ADVERTISEMENT

ಭೂಗತ ಪಾತಕಿಗೆ ‘ಎಸಿಪಿ’ಯೇ ಮಾಹಿತಿದಾರ!

ವಿಚಾರಣೆ ವೇಳೆ ಬಾಯ್ಬಿಟ್ಟ ರವಿ ಪೂಜಾರಿ * ಶಿಸ್ತುಕ್ರಮಕ್ಕೆ ಕಮಿಷನರ್ ಶಿಫಾರಸು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 20:50 IST
Last Updated 12 ಮಾರ್ಚ್ 2020, 20:50 IST
ವೆಂಕಟೇಶ್‌ ಹಾಗೂ ರವಿ ಪೂಜಾರಿ
ವೆಂಕಟೇಶ್‌ ಹಾಗೂ ರವಿ ಪೂಜಾರಿ   

ಬೆಂಗಳೂರು: ರಾಜ್ಯದಲ್ಲಿ 97 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಭೂಗತ ಪಾತಕಿ ರವಿ ಪೂಜಾರಿಗೆ ಪೊಲೀಸ್‌ ಇಲಾಖೆ ಬೆಳವಣಿಗೆಗಳ ಬಗ್ಗೆ ಸಿಸಿಬಿಯ ಸಹಾಯಕ ಪೊಲೀಸ್ ಕಮಿಷನರ್‌ರೊಬ್ಬರು (ಎಸಿಪಿ) ಮಾಹಿತಿ ನೀಡುತ್ತಿದ್ದ ಆಘಾತಕಾರಿ ಸಂಗತಿ ತನಿಖೆಯಿಂದ ಹೊರಬಿದ್ದಿದೆ.

ಸೆನೆಗಲ್‌ನಲ್ಲಿ ಸಿಕ್ಕಿಬಿದ್ದಿದ್ದ ಪೂಜಾರಿಯನ್ನು ಗಡೀಪಾರು ಮೂಲಕ ನಗರಕ್ಕೆ ಕರೆತಂದು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಈ ಸಂಗತಿ ಬಯಲಾಗಿದೆ. ‘ನನ್ನ ವಿರುದ್ಧದ ಪ್ರಕರಣ, ಅದರ ತನಿಖೆ ಸ್ಥಿತಿ ಹಾಗೂ ವಿವಾದಿತ ಪ್ರಕರಣಗಳ ಬಗ್ಗೆ ಎಸಿಪಿ ವೆಂಕಟೇಶ್ ಪ್ರಸನ್ನ ಅವರೇ ಮಾಹಿತಿ ನೀಡುತ್ತಿದ್ದರು’ ಎಂಬುದನ್ನು ಪೂಜಾರಿಯೇ ಬಾಯ್ಬಿಟ್ಟಿದ್ದಾನೆ.

ಈ ಬಗ್ಗೆ ಪ್ರಕರಣದ ತನಿಖಾಧಿಕಾರಿಯೇ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರಿಗೆ ವರದಿ ನೀಡಿದ್ದಾರೆ. ಇದನ್ನು ಆಧರಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದಿರುವ ಭಾಸ್ಕರ್ ರಾವ್, ತಪ್ಪಿತಸ್ಥ ಎಸಿಪಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿದ್ದಾರೆ.

ADVERTISEMENT

ಇದರ ಬೆನ್ನಲ್ಲೇ ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ ಅವರನ್ನು ಅತಿ ಗಣ್ಯ ವ್ಯಕ್ತಿಗಳ (ವಿವಿಐಪಿ) ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಅವರ ವಿರುದ್ಧ ಇಲಾಖಾ ವಿಚಾರಣೆಯೂ ಆರಂಭವಾಗಿರುವುದಾಗಿ ಮೂಲಗಳು ತಿಳಿಸಿವೆ.

ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಭಾಸ್ಕರ್‌ ರಾವ್, ‘ಸಿಸಿಬಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಯೇ ಭೂಗತ ಪಾತಕಿ ರವಿ ಪೂಜಾರಿ ಜೊತೆ ಸಂಪರ್ಕವಿಟ್ಟುಕೊಂಡಿದ್ದು ಗೊತ್ತಾಗಿದೆ. ಅಧಿಕಾರಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಶಿಫಾರಸು ಮಾಡಿದ್ದೇನೆ. ಪೂಜಾರಿ ಹಾಗೂ ಎಸಿಪಿ ನಡುವಿನ ಸಂಬಂಧದ ಬಗ್ಗೆ ನಿಖರವಾಗಿ ತಿಳಿದುಕೊಳ್ಳಲು ತನಿಖೆ ಮುಂದುವರಿದಿದೆ’ ಎಂದರು.

‘ಪೂಜಾರಿ ವಿರುದ್ಧದ ಪ್ರಕರಣಗಳ ತನಿಖೆಯನ್ನು ಸಿಸಿಬಿ ನಡೆಸುತ್ತಿದೆ. ಅದೇ ಸಿಸಿಬಿಯಲ್ಲೇ ತಪ್ಪಿತಸ್ಥ ಎಸಿಪಿ ಇದ್ದಾರೆ. ತನಿಖೆ ಪಾರದರ್ಶಕ ಆಗಿರಬೇಕು. ಅಧಿಕಾರಿಯಾಗಲಿ ಬೇರೆ ಯಾರೇ ಆಗಲಿ ಪ್ರಭಾವ ಬೀರಬಾರದು. ಹೀಗಾಗಿ, ಎಸಿಪಿಯನ್ನು ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ’ ಎಂದು ಹೇಳಿದರು.

ತಮ್ಮ ವಿರುದ್ಧದ ಆರೋಪದ ಬಗ್ಗೆ ಪ್ರತಿಕ್ರಿಯೆ ಪಡೆಯಲು ವೆಂಕಟೇಶ್ ಪ್ರಸನ್ನ ಲಭ್ಯರಾಗಲಿಲ್ಲ.

‘ಮಂಗಳೂರಿನಲ್ಲೇ ಬೆಳೆದಿದ್ದ ಸ್ನೇಹ’
‘1994ರಲ್ಲಿ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ (ಪಿಎಸ್‌ಐ) ಆಗಿ ವೃತ್ತಿ ಆರಂಭಿಸಿದ್ದ ವೆಂಕಟೇಶ್ ಪ್ರಸನ್ನ, ಆರಂಭದಲ್ಲಿ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2002ರಲ್ಲಿ ಇನ್‌ಸ್ಪೆಕ್ಟರ್ ಆಗಿ ಬಡ್ತಿ ಹೊಂದಿದ್ದರು. ಅದೇ ಸಮಯದಲ್ಲೇ ರವಿ ಪೂಜಾರಿ, ಕಲಿ ಯೋಗೇಶ್‌ ಸೇರಿ ಹಲವರ ಭೂಗತ ಚಟುವಟಿಕೆಗಳು ಶುರುವಾಗಿದ್ದವು. ಅವರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ವೆಂಕಟೇಶ್‌ ಪ್ರಸನ್ನ ಮಹತ್ವದ ಪಾತ್ರ ವಹಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಕಾರ್ಯಾಚರಣೆ ಮಾಡುತ್ತಲೇ ಪೂಜಾರಿ ಹಾಗೂ ಯೋಗೇಶ್ ಜೊತೆ ಸ್ನೇಹ ಬೆಳೆದಿತ್ತು. ಭೂಗತ ಚಟುವಟಿಕೆಗಳ ಬಗ್ಗೆ ಅವರಿಂದ ಸಾಕಷ್ಟು ಮಾಹಿತಿ ಕಲೆಹಾಕಿದ್ದರು. ಪ್ರತಿಯಾಗಿ ಪೂಜಾರಿಗೂ ಇಲಾಖೆ ಬೆಳವಣಿಗೆ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದರು. 2016ರಲ್ಲಿ ವೆಂಕಟೇಶ್ ಪ್ರಸನ್ನ ಅವರನ್ನು ಬೆಂಗಳೂರಿನ ಸಿಸಿಬಿಗೆ ವರ್ಗ ಮಾಡಲಾಯಿತು. ಅದಾದ ನಂತರವೂ ಅವರು ಹಲವು ಬಾರಿ ಪೂಜಾರಿ ಜೊತೆ ಮಾತನಾಡಿದ್ದಾರೆ’ ಎಂದು ಮೂಲಗಳು ಹೇಳಿವೆ.

ಮಂಗಳೂರಿನಲ್ಲಿ ಯಾವುದೇ ಗಲಾಟೆ ನಡೆದರೂ ವೆಂಕಟೇಶ್‌ ಪ್ರಸನ್ನ ಅವರನ್ನು ನಿಯೋಜನೆ ಮಾಡಲಾಗುತ್ತಿತ್ತು. ಇದೀಗ ಅವರ ವಿರುದ್ಧವೇ ರವಿ ಪೂಜಾರಿ ಜೊತೆ ಸಂಪರ್ಕವಿಟ್ಟುಕೊಂಡಿದ್ದ ಆರೋಪ ಕೇಳಿಬಂದಿದೆ.

‘ಭೂಗತ ದೊರೆಗಳ ಸಂಪರ್ಕ ಒಳ್ಳೆಯದಲ್ಲ’
‘ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವುದು ಗೌರವದ ವಿಷಯ. ಇಂಥ ಅವಕಾಶ ಪಡೆದ ಕೆಲ ಪೊಲೀಸರು, ಅಕ್ರಮ ಹಣ ಸಂಪಾದನೆಗಾಗಿ ಭೂಗತ ದೊರೆಗಳ ಜೊತೆ ಕೈ ಜೋಡಿಸುತ್ತಿರುವುದು ಇಲಾಖೆಗೆ ರಾಜ್ಯಕ್ಕೆ ದೇಶಕ್ಕೆ ಒಳ್ಳೆಯದಲ್ಲ’ ಎಂದು ಭಾಸ್ಕರ್ ರಾವ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.