ADVERTISEMENT

ಅಕ್ರಮ ಹಣ ಡಿಕೆಶಿಗೆ ಸೇರಿದ್ದು: ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 10:49 IST
Last Updated 3 ಜೂನ್ 2019, 10:49 IST
ಡಿ.ಕೆ.ಶಿವಕುಮಾರ್‌
ಡಿ.ಕೆ.ಶಿವಕುಮಾರ್‌   

ಬೆಂಗಳೂರು: ‘ಬೆಂಗಳೂರು ಮತ್ತು ದೆಹಲಿಯ ವಿವಿಧೆಡೆ 2017ರಲ್ಲಿ ನಡೆಸಿದ ಆದಾಯ ತೆರಿಗೆ ಇಲಾಖೆ (ಐ.ಟಿ) ದಾಳಿಗೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯವು ದಾಖಲಿಸಿರುವ ದೂರು ಕಾನೂನು ಬದ್ಧವಾಗಿದೆ’ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ ಜನಪ್ರತಿನಿಧಿಗಳ ಕೋರ್ಟ್‌ಗೆ ತಿಳಿಸಿದರು.

‘ಪ್ರಕರಣದಿಂದ ನಮ್ಮನ್ನು ಕೈಬಿಡಬೇಕು’ ಎಂದು ಕೋರಿ ಪ್ರಕರಣದ ಆರೋಪಿಗಳಾದ ಡಿ.ಕೆ.ಶಿವಕುಮಾರ್, ಎನ್‌.ರಾಜೇಂದ್ರ ಮತ್ತು ಆಂಜನೇಯ ಹನುಮಂತಯ್ಯ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು, ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಸೋಮವಾರ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ನಾವದಗಿ ಅವರು, ‘ಆರೋಪಿಗಳು, ಆದಾಯ ತೆರಿಗೆ ಕಾಯ್ದೆ–1961ರ ಕಲಂ 276 ಸಿ (1) ಮತ್ತು 277ರ ಪ್ರಕಾರ ದಂಡನೀಯ ಅಪರಾಧ ಎಸಗಿದ್ದಾರೆ. ಹವಾಲಾ ಮೂಲಕ ಬೆಂಗಳೂರಿನಿಂದ ನವದೆಹಲಿಯ ಸಫ್ಧರ್ ಜಂಗ್ ಎನ್ಕ್ಲೇವ್ ಗೆ ಹಣ ಸಾಗಣೆ ಮಾಡಲಾಗಿದೆ. ಇದನ್ನು ಕೆ.ಜಿ ಎಂದು ಕೋಡ್ ವರ್ಡ್ ಗಳ ಮೂಲಕ ನಿರ್ವಹಿಸಿರುವುದು ಆರೋಪಿಗಳ ಹೇಳಿಕೆಯಲ್ಲಿ ಬಹಿರಂಗವಾಗಿದೆ’ ಎಂದು ವಿವರಿಸಿದರು.

ADVERTISEMENT

‘ದಾಳಿ ವೇಳೆ ಸಚಿವರಿಗೆ ಸೇರಿದ ಮನೆಗಳಲ್ಲಿ ದೊರೆತಿರುವ ₹ 8.59 ಕೋಟಿಗೂ ಹೆಚ್ಚಿನ ಮೊತ್ತಕ್ಕೆ ಲೆಕ್ಕ ನೀಡುವಲ್ಲಿ ಆರೋಪಿಗಳು ವಿಫಲವಾಗಿದ್ದಾರೆ. ಎಲ್ಲ ಆರೋಪಿಗಳೂ ಇ.ಡಿ ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 120–‘ಬಿ’ (ಅಪರಾಧಿಕ ಒಳಸಂಚು) ಅನುಸಾರ ನಡೆಸಿದ್ದಾರೆ’ ಎಂದರು.

ವಿಚಾರಣೆ ವೇಳೆ ಸಚಿವ ಡಿ.ಕೆ‌.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಹಾಜರಿದ್ದರು.ವಿಚಾರಣೆಯನ್ನು ಮಂಗಳವಾರಕ್ಕೆ (ಜೂ.4) ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.