ADVERTISEMENT

ಕೋವಿಡ್–19: ಹಿರಿಯ ನಾಗರಿಕರೇ ನೀವೇ ಹೋರಾಡಿ! -ಆರ್‌.ವಿ.ದೇಶಪಾಂಡೆ

ಆರ್‌.ವಿ.ದೇಶಪಾಂಡೆ
Published 1 ಮೇ 2020, 9:04 IST
Last Updated 1 ಮೇ 2020, 9:04 IST
R V Deshpande
R V Deshpande   

ಹಿರಿಯನಾಗರಿಕರನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವುದು ಆಯಾ ಕುಟುಂಬ ಮತ್ತು ಸಮಾಜದ ಹೊಣೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ 60 ಮೇಲ್ಪಟ್ಟವರ ಪ್ರಮಾಣ ಶೇ 8.5ರಷ್ಟಿದ್ದರೆ, ರಾಜ್ಯದಲ್ಲಿ ಶೇ 7.7ರಷ್ಟಿದೆ. 2050ರ ವೇಳೆಗೆ ದೇಶದಲ್ಲಿ ಹಿರಿಯ ನಾಗರಿಕರ ಪ್ರಮಾಣ ಶೇ20ರಷ್ಟಾಗುವ ಅಂದಾಜಿದೆ.

ಇಂದು ಹಿರಿಯ ನಾಗರಿಕರಿಗೆ ಹೆಚ್ಚಿನ ಸವಾಲಿನ ಸಂಗತಿಯೆಂದರೆ ಕೋವಿಡ್-‌19ರ ವಿರುದ್ಧದ ಹೋರಾಟ. ಕೊರೊನಾ ಸೋಂಕಿಗೆ ಬೇಗ ಬಲಿಯಾಗುತ್ತಿರುವವರಲ್ಲಿ ಹಿರಿಯ ನಾಗರಿಕರ ಸಂಖ್ಯೆಯೇ ಹೆಚ್ಚಿದೆ.ಗ್ರಾಮೀಣ ಹಾಗೂ ನಗರ ಪ್ರದೇಶದ ಜನವಸತಿ ಹೆಚ್ಚಿರುವ ಭಾಗದಲ್ಲಿರುವ ಹಿರಿಯ ನಾಗರಿಕರೂ ಇಂದಿಗೂ ಆತಂಕದ ಸ್ಥಿತಿಯಲ್ಲಿದ್ದಾರೆ. ಅವರಲ್ಲಿ ಅನೇಕರಿಗೆ ಆರ್ಥಿಕ ಸ್ವಾವಲಂಬನೆ ದೊರಕಿರುವುದಿಲ್ಲ. ಅಲ್ಪ ಪ್ರಮಾಣದ ಮಾಸಾಶನ ಇಂದಿನ ದಿನಗಳಲ್ಲಿ ಜೀವನ ನಿರ್ವಹಣೆಗೆ ಸಾಕಾಗುವುದಿಲ್ಲ. ಇನ್ನು ಅವರುಗಳು ಪೌಷ್ಟಿಕಾಂಶಯುಕ್ತ ಆಹಾರವನ್ನು ಹೇಗೆ ತೆಗೆದುಕೊಳ್ಳುತ್ತಾರೆ. ಇದನ್ನು ಯೋಚಿಸಬೇಕಾದ ಅಗತ್ಯ ಇದೆ.

ಹಿರಿಯ ನಾಗರಿಕರಲ್ಲಿ ಸೋಂಕುಕಾಣಿಸಿಕೊಂಡರೆ ʻಕ್ವಾರಂಟೈನ್‌ಗೆ ಒಳಪಡಿಸಿ ಚಿಕಿತ್ಸೆ ಕೊಡುವುದು ತುಂಬಾ ಕಷ್ಟದ ಕೆಲಸ. ಅದೃಷ್ಟದ ವಿಚಾರವೆಂದರೆ, ಗ್ರಾಮೀಣ ಪರಿಸರದಲ್ಲಿ ಸೋಂಕು ವ್ಯಾಪಕವಾಗಿ ಹರಡಿಲ್ಲ. ಆದರೂ,ಸರ್ಕಾರ ಮತ್ತು ಸಮಾಜ ಸೇವಾಸಂಸ್ಥೆಗಳು ಹಿರಿಯರ ಆರೋಗ್ಯದ ಹೊಣೆ ಹೊರಬೇಕಾಗಿದೆ.

ADVERTISEMENT

ನೀವೇ ಹೋರಾಡಿ:ಹಿರಿಯ ನಾಗರಿಕರಲ್ಲಿ ನನ್ನ ಮನವಿಯಿಷ್ಟೆ . ಕೊರೊನಾ ವಿರುದ್ಧದ ಹೋರಾಟದಲ್ಲಿ ನೀವುಗಳೇ
ಮುಂಚೂಣಿಯಲ್ಲಿರುವ ಯೋಧರಾಗಬೇಕು. ಸರ್ಕಾರ ಸೂಚಿಸಿದ ಮಾರ್ಗದರ್ಶಿ ಸೂತ್ರಗಳನ್ನು ತಪ್ಪದೇ ಪಾಲಿಸಬೇಕು. ವ್ಯಕ್ತಿಗತ ಅಂತರವನ್ನು ಕಾಪಾಡಿಕೊಳ್ಳಬೇಕು. ತುಂಬಾ ತುರ್ತು ಇದ್ದರೆ ಮಾತ್ರ ಕಡ್ಡಾಯವಾಗಿ ಉತ್ತಮ ದರ್ಜೆಯ ಮುಖಗವಸು‌ ಧರಿಸಿ ಹೊರಬರಬೇಕು.

ವೈದ್ಯರು ಸೂಚಿಸಿದ ಔಷಧಗಳನ್ನು ತಪ್ಪದೇ ಸೇವಿಸಿ. ಈ ಸಂದರ್ಭದಲ್ಲಿ ಕೆಮ್ಮು, ನೆಗಡಿ, ಜ್ವರ ಹಾಗೂ ಉಸಿರಾಟದ
ಸಮಸ್ಯೆಯಾದರೆ ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನ ನೋಡಿ. ಈ ಸಮಸ್ಯೆಗಳು ಕಾಣಿಸಿಕೊಂಡ ಮಾತ್ರಕ್ಕೆ ಕೊರೊನಾ
ಸೋಂಕು ತಗಲಿದೆ ಎಂದರ್ಥವಲ್ಲ. ಪರೀಕ್ಷೆ ಮಾಡಿಕೊಳ್ಳದೇ ನೀವೇ ಊಹಿಸಿಕೊಂಡು ಗಾಬರಿಯಾಗುವುದು ಬೇಡ.

ಸರ್ಕಾರ ಕೂಡ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಸಹಾಯವಾಣಿ ಪ್ರಾರಂಭಿಸಬೇಕು ಮತ್ತು ಅದು ದಿನದ 24 ಗಂಟೆಯೂ ಕಾರ್ಯನಿರ್ವಹಿಸಬೇಕು.ಹಿರಿಯ ನಾಗರಿಕರಲ್ಲಿ ಹಸಿರು ಕಾರ್ಡ್‌ ಇಲ್ಲದಿದ್ದರೂ ಅವರಿಗೆ ಆಹಾರ ಪದಾರ್ಥ ಕೊಡುವಂತೆ ಸೂಚಿಸಬೇಕು.

ಲೇಖಕರು: ಆರ್‌.ವಿ.ದೇಶಪಾಂಡೆ, ಕಾಂಗ್ರೆಸ್‌ನ ಹಿರಿಯ ಶಾಸಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.