ADVERTISEMENT

ಲಾಕ್‌ಡೌನ್: ಆಟೋ, ಟ್ಯಾಕ್ಸಿ ಇಲ್ಲ, 150 ಬಿಎಂಟಿಸಿ ಬಸ್ ಸಂಚಾರ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 22:07 IST
Last Updated 27 ಏಪ್ರಿಲ್ 2021, 22:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಲಾಕ್‌ಡೌನ್ ಇದ್ದರೂ ಕಾರ್ಯನಿರ್ವಹಿಸುವ ಜನರ ಸಂಚಾರಕ್ಕೆ ಅನುಕೂಲ ಆಗುವಂತೆ 150 ಬಸ್‌ಗಳನ್ನು ರಸ್ತೆಗಳಿಸಲು ಬಿಎಂಟಿಸಿ ನಿರ್ಧರಿಸಿದೆ.

ಬೆಳಿಗ್ಗೆ 6ರಿಂದ ರಾತ್ರಿ 7 ಗಂಟೆ ತನಕ ಈ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ. ಕೆಂ‍ಪೇಗೌಡ ಬಸ್‌ ನಿಲ್ದಾಣದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರ್ಯಾಚರಣೆ ಮಾಡುವ 6 ಬಸ್‌ಗಳು ದಿನದ 24 ಗಂಟೆಯೂ ಕಾರ್ಯಾಚರಣೆ ಮಾಡಲಿವೆ ಎಂದು ಬಿಎಂಟಿಸಿ ತಿಳಿಸಿದೆ.

ಸಾಮಾನ್ಯ ಬಸ್‌ಗಳು ಶಿವಾಜಿನಗರ, ಕೆಂಪೇಗೌಡ ಬಸ್ ನಿಲ್ದಾಣ, ಮಲ್ಲೇಶ್ವರ, ಹಂಪಿನಗರ, ಬನಶಂಕರಿ, ಕೆ.ಆರ್‌. ಮಾರುಕಟ್ಟೆ, ಕೆಂಗೇರಿ, ಹೆಬ್ಬಾಳ, ಬೊಮ್ಮನಹಳ್ಳಿ, ಯಶವಂತಪುರ, ಶ್ರೀನಗರ, ಶಾಂತಿನಗರದ ನಿಲ್ದಾಣಗಳಿಂದ ನಗರದ ವಿವಿಧೆಡೆಗೆ ಸಂಚರಿಸಲಿವೆ ಎಂದು ಬಿಎಂಟಿಸಿ ಮಾಹಿತಿ ನೀಡಿದೆ.

ADVERTISEMENT

ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತವಾಗಲಿದೆ. ಆದರೆ, ವಿಮಾನ ನಿಲ್ದಾಣದಿಂದ ಫ್ಲೈಬಸ್‌ಗಳ ಸಂಚಾರ ಮಾತ್ರ ಇರಲಿದೆ. ಆಟೋರಿಕ್ಷಾ ಮತ್ತು ಟ್ಯಾಕ್ಸಿಗಳ ಸಂಚಾರ ಸಂಪೂರ್ಣ ಸ್ಥಗಿತವಾಗಲಿದೆ.

‘ಸರ್ಕಾರದ ಆದೇಶಕ್ಕೆ ಮನ್ನಣೆ ನೀಡಿ ಆಟೋರಿಕ್ಷಾ ಮತ್ತು ಟ್ಯಾಕ್ಸಿಗಳನ್ನು ರಸ್ತೆಗೆ ಇಳಿಸದಿರಲು ನಿರ್ಧರಿಸಿದ್ದೇವೆ’ ಎಂದು ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಜವರೇಗೌಡ ತಿಳಿಸಿದರು.

ಗಾರ್ಮೆಂಟ್ಸ್ ಕಾರ್ಖಾನೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಉತ್ಪಾದನಾ ಚಟುವಟಿಕೆಗಳು ಕಾರ್ಯನಿರ್ವಹಿಸಲಿದೆ. ಕೋವಿಡ್ ಮಾತ್ರವಲ್ಲದೇ ಬೇರೆ ಕಾಯಿಲೆಗಳಿಂದ ಬಳಲುತ್ತಿರುವ ಜನ ಕೂಡ ಆಸ್ಪತ್ರೆಗಳಿಗೆ ಅಲೆದಾಡಬೇಕಿದೆ. ಬಿಎಂಟಿಸಿ ಕಲ್ಪಿಸಿರುವ 150 ಬಸ್‌ಗಳ ಸೇವೆ ಸಾಲದು ಕೆಲಸಕ್ಕೆ ತೆರಳಲು ಬಿಎಂಟಿಸಿ ಮತ್ತು ಮೆಟ್ರೊ ನಂಬಿಕೊಂಡಿದ್ದ ಜನ ಪರದಾಡುವುದು ಅನಿವಾರ್ಯ ಆಗಲಿದೆ ಎಂಬುದು ಕಾರ್ಮಿಕರ ಅಭಿಪ್ರಾಯ.

ಸಂಚಾರಕ್ಕೆ ನಿರ್ಬಂಧ ಇದ್ದರೂ ಕೆಲಸ ಮಾಡುತ್ತಿರುವ ಕಂಪನಿಯ ಗುರುತಿನ ಚೀಟಿ ತೋರಿಸಿದರೆ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.