ADVERTISEMENT

ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯಗೆ ‘ಲಸಿಕೆ’ ಕಮಿಷನ್: ಪೊಲೀಸ್‌ ಕಮಿಷನರ್‌ಗೆ ದೂರು

​ಪ್ರಜಾವಾಣಿ ವಾರ್ತೆ
Published 29 ಮೇ 2021, 20:35 IST
Last Updated 29 ಮೇ 2021, 20:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಉಚಿತವಾಗಿ ನೀಡಬೇಕಾದ ಕೋವಿಡ್‌ ಲಸಿಕೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಜನರಿಗೆ ಮಾರಾಟ ಮಾಡಲಾಗುತ್ತಿದೆ. ಬಸವನಗುಡಿ ಕ್ಷೇತ್ರದ ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯಹಣ ಪಡೆಯುತ್ತಿದ್ದಾರೆ’ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಎಚ್‌.ಎಂ.ವೆಂಕಟೇಶ್‌ ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಅವರಿಗೆ ಶನಿವಾರ ದೂರು ನೀಡಿದ್ದಾರೆ.

‘ಲಸಿಕೆ’ ಪಡೆಯುವ ಬಗ್ಗೆ ವಿಚಾರಿಸಲು ಹೊಸಕೆರೆಹಳ್ಳಿಯ ಎ.ವಿ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆ ಮಾಡಿರುವ ವೆಂಕಟೇಶ್‌, ಅಲ್ಲಿನ ಸಿಬ್ಬಂದಿಜೊತೆ ಮಾತನಾಡಿದ ಆಡಿಯೊ ತುಣುಕನ್ನೂ ದೂರಿನ ಜೊತೆ ಒದಗಿಸಿದ್ದಾರೆ. ಮಾತುಕತೆ ನಡುವೆ ರವಿ ಸುಬ್ರಹ್ಮಣ್ಯ ಹೆಸರು ಪ್ರಸ್ತಾಪವಾಗಿದೆ. ಈ ಆಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ.

ಆಡಿಯೊ ವಿವರ: ‘ನನಗೆ ಮತ್ತು ಮಗನಿಗೆ ಲಸಿಕೆ ಬೇಕಿತ್ತು’ ಎಂದು ವೆಂಕಟೇಶ್, ನಗರದ ಎ.ವಿ. (ಅನುಗ್ರಹ ವಿಠ್ಠಲ್) ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಿಬ್ಬಂದಿಯನ್ನು ಕೇಳಿದ್ದಾರೆ. ಸಿಬ್ಬಂದಿ, ‘ನೋಂದಣಿ ಮಾಡಿಕೊಳ್ಳಿ. ಸಂದೇಶ ಬಂದರೆ ಬನ್ನಿ. ಶಾಸಕ ರವಿ ಸುಬ್ರಹ್ಮಣ್ಯ ಕಚೇರಿ ಅಥವಾ ವಾಸವಿ ಆಸ್ಪತ್ರೆಯಿಂದ ಅನುಮತಿ ಕೊಡುತ್ತಾರೆ. ಅದನ್ನು ತೆಗೆದುಕೊಂಡು ಬನ್ನಿ. ಲಸಿಕೆಗೆ ₹ 900ಶುಲ್ಕವಿದೆ. ಆ ದುಡ್ಡು ನಮಗೆ ಬರುವುದಿಲ್ಲ. ಅದು ರವಿ ಸುಬ್ರಹ್ಮಣ್ಯ ಕಚೇರಿಗೆ ಹೋಗುತ್ತದೆ. ನಮಗೆ ಇನ್ನು ಲಸಿಕೆ ಬಂದಿಲ್ಲ. ಅವರ ಕಡೆಯವರೇ ಆಸ್ಪತ್ರೆಗೆಬಂದು ಲಸಿಕೆ ಹಾಕಿ ಹೋಗುತ್ತಿದ್ದಾರೆ. ಅವರೇ ಮಾರ್ಕೆಟ್ ಸಹ ಮಾಡುತ್ತಿದ್ದಾರೆ. ನಮ್ಮ ಆಸ್ಪತ್ರೆ ಸಿಬ್ಬಂದಿ ಸಹ ಹಣ ಕೊಟ್ಟು ಲಸಿಕೆ ಹಾಕಿಸಿಕೊಂಡಿದ್ದೇವೆ’ ಎಂದಿರುವುದು ಆಡಿಯೊದಲ್ಲಿದೆ.

ADVERTISEMENT

‘ಸರ್ಕಾರದ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಕೊರತೆ ಇದೆ. ನಿಮಗೆ ಹೇಗೆ ಲಸಿಕೆ ಸಿಕ್ಕಿತು. ಬಿಬಿಎಂಪಿಯವರು ಉಚಿತವಾಗಿ ಲಸಿಕೆ ಕೊಡುತ್ತಿದ್ದಾರಲ್ಲ. ಜೊತೆಗೆ, ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚು ಹಣ ಏಕೆ ಪಡೆಯುತ್ತಿದ್ದೀರಾ. ನಾವು ಬಡವರು. ನಿಗದಿತ ದರ ಪಡೆಯಿರಿ’ ಎಂದು ಸಾಮಾಜಿಕ ಕಾರ್ಯಕರ್ತ ಕೋರಿದ್ದರು. ಅದಕ್ಕೆ ಸಿಬ್ಬಂದಿ, ‘ಆಗುವುದಿಲ್ಲ ಸರ್. ಬಿಬಿಎಂಪಿಯವರಿಂದಲೇ ಇಲ್ಲಿ ಲಸಿಕೆ ಹಾಕಲಾಗುತ್ತಿದೆ. ಶಾಸಕರ ಅನುಮತಿ ತೆಗೆದುಕೊಂಡು ಬನ್ನಿ’ ಎಂದು ಕರೆ ಕಡಿತಗೊಳಿಸಿದ್ದಾರೆ.

ಡಿಸಿಪಿಗೂ ದೂರು: ‘ಖಾಸಗಿ ಆಸ್ಪತ್ರೆ ಕೋವಿಡ್ ಲಸಿಕೆ ಅಭಿಯಾನದ ಜಾಹೀರಾತು ನೀಡುತ್ತಿದ್ದ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಮಾರುತ್ತಿದ್ದಾರೆ ಎನ್ನಲಾದ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿ ಸುಬ್ರಹ್ಮಣ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು, ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಅವರಿಗೆ ದೂರು ನೀಡಿದ್ದಾರೆ.

ರಾಜಕೀಯ ಷಡ್ಯಂತ್ರ: ರವಿ ಸುಬ್ರಹ್ಮಣ್ಯ
‘ಇದು ರಾಜಕೀಯ ಷಡ್ಯಂತ್ರ. ಕೆಲವರಿಗೆ ಕೆಲಸ ಮಾಡುವ ಯೋಗ್ಯತೆ ಹಾಗೂ ಅರ್ಹತೆ ಇರುವುದಿಲ್ಲ. ಅಂಥವರು ಇಂಥ ಕಡ್ಡಿ ಅಲ್ಲಾಡಿಸುವ ಕೆಲಸ ಮಾಡುತ್ತಾರೆ. ಅವರಿಗೆ ನಾನು ಉತ್ತರ ಕೊಡಬೇಕಾಗಿಲ್ಲ’ ಎಂದು ಶಾಸಕ ಎಲ್.ಎ. ರವಿ ಸುಬ್ರಹ್ಮಣ್ಯ ಪ್ರತಿಕ್ರಿಯಿಸಿದ್ದಾರೆ.

ಆಡಿಯೊ ಹೊರಬೀಳುತ್ತಿದ್ದಂತೆ ಹೊಸಕೆರೆಹಳ್ಳಿಯಲ್ಲಿರುವ ಎ.ವಿ. ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಗೆ ಭೇಟಿ ನೀಡಿದ ರವಿ ಸುಬ್ರಹ್ಮಣ್ಯ, ‘ಆಡಿಯೊದಲ್ಲಿ ಮಾತನಾಡಿದ್ದು ಯಾರು? ನೀವು ನನಗೆ ಹಣ ಕೊಟ್ಟಿದ್ದೀರಾ? ಈ ರೀತಿ ಮಾತನಾಡಿ ನನ್ನ ಗೌರವಕ್ಕೆ ಧಕ್ಕೆ ತರುತ್ತಿರಾ’ ಎಂದು ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ತಮ್ಮ ವಿರುದ್ಧ ಪಿತೂರಿ ನಡೆಯುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.