಗೆ ನಿಗಾ ವಹಿಸಲು ಇರುವ ಸಾಮಾಜಿಕ ಪರಿಶೋಧನೆ ಮತ್ತು ವಿಚಕ್ಷಣಾ ದಳಗಳ ನಿರ್ದೇಶಕರಿಂದ ಪ್ರತ್ಯೇಕವಾಗಿ ತನಿಖೆ ನಡೆಸಲು ಹಾಗೂ ಜಗಳೂರು ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಆಡಿಟ್ ಮಾಡಿಸಿ ತಿಂಗಳೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ನೂರಾರು ಕರೆಗಳು: ಒಂದೂವರೆ ಗಂಟೆಯಲ್ಲಿ 90ಕ್ಕೂ ಅಧಿಕ ಕರೆಗಳಿಗೆ ಸ್ಪಂದಿಸಿದ ಸಚಿವರು, ಸುಮಾರು 25ರಷ್ಟು ದೂರುಗಳಿಗೆ ಕೆಲವೇ ಗಂಟೆಗಳಲ್ಲಿ ಪರಿಹಾರ ದೊರಕಿಸಿಕೊಟ್ಟರು.

ಗ್ರಾಮ ಪಂಚಾಯಿತಿಗಳಲ್ಲಿ ಸಮಾಲೋಚಕರಾಗಿ (ಬಿಆರ್‌ಸಿ) ಕೆಲಸ ಮಾಡುತ್ತಿರುವವರಿಗೆ ಉದ್ಯೋಗ ಭದ್ರತೆ ನೀಡಬೇಕು, ಗ್ರಾಮೀಣ ಗ್ರಂಥಪಾಲಕರ ಸಂಬಳವನ್ನು ₹ 13,500ಕ್ಕೆ ಹೆಚ್ಚಿಸಬೇಕು ಎಂದು ಕೋರಿ ಹಲವು ಕರೆಗಳು ಬಂದವು. ಬಿಆರ್‌ಸಿ ಹುದ್ದೆ ತಾತ್ಕಾಲಿಕ ಹುದ್ದೆಯಾಗಿದ್ದು, ಮುಂದೆ ಪರಿಶೀಲಿಸೋಣ ಎಂದರು.

ಗ್ರಾಮೀಣ ಗ್ರಂಥಾಲಯ ಪಾಲಕರಿಗೆ ಮತ್ತೆ ಎಂಟು ಗಂಟೆಯ ಉದ್ಯೋಗ ದೊರಕಿಸಿ, ಕನಿಷ್ಠ ವೇತನ ದೊರಕಿಸಿಕೊಡುವುದಾಗಿ ಸಚಿವರು ಭರವಸೆ ನೀಡಿದರು.

*
ಕೊರೊನಾ ಸೋಂಕಿನಿಂದ ಗ್ರಾಮೀಣ ಭಾಗದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತದೆ ಎಂಬ ಭಯ ಬೇಡ.
-ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.