ADVERTISEMENT

ಲಾಕ್‌ಡೌನ್: 12 ದಿನಗಳಲ್ಲಿ 4.33 ಲಕ್ಷ ಪ್ರಕರಣ

​ಪ್ರಜಾವಾಣಿ ವಾರ್ತೆ
Published 21 ಮೇ 2021, 19:37 IST
Last Updated 21 ಮೇ 2021, 19:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್ ಎರಡನೇ ಅಲೆ ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರವು ಪೂರ್ಣ ಪ್ರಮಾಣದ ಲಾಕ್‌ಡೌನ್ ಜಾರಿ ಮಾಡಿದ ಮೇ 10ರ ನಂತರದ 12 ದಿನಗಳಲ್ಲಿ 4.33 ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗಿವೆ.

ಪ್ರತಿನಿತ್ಯ ಸರಾಸರಿ 39,396 ಪ್ರಕರಣಗಳು ದೃಢಪಟ್ಟಿವೆ. ಲಾಕ್‌ಡೌನ್ ಪೂರ್ವದಲ್ಲಿ ದಿನವೊಂದಕ್ಕೆ 1.89 ಲಕ್ಷದವರೆಗೂ ಪರೀಕ್ಷೆ ಮಾಡಲಾಗಿತ್ತು. ಇದರಿಂದಾಗಿ ಹೊಸ ಪ್ರಕರಣಗಳ ಸಂಖ್ಯೆ 50 ಸಾವಿರದ ಗಡಿಯ ಆಸುಪಾಸಿಗೆ ಏರಿಕೆ ಕಂಡಿತ್ತು. ಲಾಕ್‌ಡೌನ್ ಜಾರಿ ಮಾಡಿದ ಬಳಿಕ ಪರೀಕ್ಷೆಗಳ ಸಂಖ್ಯೆ 97 ಸಾವಿರಕ್ಕೆ ಇಳಿಕೆ ಕಂಡು, ಈಗ ಮತ್ತೆ 1.30 ಲಕ್ಷಕ್ಕೆ ಏರಿಕೆಯಾಗಿದೆ. ಈ ಅವಧಿಯಲ್ಲಿ ಸೋಂಕಿನ ತೀವ್ರತೆಗೆ 5,431 ಮಂದಿ ಸಾವಿಗೀಡಾಗಿರುವುದು ದೃಢಪಟ್ಟಿದೆ.

ಕಳೆದ ವರ್ಷ ಅಕ್ಟೋಬರ್‌ ಬಳಿಕ ನಿಯಂತ್ರಣಕ್ಕೆ ಬಂದಿದ್ದ ಕೋವಿಡ್‌, ಮಾರ್ಚ್‌ ನಂತರ ಏರುಗತಿ ಪಡೆದುಕೊಂಡಿತು. ಎರಡನೇ ಅಲೆಯಲ್ಲಿ ಸೋಂಕು ವೇಗವಾಗಿ ವ್ಯಾಪಿಸಿಕೊಳ್ಳಲಾರಂಭಿಸಿದ ಕಾರಣ ಸರ್ಕಾರವು ಏ.10 ರಿಂದ 7 ಜಿಲ್ಲೆಗಳಿಗೆ ಅನ್ವಯವಾಗುವಂತೆ ರಾತ್ರಿ ಹಾಗೂ ವಾರಾಂತ್ಯ ಕರ್ಫ್ಯೂ ವಿಧಿಸಿತ್ತು. ಬಳಿಕ ಅದನ್ನು ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಾಯಿತು. ಆ ವೇಳೆಗೆ ರಾಜ್ಯದಲ್ಲಿ ಸೋಂಕು ದೃಢ ಪ್ರಮಾಣ ಶೇ 7.04ರಷ್ಟಿತ್ತು. 69 ಸಾವಿರ ಸಕ್ರಿಯ ಪ್ರಕರಣಗಳಿದ್ದವು.

ADVERTISEMENT

ಏ.27ರಿಂದ ಮೇ 9ರವರೆಗೆ ಕೆಲವು ಚಟುವಟಿಕೆಗಳಿಗೆ ಮಾತ್ರ ಅವಕಾಶ ಕಲ್ಪಿಸಿ ಇಡೀ ರಾಜ್ಯದಲ್ಲಿ ಜನತಾ ಕರ್ಫ್ಯೂ ಜಾರಿ ಮಾಡಲಾಯಿತು. ಈ ಅವಧಿಯಲ್ಲಿ 5.65 ಲಕ್ಷ ಮಂದಿ ಕೋವಿಡ್‌ ಪೀಡಿತರಾಗಿರುವುದು ದೃಢಪಟ್ಟಿದೆ. ಅದೇ ರೀತಿ, 4,149 ಮಂದಿ ಸಾವಿಗೀಡಾಗಿರುವುದು ಖಚಿತಪಟ್ಟಿದೆ. ಇದರಿಂದಾಗಿ ಸರ್ಕಾರ ಜಾರಿಗೊಳಿಸಿದ ಜನತಾ ಕರ್ಫ್ಯೂ ಬಗ್ಗೆ ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.