ADVERTISEMENT

ರಾಜ್ಯದಲ್ಲಿ ಲಾಕ್‌ಡೌನ್‌ ವಿಸ್ತರಣೆ: ಜೂ.6ಕ್ಕೆ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 30 ಮೇ 2021, 22:12 IST
Last Updated 30 ಮೇ 2021, 22:12 IST
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ    

ಬೆಂಗಳೂರು: ಕೋವಿಡ್‌ ನಿಯಂತ್ರಣಕ್ಕಾಗಿ ಜೂನ್‌ 7 ರ ನಂತರವೂ ಲಾಕ್‌ಡೌನ್‌ ವಿಸ್ತರಿಸುವ ಬಗ್ಗೆ ತಜ್ಞರ ಜತೆ ಚರ್ಚಿಸಿ ಜೂನ್‌ 5 ಅಥವಾ 6 ರಂದು ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಜೂನ್‌ 5 ರ ವೇಳೆಗೆ ಕೋವಿಡ್‌ ಪರಿಸ್ಥಿತಿ ನೋಡಿಕೊಂಡು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

‘ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಆದರೆ, ಲಾಕ್‌ಡೌನ್‌ ವಿಸ್ತರಿಸುವಂತೆ ತಜ್ಞರು ಯಾವುದೇ ವರದಿ ನೀಡಿಲ್ಲ. ಕೇಂದ್ರ ಸರ್ಕಾರ ಆಯಾ ರಾಜ್ಯಗಳಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳುವಂತೆ ಈಗಾಗಲೇ ಸೂಚಿಸಿದೆ’ ಎಂದರು.

ADVERTISEMENT

ಮೈ ಮರೆಯಬೇಡಿ: ‘ಕೋವಿಡ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೆ ಜನರು ಮೈ ಮರೆಯಬಾರದು’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

‘ರಾಜ್ಯದಲ್ಲಿ ಕೋವಿಡ್‌ ದೃಢಪಡುವ ಪ್ರಮಾಣ ಕಡಿಮೆ ಆಗಬೇಕಾಗಿದೆ. ಸೋಂಕಿತರ ಸಂಖ್ಯೆ ಕಡಿಮೆಯಾಗಿ ಸಂಪೂರ್ಣ ಹತೋಟಿಗೆ ಬರಬೇಕು. ಸೋಂಕು ಉಲ್ಬಣ ಆಗದಂತೆ ನಮ್ಮ ಕಾರ್ಯ ಚಟುವಟಿಕೆಗಳ ಮೇಲೂ ನಿರ್ಬಂಧ ಹಾಕಿಕೊಳ್ಳಬೇಕು’ ಎಂದರು.

‘ನಿಯಮಗಳನ್ನು ಪಾಲಿಸಿದರೆ ಮುಂದಿನ ದಿನಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತದೆ. ಅದಕ್ಕೆ ಜನರು ಸಹಕಾರ ನೀಡಬೇಕು’ ಎಂದೂ ಕಿವಿಮಾತು ಹೇಳಿದರು.

ಮುಖ್ಯಮಂತ್ರಿಯಿಂದ ತೀರ್ಮಾನ: ‘ಲಾಕ್‌ಡೌನ್‌ನಿಂದ ಏನೆಲ್ಲ ಒಳ್ಳೆಯದಾಗಿದೆ ಎಂಬುದನ್ನು ಜನರೇ ನೋಡಿದ್ದಾರೆ. ರಾಜ್ಯದಲ್ಲಿ ಕೆಲವೆಡೆ ಕೋವಿಡ್‌ ದೃಢ ಪ್ರಮಾಣ ಶೇ 47ರಷ್ಟು ಇದ್ದುದು, ಕಳೆದ 15 ದಿನಗಳಲ್ಲಿ ಶೇ 14–15ಕ್ಕೆ ಇಳಿದಿದೆ. ಅನೇಕ ರಾಜ್ಯಗಳಲ್ಲಿ ಶೇ 8 ರಿಂದ 9ರಷ್ಟಿದೆ. ಅದೆಲ್ಲವನ್ನೂ ನೋಡಿಕೊಂಡು, ತಾಂತ್ರಿಕ ಸಲಹಾ ಸಮಿತಿಯ ಸಲಹೆ ಪಡೆದು ಲಾಕ್‌ಡೌನ್‌ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ತೀರ್ಮಾನಿಸಲಿದ್ದಾರೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಇನ್ನೆರಡು ದಿನಗಳಲ್ಲಿ 2 ನೇ ಪ್ಯಾಕೇಜ್-ಬಿಎಸ್‌ವೈ: ‘ರಾಜ್ಯದಲ್ಲಿ ಕೋವಿಡ್‌ನಿಂದ ಸಂಕಷ್ಟದಲ್ಲಿರುವವರಿಗೆ ನೆರವಿನ ಆಸರೆಯಾಗಿ ಇನ್ನೆರಡು ದಿನಗಳಲ್ಲಿ ಎರಡನೇ ಹಂತದ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಲಾಗುವುದು. ಎರಡನೇ ಹಂತದ ಕೋವಿಡ್ ಪ್ಯಾಕೇಜ್ ಸಿದ್ಧವಾಗುತ್ತಿದೆ’ ಎಂದು ಯಡಿಯೂರಪ್ಪ ತಿಳಿಸಿದರು.

ಅಸಂಘಟಿತ ವಲಯವೂ ಸೇರಿದಂತೆ ವಿವಿಧ ವರ್ಗಗಳಿಗೆ ಈಗಾಗಲೇ ₹ 1,250 ಕೋಟಿ ಮೊತ್ತದ ಆರ್ಥಿಕ ಪ್ಯಾಕೇಜ್‌ನ್ನು ಮುಖ್ಯಮಂತ್ರಿ ಘೋಷಿಸಿದ್ದಾರೆ. ಆದರೆ, ಪ್ಯಾಕೇಜ್‌ನಲ್ಲಿ ಪಾಲು ಪಡೆಯದ ಹಲವು ಸಣ್ಣಪುಟ್ಟ ಸಮುದಾಯಗಳೂ ತಮಗೂ ನೆರವು ನೀಡುವಂತೆ ಮನವಿ ಮಾಡಿವೆ. ಹೀಗಾಗಿ, ಮುಖ್ಯಮಂತ್ರಿ ಘೋಷಿಸಲು ಉದ್ದೇಶಿಸಿರುವ ಎರಡನೇ ಹಂತದ ಪ್ಯಾಕೇಜ್‌ ಬಗ್ಗೆ ಕುತೂಹಲ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.