ADVERTISEMENT

ಮೇ ಅಂತ್ಯದವರೆಗೂ ಕೋವಿಡ್‌ ಗಂಭೀರ: ಡಾ.ಕೆ. ಸುಧಾಕರ್

ರಾಜ್ಯಕ್ಕೆ 15 ಲಕ್ಷ ಡೋಸ್ ಲಸಿಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 21:44 IST
Last Updated 5 ಏಪ್ರಿಲ್ 2021, 21:44 IST
ಡಾ.ಕೆ. ಸುಧಾಕರ್
ಡಾ.ಕೆ. ಸುಧಾಕರ್   

ಬೆಂಗಳೂರು: ‘ರಾಜ್ಯದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಎರಡನೇ ಅಲೆಯನ್ನು ಮೇ ಅಂತ್ಯವರೆಗೂ ಬಹಳ ಗಂಭೀರವಾಗಿ ಪರಿಗಣಿಸಬೇಕು ಎಂದು ತಾಂತ್ರಿಕ ಸಲಹಾ ಸಮಿತಿಯು ಎಚ್ಚರಿಸಿದೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸೋಂಕಿನ ಸ್ಥಿತಿಗತಿ ಕುರಿತು ಸಮಿತಿಯು ಸರ್ಕಾರಕ್ಕೆ ವರದಿ ನೀಡಿದೆ. ಸೋಂಕು ನಿಯಂತ್ರಣಕ್ಕೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ’ ಎಂದರು.

‘ರಾಜ್ಯಕ್ಕೆ ಕೇಂದ್ರ ಸರ್ಕಾರವು 15 ಲಕ್ಷಕ್ಕೂ ಹೆಚ್ಚು ಕೋವಿಡ್ ಲಸಿಕೆ ಡೋಸ್ ನೀಡಿದ್ದು, ಇದರಲ್ಲಿ ಬೆಂಗಳೂರಿನಲ್ಲಿ 10 ಲಕ್ಷ ಮತ್ತು ಬೆಳಗಾವಿಯಲ್ಲಿ 5 ಲಕ್ಷ ಡೋಸ್‌ ವಿತರಿಸಲಾಗುವುದು’ ಎಂದೂ ಅವರು ತಿಳಿಸಿದರು.

ADVERTISEMENT

ಹಾಸಿಗೆ ವ್ಯವಸ್ಥೆಗೆ ಕ್ರಮ: ‘ರಾಜಧಾನಿಯಲ್ಲಿ ನಿತ್ಯ ಮೂರರಿಂದ ಮೂರೂವರೆ ಸಾವಿರ ಪ್ರಕರಣಗಳು ವರದಿಯಾಗುತ್ತಿವೆ. ಏ.15ರ ವೇಳೆ ನಿತ್ಯ ಆರೂವರೆ ಸಾವಿರಕ್ಕೂ ಅಧಿಕ ಪ್ರಕರಣಗಳು ಬರುತ್ತವೆ ಎಂದು ತಜ್ಞರ ಸಮಿತಿಯ ಸದಸ್ಯರೊಬ್ಬರು ಅಂದಾಜಿಸಿದ್ದಾರೆ’ ಎಂದರು.

‘ಸದ್ಯ ಬೆಂಗಳೂರಿನಲ್ಲಿ ತುರ್ತು ನಿಗಾ ಘಟಕಗಳಲ್ಲಿ (ಐಸಿಯು) ಹಾಸಿಗೆ ಕೊರತೆ ಉದ್ಭವಿಸಿದೆ. ಈ ಹಿಂದೆಯೇ ಸರ್ಕಾರಿ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಯ ಶೇ. 20 ರಷ್ಟು ಹಾಸಿಗೆಯನ್ನು ಬಳಸಿಕೊಳ್ಳುವುದಕ್ಕೆ ಅನುಮತಿ ನೀಡಲಾಗಿತ್ತು. ಸದ್ಯ ಈವರೆಗೂ ಎಷ್ಟು ಹಾಸಿಗೆಗಳನ್ನು ಬಳಸಿಕೊಂಡಿದ್ದಾಾರೆ ಎಂದು ಪರಿಶೀಲನೆ ನಡೆಸುತ್ತೇವೆ.’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.