ADVERTISEMENT

ರಾಜ್ಯದ ವಿವಿಧೆಡೆ 3.78 ಲಕ್ಷ ಜನರಿಂದ ಕ್ವಾರಂಟೈನ್‌ ನಿಯಮ ಉಲ್ಲಂಘನೆ

ಕ್ವಾರಂಟೈನ್‌ ನಿಯಮಕ್ಕಿಲ್ಲ ಕಿಮ್ಮತ್ತು

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 19:53 IST
Last Updated 25 ಜುಲೈ 2020, 19:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಮನೆ ಕ್ವಾರಂಟೈನ್‌ ನಿಯಮ ಉಲ್ಲಂಘಿಸುವವರ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ.ಈವರೆಗೆ 3,78,299 ಮಂದಿ 14 ದಿನಗಳ ಮನೆ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ ನಡೆಸಿದ್ದಾರೆ.

ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಮನೆ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಅವಕಾಶವಿದೆ. ಸೋಂಕು ಶಂಕಿತರು ಹಾಗೂ ಕೋವಿಡ್ ಪೀಡಿತರೊಂದಿಗೆ ಸಂಪರ್ಕ ಹೊಂದಿರುವವರು ಹೊರಗಡೆ ಸಂಚರಿಸಿದಲ್ಲಿ ಸೋಂಕು ಹರಡುವ ಸಾಧ್ಯತೆಯಿದೆ. ಈ ಕಾರಣಕ್ಕೆ ಕಡ್ಡಾಯವಾಗಿ ಮನೆ ಕ್ವಾರಂಟೈನ್‌ಗೆ ಒಳಗಾಗಬೇಕೆಂಬ ನಿಯಮವನ್ನು ರೂಪಿಸಲಾಗಿದೆ. ಆದರೆ, ರಾಜ್ಯದಲ್ಲಿ ಈ ನಿಯಮಗಳನ್ನು ಗಾಳಿಗೆ ತೂರಿ, ಹೊರಗಡೆ ಓಡಾಡುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಹೀಗಾಗಿ ಮನೆ ಕ್ವಾರಂಟೈನ್‌ಗೆ ಒಳಗಾದವರ ಮೇಲೆ ನಿಗಾ ಇಡುವುದು ಅಧಿಕಾರಿಗಳಿಗೆ ಕೂಡ ತಲೆನೋವಾಗಿ ಪರಿಣಮಿಸಿದೆ.

ಆರೋಗ್ಯ ಇಲಾಖೆ ರೂಪಿಸಿರುವ ನಿಯಮದ ಪ್ರಕಾರ ಸೋಂಕು ಶಂಕಿತರು, ರೋಗಿಗಳ ಸಂಪರ್ಕ ಹೊಂದಿರುವವರು, ವಿದೇಶ ದಿಂದ ಬಂದವರು, ಅನ್ಯ ರಾಜ್ಯಗಳಿಗೆ ಪ್ರಯಾಣ ಮಾಡಿದ ಇತಿಹಾಸ ಹೊಂದಿದ್ದವರು, ಮನೆ ಆರೈಕೆಗೆ ಒಳಗಾದವರು ಹಾಗೂ ಗುಣಮುಖರಾಗಿ ಮನೆಗೆ ತೆರಳಿದವರು ಕಡ್ಡಾಯವಾಗಿ ಮನೆ ಕ್ವಾರಂಟೈನ್‌ಗೆ ಒಳಗಾಗಬೇಕು. ಅಪಾಯದ ವರ್ಗದಲ್ಲಿರುವವರನ್ನು ಮಾತ್ರ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಿ, ಮನೆ ಕ್ವಾರಂಟೈನ್‌ಗೆ ಸೂಚಿಸಲಾಗುತ್ತದೆ.ಕೋವಿಡ್ ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಕ್ವಾರಂಟೈನ್ ಅವಧಿಯಲ್ಲಿ ಮನೆಯಿಂದ ಹೊರಗಡೆ ಬರುವಂತಿಲ್ಲ. ಕುಟುಂಬದ ಸದಸ್ಯರಿಂದಲೂ ಅಂತರ ಕಾಯ್ದುಕೊಂಡು, ಪ್ರತ್ಯೇಕ ಕೊಠಡಿಯಲ್ಲಿ ವಾಸ ಮಾಡಬೇಕು.

ADVERTISEMENT

ಎಫ್‌ಐಆರ್ ದಾಖಲು:ರಾಜ್ಯ ಕೋವಿಡ್ ವಾರ್ ರೂಮ್ ಮಾಹಿತಿ ಪ್ರಕಾರ ಸದ್ಯ ರಾಜ್ಯದಲ್ಲಿ 1.83 ಲಕ್ಷ ಮಂದಿ ಮನೆ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇದರಲ್ಲಿ ಪ್ರತಿ ನಿತ್ಯ ಸಾವಿರಾರು ಮಂದಿ ನಿಯಮಗಳನ್ನು ಉಲ್ಲಂಘಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ ನಡೆಸುತ್ತಿದ್ದಾರೆ. ಪದೇ ಪದೇ ನಿಯಮಗಳನ್ನು ಉಲ್ಲಂಘಿಸಿದ1,997 ಮಂದಿ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಕೆಲವರಿಗೆ ಎಚ್ಚರಿಕೆ ನೀಡಿ, ಸಾಂಸ್ಥಿಕ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ. ಬೆಂಗಳೂರು ಗ್ರಾಮಾಂತರ (154), ಬೆಳಗಾವಿ (131), ಕಲಬುರ್ಗಿ (108), ವಿಜಯಪುರ (104), ಬಾಗಲಕೋಟೆ (102), ದಾವಣಗೆರೆ (98), ಚಿತ್ರದುರ್ಗ (82), ಬೀದರ್ (75), ರಾಯಚೂರು (73), ತುಮಕೂರು (65) ಜಿಲ್ಲೆಯಲ್ಲಿ ಹೆಚ್ಚು ಮಂದಿ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.