
ನವದೆಹಲಿ: ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಲು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಅವರು ಮಂಗಳವಾರ ಕರೆದಿದ್ದ ಸಂಧಾನ ಸಭೆಯನ್ನು ತಮಿಳುನಾಡು ಬಹಿಷ್ಕರಿಸಿತು. ಇದರಿಂದಾಗಿ, ಮಾತುಕತೆಯ ಮೂಲಕ ವಿವಾದ ಬಗೆಹರಿಸಲು ಉತ್ಸುಕತೆ ತೋರಿದ್ದ ಕರ್ನಾಟಕಕ್ಕೆ ಹಿನ್ನಡೆಯಾಗಿದೆ.
ಕರ್ನಾಟಕ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ತಮಿಳುನಾಡು ಹಾಗೂ ಪುದುಚೆರಿಯ ಜಲಸಂಪನ್ಮೂಲ ಸಚಿವರಿಗೆ ಆಹ್ವಾನ ನೀಡಲಾಗಿತ್ತು. ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಶಿವಕುಮಾರ್, ‘ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ಮಾಡಲು ದೆಹಲಿಗೆ ಬಂದಿದ್ದೇನೆ. ದಕ್ಷಿಣ ಪಿನಾಕಿನಿ ಜಲವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥ ಮಾಡಲು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಸಂಧಾನ ಸಭೆ ಮಂಗಳವಾರ ನಡೆಯಬೇಕಿತ್ತು. ಈ ಸಭೆಗೆ ತಮಿಳುನಾಡಿನ ಪ್ರತಿನಿಧಿ ಗೈರಾಗಿದ್ದಾರೆ. ಹಾಗಾಗಿ, ಸಭೆ ರದ್ದಾಗಿದೆ. ಪ್ರತ್ಯೇಕವಾಗಿ ಸಭೆ ನಡೆಸುವಂತೆ ತಮಿಳುನಾಡು ಒತ್ತಾಯಿಸಿದೆ’ ಎಂದರು.
ದಕ್ಷಿಣ ಪಿನಾಕಿನಿ ನದಿಯ ಕಣಿವೆಯಲ್ಲಿ ಕರ್ನಾಟಕ ಸರ್ಕಾರವು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಿದೆ. ಬೆಂಗಳೂರಿನ ಎಲೆ ಮಲ್ಲಪ್ಪ ಚೆಟ್ಟಿ ಕೆರೆಯಿಂದ ಹೊಸಕೋಟೆಯವರೆಗೆ ನೀರು ಹರಿಸುವ ಕಾಮಗಾರಿ, ಬ್ಯಾಲಹಳ್ಳಿ ಗ್ರಾಮದ ಹತ್ತಿರ ಪೆನ್ನಾರ್ ನದಿಯಿಂದ ನೀರು ಹರಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ಗೆ 2018ರ ಮೇ 18ರಂದು ಅರ್ಜಿ ಸಲ್ಲಿಸಿತ್ತು. ಜಲವಿವಾದ ನ್ಯಾಯಮಂಡಳಿ ಸ್ಥಾಪಿಸುವಂತೆ ಒತ್ತಾಯಿಸಿ ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರಕ್ಕೆ 2019ರ ನವೆಂಬರ್ ತಿಂಗಳಲ್ಲಿ ಮನವಿ ಮಾಡಿತ್ತು.
ಜಲಶಕ್ತಿ ಸಚಿವಾಲಯವು 2020ರಲ್ಲಿ ಸಂಧಾನ ಸಭೆ ನಡೆಸಿತ್ತು. ಆದರೆ, ರಾಜ್ಯ ಸರ್ಕಾರಗಳು ಒಮ್ಮತಕ್ಕೆ ಬಂದಿರಲಿಲ್ಲ. ಹೊಸದಾಗಿ ಸಂಧಾನ ನಡೆಸುವಂತೆ ಕರ್ನಾಟಕ ಸರ್ಕಾರವು ಕೇಂದ್ರಕ್ಕೆ 2024ರ ಜೂನ್‌ನಲ್ಲಿ ಒತ್ತಾಯಿಸಿತ್ತು.
ಈ ನಡುವೆ, ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ, ಕೇಂದ್ರ ಜಲ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಜಲಶಕ್ತಿ ಸಚಿವಾಲಯವು ಹೊಸ ಸಂಧಾನ ಸಮಿತಿ ರಚಿಸಿತ್ತು. ಈ ಸಮಿತಿಯು ಉಭಯ ರಾಜ್ಯಗಳ ನಡುವೆ ಒಂಬತ್ತು ಸಭೆಗಳನ್ನು ನಡೆಸಿತ್ತು ಹಾಗೂ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.