ADVERTISEMENT

COVID–19 UPDATES | ಮಹಾರಾಷ್ಟ್ರದಲ್ಲಿ ಮತ್ತೊಂದು ಸಾವು, ದೇಶದಲ್ಲಿ 50 ಮಂದಿ ಮೃತ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 3:55 IST
Last Updated 1 ಏಪ್ರಿಲ್ 2020, 3:55 IST
ಕೊರೊನಾ ವೈರಸ್‌ ಸೋಂಕಿತರಿಗೆ ಚಿಕಿತ್ಸೆ ನೀಡಲು ಕರೆದೊಯ್ಯುತ್ತಿರುವ ವೈದ್ಯಕೀಯ ಸಿಬ್ಬಂದಿ– ಸಂಗ್ರಹ ಚಿತ್ರ
ಕೊರೊನಾ ವೈರಸ್‌ ಸೋಂಕಿತರಿಗೆ ಚಿಕಿತ್ಸೆ ನೀಡಲು ಕರೆದೊಯ್ಯುತ್ತಿರುವ ವೈದ್ಯಕೀಯ ಸಿಬ್ಬಂದಿ– ಸಂಗ್ರಹ ಚಿತ್ರ   

ಬೆಂಗಳೂರು: ಇಟಲಿ, ಸ್ಪೇನ್‌ ನಂತರದಲ್ಲಿ ಅಮೆರಿಕ ಕೋವಿಡ್‌–19 ಪಿಡುಗಿನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕೊರೊನಾ ವೈರಸ್‌ ಸೋಂಕು ದೃಢಪಟ್ಟ ಪ್ರಕರಣಗಳು ಉಳಿದ ಎಲ್ಲ ರಾಷ್ಟ್ರಗಳಿಗಿಂತ ಅಮೆರಿಕದಲ್ಲಿ ಅತಿ ಹೆಚ್ಚು ದಾಖಲಾಗಿದೆ. ಇದರಿಂದಾಗಿ ಜಗತ್ತಿನಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 8.64 ಲಕ್ಷಕ್ಕೂ ಅಧಿಕವಾಗಿದೆ.

179 ರಾಷ್ಟ್ರಗಳಲ್ಲಿ 8,64,690ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇವರಲ್ಲಿ 1,76,403 ಮಂದಿ ಗುಣಮುಖರಾಗಿದ್ದಾರೆ. ಮಂಗಳವಾರ ಒಂದೇ ದಿನ ಅಮರಿಕದಲ್ಲಿ 865 ಮಂದಿ ಸಾವಿಗೀಡಾಗಿದ್ದು, ಸಂಖ್ಯೆ ಏರಿಕೆಯಾಗುತ್ತಲೇ ಇದೆ. 'ಕೋವಿಡ್‌ ಪರಿಣಾಮಗಳನ್ನು ಎದುರಿಸುವಲ್ಲಿ ಮುಂದಿನ 30 ದಿನಗಳು ಅಮೆರಿಕದ ಪಾಲಿಗೆ ನಿರ್ಣಾಯಕವಾಗಿವೆ' ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇಳಿದ್ದಾರೆ.

ನ್ಯೂಯಾರ್ಕ್ ಸ್ಟೇಟ್‌ವೊಂದರಲ್ಲೇ 67,000ಕ್ಕೂ ಅಧಿಕ ಪ್ರಕರಣಗಳು ಹಾಗೂ ಕನಿಷ್ಠ 1,300 ಮಂದಿ ಸಾವಿಗೀಡಾಗಿದ್ದಾರೆ.

ADVERTISEMENT

ಭಾರತದಲ್ಲಿ 50 ಮಂದಿ ಸಾವು

ಬುಧವಾರ ಮಹಾರಾಷ್ಟ್ರದಲ್ಲಿ ಸೋಂಕಿತರೊಬ್ಬರು ಸಾವಿಗೀಡಾಗಿದ್ದು, ದೇಶದಲ್ಲಿ ಕೋವಿಡ್‌–19ನಿಂದಾಗಿ ಮೃತಪಟ್ಟವರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಸಾವಿಗೀಡಾದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ ಹಾಗೂ 18 ಸೋಂಕು ಪ್ರಕರಣಗಳು ವರದಿಯಾಗುವ ಮೂಲಕ ಒಟ್ಟು ಸೋಂಕು ಪ್ರಕರಣಗಳು 320 ತಲುಪಿದೆ. ಈ ಮೂಲಕ ದೇಶದಾದ್ಯಂತ ಒಟ್ಟು ಸೋಂಕು ಪ್ರಕರಣಗಳು 1,500 ದಾಟಿದೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 102

ರಾಜ್ಯದಲ್ಲಿ ಮಂಗಳವಾರ ಒಂದೇ ದಿನ 13 ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಸೋಂಕಿತರ ಸಂಖ್ಯೆ ಒಂದೇ ತಿಂಗಳಲ್ಲಿ 100 ದಾಟಿದೆ. ಬೆಂಗಳೂರಿನಲ್ಲಿ ಮಾ.9ರಂದು ಕಾಣಿಸಿಕೊಂಡಿದ್ದ ಈ ಸೋಂಕು, ಒಂದೇ ತಿಂಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳನ್ನು ವ್ಯಾಪಿಸಿಕೊಂಡಿದೆ. ಈಗಾಗಲೇ ಸೋಂಕಿಗೆ ಮೂವರು ಮೃತಪಟ್ಟಿದ್ದು, 8 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 91 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಬೆಂಗಳೂರಿನಲ್ಲಿ 4, ಬಳ್ಳಾರಿಯಲ್ಲಿ 3, ಮೈಸೂರಿನಲ್ಲಿ 2 ಹಾಗೂ ಕಲಬುರ್ಗಿ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ತಲಾ ಒಂದು ಪ್ರಕರಣ ಹೊಸದಾಗಿ ವರದಿಯಾಗಿವೆ. 43 ಮಂದಿಯನ್ನು ಸೋಂಕು ಶಂಕೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 37,261 ಮಂದಿ 14 ದಿನಗಳ ನಿಗಾವನ್ನು ಮುಕ್ತಾಯಗೊಳಿಸಿದ್ದಾರೆ. ಹೊಸದಾಗಿ 2,318 ಮಂದಿ ನಿಗಾ ವ್ಯವಸ್ಥೆಗೆ ಒಳಪಟ್ಟಿದ್ದಾರೆ.

ಕೋವಿಡ್‌–19ಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಅನುಮಾನಗಳಿಗೆ ಆರೋಗ್ಯ ಸಹಾಯವಾಣಿ 104 ಅಥವಾ 97456 97456ಕ್ಕೆ ಸಂಪರ್ಕಿಸುವಂತೆ ಇಲಾಖೆ ಮನವಿ ಮಾಡಿದೆ.

ಕರ್ನಾಟಕ–102
ಬೆಂಗಳೂರು 45
ಮೈಸೂರು 14
ಚಿಕ್ಕಬಳ್ಳಾಪುರ 10
ದಕ್ಷಿಣ ಕನ್ನಡ 08
ಕಲಬುರ್ಗಿ 04
ದಾವಣಗೆರೆ 03
ಉಡುಪಿ 03
ಬಳ್ಳಾರಿ 03
ತುಮಕೂರು 02
ಕೊಡಗು 01
ಧಾರವಾಡ 01

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.