ADVERTISEMENT

ಕೋವಿಡ್‌ ಲಾಕ್‌ಡೌನ್‌: ಬೆಂಗಳೂರಿನಲ್ಲಿ 46,448 ವಾಹನ ಜಪ್ತಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 22:01 IST
Last Updated 10 ಜೂನ್ 2021, 22:01 IST
ಲಾಕ್‌ಡೌನ್‌ ಸಂದರ್ಭದಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ–ಸಾಂದರ್ಭಿಕ ಚಿತ್ರ
ಲಾಕ್‌ಡೌನ್‌ ಸಂದರ್ಭದಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ–ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಲಾಕ್‌ಡೌನ್ ವೇಳೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ಇದುವರೆಗೆ 46,448 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

‘ಪ್ರತಿಯೊಂದು ರಸ್ತೆಯಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದ್ದು, ಸಿಬ್ಬಂದಿ ವಾಹನಗಳ ತಪಾಸಣೆ ಮಾಡುತ್ತಿದ್ದಾರೆ. ಇದುವರೆಗೂ 41,376 ದ್ವಿಚಕ್ರ ವಾಹನ, 2,264 ಮೂರು ಚಕ್ರ ವಾಹನ ಹಾಗೂ 2,808 ನಾಲ್ಕು ಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ದಂಡ ಕಟ್ಟಿಸಿಕೊಂಡು ಕೆಲ ವಾಹನಗಳನ್ನು ಬಿಡುಗಡೆ ಮಾಡಲಾಗಿದೆ. ಬಹುತೇಕ ವಾಹನಗಳನ್ನು ಆಯಾ ಠಾಣೆ ವ್ಯಾಪ್ತಿಯಲ್ಲೇ ನಿಲ್ಲಿಸಲಾಗಿದ್ದು, ನ್ಯಾಯಾಲಯದ ಮೂಲಕವೇ ಅವುಗಳನ್ನು ಬಿಡಿಸಿಕೊಳ್ಳಬೇಕು. ವಾಹನ ಬಿಡುಗಡೆ ಸಂಬಂಧ ಹೈಕೋರ್ಟ್ ಕೆಲ ನಿರ್ದೇಶನಗಳನ್ನು ನೀಡಿದ್ದು, ಅವುಗಳನ್ನು ಪಾಲಿಸಲಾಗುವುದು’ ಎಂದೂ ತಿಳಿಸಿದರು.

ADVERTISEMENT

₹ 4.37 ಕೋಟಿ ದಂಡ: ‘ಅಂತರ ಪಾಲಿಸದ ಹಾಗೂ ಮಾಸ್ಕ್ ಹಾಕಿಕೊಳ್ಳದವರ ವಿರುದ್ಧ 1.79 ಲಕ್ಷ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅವರಿಂದ ₹ 4.37 ಕೋಟಿ ದಂಡ ಸಂಗ್ರಹಿಸಲಾಗಿದೆ’ ಎಂದು ಅಧಿಕಾರಿ ಮಾಹಿತಿ ನೀಡಿದರು.

1,754 ಪೊಲೀಸರಿಗೆ ಸೋಂಕು: ‘ನಗರ ಕಮಿಷನರೇಟ್ ವ್ಯಾಪ್ತಿಯ 1,754 ಪೊಲೀಸರಿಗೆ ಎರಡನೇ ಅಲೆಯಲ್ಲಿ ಕೊರೊನಾ ಸೋಂಕು ತಗುಲಿದೆ. ಅದರಲ್ಲಿ 16 ಮಂದಿ ಮೃತಪಟ್ಟಿದ್ದಾರೆ. 1,554 ಪೊಲೀಸರು ಗುಣಮುಖವಾಗಿದ್ದು, ಸದ್ಯ 184 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದೂ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.