ADVERTISEMENT

ಕಣ್ಣೀರಲ್ಲೂ ಸೋಂಕು ಹರಡುವ ಸಾಧ್ಯತೆ: ನೇತ್ರ ತಜ್ಞರ ಎಚ್ಚರಿಕೆ

ಮುಂಜಾಗರೂಕತೆ ವಹಿಸದಿದ್ದಲ್ಲಿ ಸೋಂಕು ತಗುಲುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 19:59 IST
Last Updated 26 ಏಪ್ರಿಲ್ 2020, 19:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಣ್ಣಿಗೆ ಸೂಕ್ತ ರಕ್ಷಣೆ ಮಾಡಿಕೊಳ್ಳದಿದ್ದಲ್ಲಿ ಕೊರೊನಾ ಸೋಂಕು ತಗುಲುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿರುವ ನೇತ್ರತಜ್ಞರು, ಕೋವಿಡ್‌ ರೋಗಿಗಳ ಕಣ್ಣೀರಲ್ಲೂ ಸೋಂಕು ಇರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮನೆಯಿಂದ ಹೊರಗಡೆ ಹೋಗುವಾಗ ಕನ್ನಡಕ ಧರಿಸುವುದು ಸೂಕ್ತ ಎಂದು ಕಣ್ಣಿನ ತಜ್ಞರು ಸಲಹೆ ನೀಡಿದ್ದಾರೆ. ಕೆಲ ಪ್ರಕರಣಗಳಲ್ಲಿ ಕಣ್ಣಿನ ಮೂಲಕವೇ ಸೋಂಕು ದೇಹವನ್ನು ಪ್ರವೇಶಿಸಿರುವ ಸಾಧ್ಯತೆಗಳಿವೆ ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ.

ಕೋವಿಡ್ ರೋಗಿಯಲ್ಲಿರುವ ಸೋಂಕು ಆರೋಗ್ಯವಂತ ವ್ಯಕ್ತಿಯ ದೇಹವನ್ನು ಮೂಗು, ಬಾಯಿ ಹಾಗೂ ಕಣ್ಣಿನ ಮೂಲಕ ಸೇರುತ್ತದೆ. ಈ ಸೋಂಕು ಕೆಲ ರೋಗಿಗಳ ಕಣ್ಣಿಗೂ ಹಾನಿ ಉಂಟುಮಾಡುತ್ತದೆ. ಚೀನಾದಲ್ಲಿ ಕೆಲ ರೋಗಿಗಳಕಣ್ಣಿನ ತೆಳು ಪರದೆಗೆ ಹಾನಿಯಾಗಿದೆ. ಕಣ್ಣೀರಿನ ಮೂಲಕ ಸೋಂಕು ಹರಡುವಿಕೆಯ ಬಗ್ಗೆ ಸಂಶೋಧನೆ ಮಾಡಲಾಗುತ್ತಿದೆ.

ADVERTISEMENT

ಮುಂಜಾಗೃತೆ ಅಗತ್ಯ: ‘ಚೀನಾದಲ್ಲಿ ಮೊದಲ ಕೋವಿಡ್‌ ರೋಗಿಯನ್ನು ನೇತ್ರ ತಜ್ಞರೇ ಪತ್ತೆ ಮಾಡಿದ್ದರು. ಬಳಿಕ ಆ ವೈದ್ಯರಿಗೂ ಸೋಂಕು ತಗುಲಿತ್ತು. ಆಗಾಗ ಕಣ್ಣುಗಳನ್ನು ಮುಟ್ಟಿಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಬಾರದು. ಈ ಸಂದರ್ಭದಲ್ಲಿ ಕಣ್ಣಿನ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಬಾರದು. ನಾವು ವೈದ್ಯಕೀಯ ಸಿಬ್ಬಂದಿಗೂ ಕನ್ನಡಕವನ್ನು ನೀಡುತ್ತಿದ್ದೇವೆ’ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ. ಭುಜಂಗ ಶೆಟ್ಟಿ ತಿಳಿಸಿದರು.

ಡಾ.ಅಗರವಾಲ್ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞೆ ಡಾ. ಸಂಜನಾ ವತ್ಸ, ‘ಈ ಸೋಂಕು ಬಂದ ಬಳಿಕ ಕಣ್ಣು ಕೆಂಪಾಗುವಿಕೆ, ಸದಾ ನೀರು ಬರುವುದು, ತುರಿಕೆ, ಊದಿಕೊಳ್ಳುವುದು ಸೇರಿದಂತೆ ಕೆಲ ಲಕ್ಷಣಗಳು ಕಂಡುಬರುತ್ತವೆ. ಈ ಸೋಂಕು ಬಂದಾಗ ಕಣ್ಣೀರು ಬಂದರೆ ಅದರ ಮೂಲಕವೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ’ ಎಂದರು.

‘ಚೀನಾದಲ್ಲಿ 30 ಕೋವಿಡ್‌–19 ರೋಗಿಗಳ ಮೇಲೆ ಅಧ್ಯಯನ ನಡೆಸಲಾಗಿದೆ. ಅದರಲ್ಲಿ ಒಬ್ಬ ರೋಗಿಯ ಕಣ್ಣಿನಲ್ಲಿ ಸೋಂಕು ಪತ್ತೆಯಾಗಿದೆ’ ಎಂದು ಸಂಜನಾ ತಿಳಿಸಿದರು.

ನೇತ್ರ ತಜ್ಞರಿಗೆ ತರಬೇತಿ
ಕೋವಿಡ್‌ ರೋಗಿಗಳಲ್ಲಿ ಕಾಣಿಸಿಕೊಳ್ಳುವ ನೇತ್ರ ಸಮಸ್ಯೆಗಳಿಗೆ ನೀಡಬೇಕಾದ ಚಿಕಿತ್ಸೆಯ ಬಗ್ಗೆ ಕಣ್ಣಿನ ವೈದ್ಯರು ಹಾಗೂ ಶುಶ್ರೂಷಕರಿಗೆ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಏ.29ರಂದು ಮಧ್ಯಾಹ್ನ 2 ಗಂಟೆಯಿಂದ ಆನ್‌ಲೈನ್ ತರಬೇತಿ ಹಮ್ಮಿಕೊಂಡಿದೆ. ನೇತ್ರತಜ್ಞರು ಮಾಹಿತಿ ನೀಡಲಿದ್ದಾರೆ.

*
ಕಣ್ಣನ್ನು ಮುಟ್ಟಿಕೊಳ್ಳುವುದು ಅನಿವಾರ್ಯವಾದರೆ ಕೈಗಳನ್ನೂ ಮೊದಲ ಸೋಪಿನ ನೀರಿನಿಂದ ಸ್ವಚ್ಛಗೊಳಿಸಿಕೊಳ್ಳಬೇಕು. ರೋಗಿಗಳ ಕಣ್ಣೀರಿಂದಲೂ ಸೋಂಕು ಹರಡುತ್ತದೆ.
-ಡಾ. ಸುಜಾತಾ ರಾಥೋಡ್, ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.