ADVERTISEMENT

'ಸಿದ್ರಾಮುಲ್ಲಾ ಖಾನ್‌' ಎಂದ ಸಿ.ಟಿ ರವಿ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

‘ಸಿದ್ರಾಮುಲ್ಲಾ ಖಾನ್‌’ ಹೇಳಿಕೆ ಖಂಡಿಸಿ ಮುತ್ತಿಗೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 18:21 IST
Last Updated 3 ಡಿಸೆಂಬರ್ 2022, 18:21 IST
ಚಿಕ್ಕಮಗಳೂರಿನಲ್ಲಿ ಶನಿವಾರ ಪೊಲೀಸರು ಕಾಂಗ್ರೆಸ್‌ನ ಪ್ರತಿಭಟನಕಾರರನ್ನು ವಶಕ್ಕೆ ಪಡೆದರು
ಚಿಕ್ಕಮಗಳೂರಿನಲ್ಲಿ ಶನಿವಾರ ಪೊಲೀಸರು ಕಾಂಗ್ರೆಸ್‌ನ ಪ್ರತಿಭಟನಕಾರರನ್ನು ವಶಕ್ಕೆ ಪಡೆದರು   

ಚಿಕ್ಕಮಗಳೂರು: ‘ಕಾಂಗ್ರೆಸ್‌ನ ಸಿದ್ರಾಮುಲ್ಲಾ ಖಾನ್‌ (ಸಿದ್ದರಾಮಯ್ಯ) ಮತ್ತೆ ಅಧಿಕಾರಕ್ಕೆ ಬಂದರೆ ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆಯುತ್ತವೆ’ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆಯನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ನಿಂದ ಶನಿವಾರ ಪ್ರತಿಭಟನೆ, ರವಿ ಮನೆಗೆ ಮುತ್ತಿಗೆ ಯತ್ನ ನಡೆಯಿತು.

ತಾಲ್ಲೂಕು ಕಚೇರಿಯಿಂದ ರವಿ ಅವರ ಮನೆ ಕಡೆಗೆ ಹೊರಟ ಕಾಂಗ್ರೆಸ್ಸಿಗರು ಸ್ವಲ್ಪ ದೂರ ಸಾಗುತ್ತಿದ್ದಂತೆ, ಎದುರುಗಡೆಯಿಂದ ಬಿಜೆಪಿ ಕಾರ್ಯಕರ್ತರು ಪ್ರತಿರೋಧ ವ್ಯಕ್ತಪಡಿಸಿದರು. ಪೊಲೀಸರು
ಎರಡೂ ಕಡೆ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್‌ ಇಟ್ಟು ಪ್ರತಿಭಟನಕಾರರನ್ನು ತಡೆದರು.

ಕಾಂಗ್ರೆಸ್‌ನವರು ರವಿ ವಿರುದ್ಧ ಘೋಷಣೆ ಕೂಗಿದರು. ಬಸವನಹಳ್ಳಿ ಮುಖ್ಯರಸ್ತೆಯಲ್ಲಿ ಧರಣಿ ನಡೆಸಿ, ಭಾಷಣ ಮಾಡಿದರು. ಪೊಲೀಸರು ಸ್ವಲ್ಪ ಹೊತ್ತಿನ ನಂತರ ಕಾಂಗ್ರೆಸ್‌ ಪ್ರತಿಭಟನಕಾರರನ್ನು ವಶಕ್ಕೆ ಪಡೆದು ವಾಹನಗಳಿಗೆ ಹತ್ತಿಸಿದರು.

ADVERTISEMENT

ಬಸನವನಹಳ್ಳಿ ರಸ್ತೆಯಲ್ಲಿರುವ ರವಿ ಅವರ ನಿವಾಸಕ್ಕೆ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು.

ಬಿಜೆಪಿ‌: ಓಂಕಾರೇಶ್ವರ ದೇಗುಲ ಬಳಿ ಸೇರಿದ ಬಿಜೆಪಿಯವರು ‘ಸಿದ್ದರಾಮಯ್ಯ ಹಿಂದೂ ವಿರೋಧಿ’ ಎಂದು ಘೋಷಣೆ ಕೂಗಿದರು. ಪೊಲೀಸರು ಪ್ರತಿಭಟನಾನಿರತರನ್ನು ವಾಹನಕ್ಕೆ ಹತ್ತಿಸಲು ಮುಂದಾದರು. ಪರಸ್ಪರ ವಾಗ್ವಾದ ನಡೆಯಿತು.

‘ನಾರಾಯಣಪುರ ಬಡಾವಣೆ ತಿರುವಿನ ಮುಖ್ಯರಸ್ತೆಯಲ್ಲಿ ಕೆಲ ಕಾಂಗ್ರೆಸ್‌ ಕಾರ್ಯಕರ್ತರು ಸಾಗುವಾಗ ಬಿಜೆಪಿಯ ಪುಷ್ಪರಾಜ್‌ ಅವರು ಕಲ್ಲು ತೂರಿದ್ದು ಸಿದ್ದೇಶ್‌, ಸಚಿನ್‌ ಅವರಿಗೆ ಪೆಟ್ಟಾಗಿದೆ’ ಎಂದು ಕಾಂಗ್ರೆಸ್‌ ಜಿಲ್ಲಾ ವಕ್ತಾರ ಎಚ್‌.ಎಸ್‌.ಪುಟ್ಟಸ್ವಾಮಿ ದೂರಿದ್ದಾರೆ. ‘ಕಾಂಗ್ರೆಸ್‌ನ 83 ಮಂದಿಯನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಲಾಗಿದೆ. ಪ್ರತಿಭಟನೆಗೆ ಯಾರಿಗೂ ಅನುಮತಿ ಕೊಟ್ಟಿರಲಿಲ್ಲ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.