ADVERTISEMENT

ಶೇ 50ರಷ್ಟು ಜನರ ಸೋಂಕಿನ ಮೂಲ ನಿಗೂಢ

ಪರಿಣಾಮಕಾರಿಯಾಗಿ ನಡೆಯದ ಕೋವಿಡ್ ಪೀಡಿತರ ಸಂಪರ್ಕ ಪತ್ತೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2020, 19:27 IST
Last Updated 22 ಜುಲೈ 2020, 19:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಬೆಂಗಳೂರು: ರಾಜ್ಯದಲ್ಲಿ ವರದಿಯಾದ ಒಟ್ಟು ಕೋವಿಡ್ ಪ್ರಕರಣಗಳಲ್ಲಿ ಶೇ 50.18 ರಷ್ಟು ಜನರಿಗೆ ಸೋಂಕು ಹೇಗೆ ತಗುಲಿತು ಎನ್ನುವುದೇ ತಿಳಿದಿಲ್ಲ. ಇದರಿಂದಾಗಿ ಅವರ ಸಂಪರ್ಕ ಪತ್ತೆ ಕಾರ್ಯವನ್ನು ಕೂಡ ಕೈಬಿಡಲಾಗಿದೆ.

ರಾಜ್ಯದಲ್ಲಿ ಮೊದಲ ಕೋವಿಡ್ ಪ್ರಕರಣ ವರದಿಯಾದ ಬಳಿಕ ಸೋಂಕಿತರ ನೇರ ಹಾಗೂ ಪರೋಕ್ಷ ಸಂಪರ್ಕಿತರನ್ನು ಪತ್ತೆ ಮಾಡಿ, ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿತ್ತು. ಇದರಿಂದಾಗಿಯೇ ದೇಶದಾದ್ಯಂತ ನಡೆಸಲಾಗಿದ್ದ ನಾಲ್ಕು ಹಂತದಲಾಕ್‌ ಡೌನ್ ಮುಕ್ತಾಯವಾಗುವ ವೇಳೆ (ಮೇ 31) ರಾಜ್ಯದಲ್ಲಿ ಕೇವಲ 3,222 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ಬೆಂಗಳೂರಿನಲ್ಲಿ 358 ಸೋಂಕಿತರು ಮಾತ್ರ ಇದ್ದರು. ಈ ವೇಳೆ ಮಹಾರಾಷ್ಟ್ರ, ದೆಹಲಿ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಧಿಕ ಪ್ರಕರಣಗಳು ವರದಿಯಾಗಿದ್ದವು. ಇಲ್ಲಿ ಸೋಂಕು ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯವೇ ಮೆಚ್ಚುಗೆ ವ್ಯಕ್ತಪಡಿಸಿತ್ತು.

ಸೋಂಕಿತರ ಸಂಖ್ಯೆ ಹೆಚ್ಚಳವಾದಂತೆ ಸಂಪರ್ಕ ಪತ್ತೆ, ಸಾಂಸ್ಥಿಕ ಕ್ವಾರಂಟೈನ್, ನೇರ ಮತ್ತು ಪರೋಕ್ಷ ಸಂಪರ್ಕಿತರಿಗೆ ಕೋವಿಡ್ ಪರೀಕ್ಷೆ ನಡೆಸುವ ಪ್ರಕ್ರಿಯೆಯನ್ನು ಕೈಬಿಡಲಾಗಿದೆ.ರೋಗಿಗಳೊಂದಿಗೆ ಸಂಪರ್ಕ ಹೊಂದಿರುವವರು ಕೂಡ ಸ್ವಯಂಪ್ರೇರಿತರಾಗಿ ವರದಿ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಕೆಲ ಪ್ರಕರಣಗಳು ತಡವಾಗಿ ಪತ್ತೆಯಾಗುತ್ತಿವೆ. ಇನ್ನೊಂದೆಡೆ ಬಹುತೇಕ ಪ್ರಕರಣಗಳಲ್ಲಿ ಸೋಂಕಿನ ಲಕ್ಷಣಗಳೇ ಗೋಚರಿಸದ ಪರಿಣಾಮ ಸೋಂಕು ಶಂಕಿತರನ್ನು ಪತ್ತೆ ಮಾಡುವುದು ಇಲಾಖೆಯ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.

ADVERTISEMENT

ಸಂಪರ್ಕದಿಂದ ಸೋಂಕು:ರಾಜ್ಯದ ವಿವಿಧೆಡೆ ನಡೆಸಿದ ರ್‍ಯಾಂಡಮ್ ಪರೀಕ್ಷೆಯಲ್ಲಿ ರೋಗಿ ಜೊತೆ ಪರೋಕ್ಷ ಸಂ‍ಪರ್ಕ ಹೊಂದಿದವರೂ ಸೋಂಕಿತರಾಗಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ ವರದಿಯಾದ ಕೋವಿಡ್‌ ಪ್ರಕರಣಗಳಲ್ಲಿ ಶೇ 13.3 ರಷ್ಟು ಮಂದಿ ರೋಗಿಗಳ ಸಂಪರ್ಕದಿಂದ ಸೋಂಕಿತರಾಗಿದ್ದಾರೆ. ಸಂಪರ್ಕ ಹೊಂದಿದವರ ಪತ್ತೆ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ನಡೆಸದ ಪರಿಣಾಮ ಕೆಲವರಿಗೆ ಸೋಂಕು ತಗುಲಿರುವುದು ನಿಧಾನವಾಗಿ ಗೊತ್ತಾಗುತ್ತಿದೆ.

‘ಒಮ್ಮೆಯೇ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದ ಪರಿಣಾಮ ಸಂಪರ್ಕಿತರ ಪತ್ತೆ ಸಾಧ್ಯವಾಗುತ್ತಿಲ್ಲ. ಅಗತ್ಯ ಪ್ರಮಾಣದಲ್ಲಿ ಸಿಬ್ಬಂದಿಯೂ ನಮ್ಮಲ್ಲಿ ಇಲ್ಲ. ದಿನದ ಬಹುತೇಕ ಸಮಯ ಸಭೆಯಲ್ಲಿಯೇ ಕಳೆದುಹೋಗುತ್ತದೆ. ಹೀಗಾಗಿ ಅಧಿಕಾರಿಗಳಿಗೆ ಸಹ ಕಾರ್ಯಕ್ಷೇತ್ರಕ್ಕೆ ಭೇಟಿ ನೀಡಲು ಕೆಲವು ವೇಳೆ ಕಷ್ಟವಾಗುತ್ತಿದೆ’ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.