ADVERTISEMENT

ಆಯುಷ್‌ ವೈದ್ಯರ ವೇತನ ಹೆಚ್ಚಳ: ನರ್ಸ್‌ಗಳ ಸಂಬಳ ದ್ವಿಗುಣ

5 ಲಕ್ಷ ರ‍್ಯಾ‍ಪಿಡ್‌ ಆ್ಯಂಟಿಜೆನ್‌ ಕಿಟ್‌ ಎಲ್ಲ ಜಿಲ್ಲೆಗಳಿಗೂ ವಿತರಣೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 19:24 IST
Last Updated 21 ಜುಲೈ 2020, 19:24 IST
ಲಾಕ್‌ಡೌನ್‌ನಿಂದಾಗಿ ಬೆಂಗಳೂರಿನ ವಿವಿಧೆಡೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು
ಲಾಕ್‌ಡೌನ್‌ನಿಂದಾಗಿ ಬೆಂಗಳೂರಿನ ವಿವಿಧೆಡೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದರು   

ಬೆಂಗಳೂರು: ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯುಷ್ ವೈದ್ಯರು ಮತ್ತು ನರ್ಸ್‌ಗಳ ವೇತನವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಇತ್ತೀಚೆಗಷ್ಟೇ ಗುತ್ತಿಗೆ ಆಧಾರದಲ್ಲಿ ಕೋವಿಡ್‌ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಅಲೋಪಥಿ ವೈದ್ಯರ ವೇತನ ಹೆಚ್ಚಿಸಿದ್ದ ಸರ್ಕಾರ, ಇದೀಗ ಆಯುಷ್‌ ವೈದ್ಯರು ಮತ್ತು ನರ್ಸ್‌ಗಳ ಬೇಡಿಕೆಗಳಿಗೂ ಸ್ಪಂದಿಸಿದೆ. ಅಲೋಪಥಿ ವೈದ್ಯರಿಗೆ ಸಮಾನವಾಗಿ ವೇತನ ಹೆಚ್ಚಳ ಮಾಡಬೇಕು ಎಂದು ಆಯುಷ್‌ ವೈದ್ಯರು ಪ್ರತಿಭಟನೆ ನಡೆಸಿ, ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದರು.

ಆಯುಷ್‌ ವೈದ್ಯರ ವೇತನವನ್ನು ₹25 ಸಾವಿರದಿಂದ ₹48 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ನರ್ಸ್‌ಗಳ ವೇತನವನ್ನು ₹15 ಸಾವಿರದಿಂದ ₹30 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇದು ಆರು ತಿಂಗಳಿಗೆ ಮಾತ್ರ ಅನ್ವಯವಾಗಲಿದೆ.

ADVERTISEMENT

ಮಂಗಳವಾರ ನಡೆದ ಕೋವಿಡ್ ಕಾರ್ಯಪಡೆ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಸುದ್ದಿಗಾರರಿಗೆ ತಿಳಿಸಿದರು.

ಅಲ್ಲದೆ, ತಾತ್ಕಾಲಿಕವಾಗಿ ಕೋವಿಡ್‌ ಚಿಕಿತ್ಸೆಗೆ ನೇಮಿಸಿಕೊಳ್ಳುವ ವೈದ್ಯರಿಗೆ ₹80 ಸಾವಿರ ವೇತನ ನೀಡಲಾಗುವುದು. ಬಿಬಿಎಂಪಿ, ಆರೋಗ್ಯ ಇಲಾಖೆ ಮತ್ತು ಆಯುಷ್‌ ವಿಭಾಗದ ನರ್ಸ್‌ಗಳಿಗೂ ಹೆಚ್ಚಳ ಅನ್ವಯವಾಗಲಿದೆ ಎಂದೂ ಅವರು ಹೇಳಿದರು.

5 ಲಕ್ಷ ರ‍್ಯಾ‍ಪಿಡ್‌ ಆ್ಯಂಟಿಜೆನ್‌ ಕಿಟ್‌:‘ರಾಜ್ಯದಲ್ಲಿ ಈಗ ಒಟ್ಟು 1 ಲಕ್ಷ ರ‍್ಯಾ‍ಪಿಡ್‌ ಆ್ಯಂಟಿಜೆನ್‌ ಕಿಟ್‌ಗಳು ಇದ್ದು, ಹೆಚ್ಚುವರಿಯಾಗಿ 4 ಲಕ್ಷ ಕಿಟ್‌ಗಳನ್ನು ಖರೀದಿ ಮಾಡಲಿದ್ದೇವೆ. ಒಟ್ಟು 5 ಲಕ್ಷಗಳ ಕಿಟ್‌ಗಳನ್ನು ಎಲ್ಲ ಜಿಲ್ಲೆಗಳಲ್ಲೂ ಬಳಸಲಾಗುವುದು. ಅಲ್ಲದೆ, 35 ಲಕ್ಷ ಪಿಪಿಇ ಕಿಟ್‌ಗಳು ಮತ್ತು 35 ಲಕ್ಷ ಮಾಸ್ಕ್‌ಗಳ ಖರೀದಿಗೂ ಅನುಮತಿ ನೀಡಲಾಗಿದೆ’ ಎಂದು ಸುಧಾಕರ್‌ ತಿಳಿಸಿದರು.

‘ರೆಮಿಡಿಸ್ಪಿಯರ್‌ ಔಷಧ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಪ್ಪಿಸಲು ಸರ್ಕಾರದ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆ ಮಾಡಲು ತೀರ್ಮಾನಿಸಲಾಗಿದೆ’ ಎಂದು ಅವರುಹೇಳಿದರು.

ಜಿಲ್ಲೆಗಳಲ್ಲೂ ಲಾಕ್‌ಡೌನ್ ಇಲ್ಲ

‘ಇನ್ನು ಮುಂದೆ ಜಿಲ್ಲಾಧಿಕಾರಿಗಳು ಲಾಕ್‌ಡೌನ್‌ ಕ್ರಮಕ್ಕೆ ಒತ್ತಾಯಿಸದೇ ಕಠಿಣ ಕ್ರಮಗಳ ಮೂಲಕವೇ ಕೋವಿಡ್‌ ಎದುರಿಸಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದರು. ಫೇಸ್‌ಬುಕ್‌ ಲೈವ್‌ ಮೂಲಕ ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ ಲಾಕ್‌ಡೌನ್‌‌ ಮುಂದುವರಿಸುವುದಿಲ್ಲ. ಲಾಕ್‌ಡೌನ್‌ನಿಂದ ಕೋವಿಡ್‌ ಹೋಗುವುದಿಲ್ಲ. ಎಲ್ಲ ಚಟುವಟಿಕೆಗಳು ಆರಂಭಗೊಂಡರೆ ಮಾತ್ರ ರಾಜ್ಯದ ಆರ್ಥಿಕ ಸ್ಥಿತಿಯೂ ಸುಧಾರಣೆಯಾಗುತ್ತದೆ’ ಎಂದು ಹೇಳಿದರು.

43 ಸಾವಿರಕ್ಕೂ ಹೆಚ್ಚು ಮಂದಿಗೆ ಪರೀಕ್ಷೆ

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಒಂದೇ ದಿನ 43,904 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಈವರೆಗೆ ಒಂದೇ ದಿನ ನಡೆಸಿದ ಗರಿಷ್ಠ ಪರೀಕ್ಷೆಗಳು ಇವಾಗಿವೆ. ಹೊಸದಾಗಿ 3,649 ಕೋವಿಡ್ ಪ್ರಕರಣಗಳು ಹಾಗೂ 61 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ.

ಕೋವಿಡ್‌ ಪರೀಕ್ಷೆಗಳನ್ನು ಹೆಚ್ಚಳ ಮಾಡಲಾಗಿದ್ದರೂ ನಿತ್ಯ ಪ್ರಕರಣಗಳ ಸಂಖ್ಯೆ ಇಳಿಕೆಯತ್ತ ಸಾಗಿದೆ. ಅದೇ ರೀತಿ, ಸೋಂಕಿನಿಂದ ಮೃತರಾಗುವ ಸಂಖ್ಯೆ ಕೂಡ ಕಡಿಮೆಯಾಗಿದೆ.

ಒಂದು ವಾರದಲ್ಲಿ 23,811 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಇದೇ ಅವಧಿಯಲ್ಲಿ 536 ಮಂದಿ ಸಾವಿಗೀಡಾಗಿರುವುದು ದೃಢಪಟ್ಟಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 71,069 ಹಾಗೂ ಮೃತಪಟ್ಟವರ ಸಂಖ್ಯೆ 1,464ಕ್ಕೆ ತಲುಪಿದೆ.

ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳುವವರ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಬೆಂಗಳೂರಿನಲ್ಲಿ 520 ಸೇರಿದಂತೆ ರಾಜ್ಯದಲ್ಲಿ 1,664 ಮಂದಿ ಗುಣಮುಖರಾಗಿ ಮಂಗಳವಾರ ಮನೆಗೆ ಹೋಗಿದ್ದಾರೆ.

ತರಕಾರಿ ಮಾರುಕಟ್ಟೆ ಸ್ಥಳಾಂತರಕ್ಕೆ ಸೂಚನೆ

ಕೋವಿಡ್ ಹರಡುವುದನ್ನು ನಿರ್ಬಂಧಿಸುವ ಸಲುವಾಗಿ ತರಕಾರಿ ಮಾರುಕಟ್ಟೆಗಳನ್ನು ಎಪಿಎಂಸಿ ಅಥವಾ ವಿಶಾಲ ಪ್ರದೇಶಗಳಿಗೆ ಸ್ಥಳಾಂತರ ಮಾಡಲು ಸರ್ಕಾರ ಸೂಚಿಸಿದೆ. ಲಾಕ್‌ಡೌನ್ ಅಂತ್ಯವಾದ ಹಿನ್ನೆಲೆಯಲ್ಲಿ ಅನ್‌ಲಾಕ್–2.0 ಕುರಿತು ಮಾರ್ಗಸೂಚಿ ಹೊರಡಿಸಿರುವ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು, ಜನ ಒಂದೆಡೆ ಸೇರುವುದನ್ನು ತಡೆಯಲು ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಕೂಡ ಮಾರುಕಟ್ಟೆಗಳನ್ನು ಸ್ಥಳಾಂತರಿಸಬೇಕು ಎಂದು ಸೂಚಿಸಿದ್ದಾರೆ. ಉದ್ಯಾನಗಳಲ್ಲಿ ಜಿಮ್ ಸಲಕರಣೆಗಳ ಬಳಕೆ ಹಾಗೂ ಬೆಂಚ್ ಮೇಲೆ ಕುಳಿತುಕೊಳ್ಳುವುದನ್ನು ನಿಷೇಧಿಸಲಾಗಿದೆ.ಲಾಕ್‌ಡೌನ್‌ ಮುಗಿದಿರುವ ಜಿಲ್ಲೆಗಳಲ್ಲಿ ಜು.31 ರವರೆಗೆ ರಾತ್ರಿ ವೇಳೆಯಲ್ಲಿ ಕರ್ಫ್ಯೂ ಮತ್ತು ಭಾನುವಾರದಂದು ಮಾತ್ರ ಲಾಕ್‌ಡೌನ್‌ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.