ADVERTISEMENT

ಕೋವಿಡ್ ಲಸಿಕೆ: ವಿತರಣೆಗೆ ಸಮಸ್ಯೆ ಇಲ್ಲ ಎಂದ ಆರೋಗ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2021, 19:28 IST
Last Updated 23 ಮಾರ್ಚ್ 2021, 19:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಲಸಿಕೆಯ ಲಭ್ಯತೆಗೆ ಅನುಸಾರ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ನಮ್ಮ ಅಗತ್ಯಕ್ಕೆ ತಕ್ಕಷ್ಟು ಲಸಿಕೆ ಪೂರೈಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಲಸಿಕೆ ವಿತರಣೆಗೆ ಯಾವುದೇ ಸಮಸ್ಯೆ ಇಲ್ಲ’ ಎಂದು ಆರೋಗ್ಯ ಇಲಾಖೆ ಆಯುಕ್ತ ಡಾ.ಕೆ.ವಿ. ತ್ರಿಲೋಕ ಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯದಲ್ಲಿ ಪ್ರತಿನಿತ್ಯ 3 ಲಕ್ಷ ಮಂದಿಗೆ ಕೋವಿಡ್ ಲಸಿಕೆ ವಿತರಿಸುವ ಗುರಿಯನ್ನು ಆರೋಗ್ಯ ಇಲಾಖೆ ಹಾಕಿಕೊಂಡಿದೆ. ಆದರೆ, ಸದ್ಯ 9 ಲಕ್ಷ ಡೋಸ್‌ಗಳು ಲಭ್ಯ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು ಸೇರಿದಂತೆ 3,500ಕ್ಕೂ ಅಧಿಕ ಕೇಂದ್ರಗಳನ್ನು ಲಸಿಕೆ ವಿತರಣೆಗಾಗಿ ಗುರುತಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನಕ್ಕೆ 100 ಮಂದಿಗೆ ಹಾಗೂ ಆಸ್ಪತ್ರೆಗಳಲ್ಲಿ 500 ಮಂದಿಗೆ ಲಸಿಕೆ ನೀಡುವ ಗುರಿ ನೀಡಲಾಗಿದೆ. ದಿನವೊಂದಕ್ಕೆ ಸರಾಸರಿ 1.25 ಲಕ್ಷ ಮಂದಿಗೆ ಲಸಿಕೆ ವಿತರಣೆ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರವು ಈವರೆಗೆ ರಾಜ್ಯಕ್ಕೆ 38.85 ಲಕ್ಷ ಡೋಸ್ ಲಸಿಕೆ ನೀಡಿದೆ. ಕೆಲವು ಜಿಲ್ಲೆಗಳಿಗೆ ಅಗತ್ಯ ಪ್ರಮಾಣದಲ್ಲಿ ಲಸಿಕೆ ಪೂರೈಕೆ ಆಗುತ್ತಿಲ್ಲ ಎಂಬ ಅಪವಾದ ಎದ್ದಿದೆ. ಲಸಿಕೆಯ ಲಭ್ಯತೆ ಅನುಸಾರ ಹಂಚಿಕೆ ಮಾಡುತ್ತಿರುವ ಆರೋಗ್ಯ ಇಲಾಖೆಯು, ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪೂರೈಕೆ ಮಾಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.