ADVERTISEMENT

ಕೊರೊನಾ ವೈರಸ್‌ ಭೀತಿ: ಮುಂಬೈ, ಪುಣೆಗೆ ಬಸ್ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 8:01 IST
Last Updated 18 ಮಾರ್ಚ್ 2020, 8:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಸೊಂಕಿತರ ಪ್ರಮಾಣ ದೇಶದ ಇತರೆ ರಾಜ್ಯಗಳಿಗಿಂತ ಹೆಚ್ಚಾಗಿರುವ ಕಾರಣ ಮುಂಜಾಗರೂಕತಾ ಕ್ರಮವಾಗಿ ಜಿಲ್ಲೆಯಿಂದ ಮುಂಬೈ ಹಾಗೂ ಪುಣೆಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.

ಜಿಲ್ಲೆಯ ಬಾದಾಮಿ, ಬಾಗಲಕೋಟೆ, ಇಳಕಲ್, ಜಮಖಂಡಿ, ಮುಧೋಳ ಘಟಕಗಳಿಂದ ಪ್ರತಿನಿತ್ಯ ಮುಂಬೈ ಹಾಗೂ ಪುಣೆಗೆ ತೆರಳುವ ಐದು ಐಷಾರಾಮಿ ಬಸ್ ಗಳ ಸಂಚಾರವನ್ನು ಅನಿರ್ದಿಷ್ಟ ಅವಧಿಗೆ ಸ್ಥಗಿತಗೊಳಿಸಲಾಗಿದೆ. ಮುಂದೆ ಪರಿಸ್ಥಿತಿ ನೋಡಿಕೊಂಡು ಪುನಃ ಬಸ್ ಸೇವೆ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಮಲೇಶಿಯಾದಿಂದ ಮರಳಿದ ಇಬ್ಬರ ತಪಾಸಣೆ
ಬಾಗಲಕೋಟೆ:
ಮಲೇಶಿಯಾ ಪ್ರವಾಸ ಮುಗಿಸಿ ಬುಧವಾರ ಬಾಗಲಕೋಟೆಗೆ ಮರಳಿದ ಇಬ್ಬರನ್ನು ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಯಿತು.

ADVERTISEMENT

‘ಸದ್ಯಕ್ಕೆ ಇಬ್ಬರೂ ಆರೋಗ್ಯವಾಗಿದ್ದಾರೆ. ಆದರೆ ಮುಂಜಾಗರೂಕತಾ ಕ್ರಮವಾಗಿ ಅವರನ್ನು ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಇರುವಂತೆ ಸೂಚಿಸಲಾಗಿದೆ. ಅವರ ಮೇಲೆ ನಿಗಾ ಇಡಲಾಗಿದೆ’ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ 'ಪ್ರಜಾವಾಣಿ'ಗೆ ತಿಳಿಸಿದರು.

ಹೋಳಿ ಹಬ್ಬದ ರಜೆಯ ಹಿನ್ನೆಲೆಯಲ್ಲಿ ಇಬ್ಬರೂ ಮಲೇಶಿಯಾಗೆ ತೆರಳಿದ್ದರು ಎಂದು ತಿಳಿದುಬಂದಿದೆ.

ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಒಟ್ಟು 118 ಮಂದಿ ವಿದೇಶದಿಂದ ಮರಳಿದ್ದಾರೆ. ಎಲ್ಲರೂ ಸುರಕ್ಷಿತರಾಗಿದ್ದಾರೆ. ಇವರ ಪೈಕಿ ಇಬ್ಬರು ವ್ಯಕ್ತಿಗಳ ಗಂಟಲು ಮಾದರಿಯನ್ನು ಈಗಾಗಲೇ ಪರೀಕ್ಷೆಗೆ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅವರನ್ನು ಜಿಲ್ಲಾ ಆಸ್ಪತ್ರೆಯ ಐಸೋಲೇಷನ್ ವಾರ್ಡನಲ್ಲಿ ಇರಿಸಲಾಗಿದೆ. ಜಿಲ್ಲೆಯಲ್ಲಿ ಯಾವುದೇ ವ್ಯಕ್ತಿಯಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿಲ್ಲ. ಜಿಲ್ಲೆಯ ಜನತೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.