ADVERTISEMENT

ಜಾತಿ, ಧರ್ಮದ ಕಾರಣಕ್ಕೆ ಮೋದಿ ವಿರೋಧಿಸುವವರು ತಾಯಿ ಗಂಡ್ರು...

ಸಿ.ಟಿ.ರವಿ ಭಾಷಣ ಎನ್ನಲಾದ ವಿಡಿಯೋ ವೈರಲ್‌

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 18:59 IST
Last Updated 14 ಏಪ್ರಿಲ್ 2019, 18:59 IST
   

ಚಿಕ್ಕಮಗಳೂರು: ಯಾರಾದರೂ ಜಾತಿ, ಧರ್ಮದ ಕಾರಣಕ್ಕೆ ಮೋದಿ ವಿರೋಧಿಸಿದ್ರೆ ‘ಉಂಡ ಮನೆಗೆ ದ್ರೋಹ ಬಗೆದಂತೆ’ ಅಥವಾ ಹಳ್ಳಿಗಳಲ್ಲಿ ಹೇಳ್ತಾರಲ್ಲಾ ‘ತಾಯಿ ಗಂಡ್ರು’ ಆ ಲೆಕ್ಕ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಿ.ಟಿ.ರವಿ ಭಾಷಣ ಎನ್ನಲಾದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಯಾವುದೇ ಯೋಜನೆಯಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ ಅಂತ ತಾರತಮ್ಯ ಮಾಡಿಲ್ಲ. ಅಕಸ್ಮಾತ್‌ ಯಾರದ್ರೂ ಇವರು ಹಿಂದು, ಮುಸ್ಲಿಂ, ಕ್ರೈಸ್ತ ಅಂಥ ಬಿಜೆಪಿಗೆ ವೋಟು ಹಾಕಲ್ಲ ಅಂಥ ಎಂದು ಯೋಚನೆ ಮಾಡಿದರೆ ಅದು ಒಂಥರಾ ತಾಯಿ ಗಂಡ ಕೆಲಸ. ಅದೇ ಕೆಲಸ ಅದು.

ಯಾಕಂದ್ರೆ ಮೋದಿ ಅವರು ಯಾವ ದ್ರೋಹ ಮಾಡಿಲ್ಲ. ಗ್ಯಾಸ್‌ ಕೊಡುವಾಗ ಜಾತಿ ಮೇಲೆ ಕೊಡಲ್ಲ ಅಂತ ಏನಾದ್ರೂ ಹೇಳಿದ್ದಾರಾ... ‘ಫ್ರೀ’ ಗ್ಯಾಸ್‌ ತೆಗೆದುಕೊಳ್ಳುವಾಗ ‘ಕ್ಯು’ನಲ್ಲಿ ನಿಂತು ತೆಗೆದುಕೊಂಡರು. ಮೋದಿ ಆಯುಷ್ಮಾನ್‌ ಭಾರತ್‌ ಲಾಭ ಪಡೆಯುತ್ತಿರುವುದು ಯಾರು ಅಂತ ಗೊತ್ತು. ವೋಟು ಹಾಕಲು ಮೋದಿ ಬೇಡ ಅಂದ್ರೆ ದೇವರು ಮೆಚ್ಚುತ್ತಾನಾ...?

ADVERTISEMENT

ಅವರ ‘ಬಿಲ್‌’ ಮೂರೂವರೆ ಲಕ್ಷ ಆಯ್ತು... ಮೋದಿ ಆಯುಷ್ಮಾನ್‌ನಿಂದ ಬಂತು ಅಂತ ತೆಗೆದುಕೊಳ್ಳುತ್ತಾರೆ ಆದರೆ ವೋಟು ಹಾಕದಿಲ್ಲ ಎಂದು ಹೇಳಿದರೆ ಹೇಗೆ? ಮೋದಿ ಯಾವುದಾದರೂ ತಾರತಮ್ಯ ಮಾಡಿದ್ದಾರಾ, ಯಾರಿಗೂ ತಾರತಮ್ಯ ಮಾಡಿಲ್ಲ ದೇಶದ ಸಲುವಾಗಿ ಯೋಚನೆ ಮಾಡುತ್ತಿದ್ದಾರೆ. ದೇಶ ಉಳಿಸಿಕೊಳ್ಳುವ ಚುನಾವಣೆ ಇದು, ದೇಶಕ್ಕೆ ತಾಕತ್ತು ಕೊಡುವ ಚುನಾವಣೆ. ಆ ಕಾರಣಕ್ಕಾಗಿ ಬಿಜೆಪಿಗೆ ವೋಟು ಹಾಕಬೇಕು.

ಭಾರತದೊಳಗೇ ಸಿಹಿ ಹಂಚಿ ಪಟಾಕಿ ಸಿಡಿಸಬೇಕಾದ್ರೆ ನಿಮ್ಮನಿಮ್ಮ ಬೂತ್‌ನಲ್ಲಿ ಲೀಡ್‌ ಕೊಡಿಸಿ, ನಿಮ್ಮ ಬೂತ್‌ ನೆಗೆದುಬಿದ್ದರೂ ಪರವಾಗಿಲ್ಲ ಅಂದ್ರೆ ಪಾಕಿಸ್ತಾನದವರು ಪಟಾಕಿ ಸಿಡಿಸುತ್ತಾರೆ. ನಿಮ್ಮ ಬೂತ್‌, ಏರಿಯಾದಲ್ಲಿ ಬಿಜೆಪಿ ಲೀಡ್‌ ಬಂದ್ರೆ ನಾವೇ ಪಟಾಕಿ ಹೊಡೆಯಬಹುದು, ಇಲ್ಲದಿದ್ದರೆ ಪಾಕಿಸ್ತಾನದವರು ಪಟಾಕಿ ಹೊಡೆಯುತ್ತಾರೆ. ಎಲ್ಲಿ ಹೊಡೆಯಬೇಕು ಎಂದು ತೀರ್ಮಾನ ನೀವು ಮಾಡಿ. ನೀವೇ ಹೊಡೆಯಬೇಕು ಎಂದರೆ ನಿಮ್ಮ ಬೂತ್‌ನಲ್ಲಿ ಲೀಡ್‌ ಕೊಡಿ ಎಂಬ ಮಾತುಗಳು ವಿಡಿಯೊದಲ್ಲಿವೆ.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮವೊಂದರಲ್ಲಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಸಿ.ಟಿ.ರವಿ ಭಾಷಣದಲ್ಲಿ ಈ ರೀತಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಜೆಡಿಎಸ್‌ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಘಟಕದ ಕಾರ್ಯದರ್ಶಿ ಸಿರಾಜ್‌ ಹುಸೇನ್‌ ಮತ್ತು ಬ್ಲಾಕ್‌ ಕಾಂಗ್ರೆಸ್‌ ವಕ್ತಾರ ರೂಬೆನ್‌ ಮೊಸೆಸ್‌ ಜಿಲ್ಲಾ ಚುನಾವಣಾಧಿಕಾರಿ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.