ADVERTISEMENT

ಮುಂಡಗೋಡ: ದಲೈಲಾಮಾ ಭೇಟಿ

12 ದಿನಗಳ ವಾಸ್ತವ್ಯ l ‘ಲಾಂಗ್ ಲೈಫ್‌’ ಪೂಜೆಯಲ್ಲಿ ಭಾಗಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 20:15 IST
Last Updated 12 ಡಿಸೆಂಬರ್ 2019, 20:15 IST
ಡ್ರೆಪುಂಗ್ ಲಾಚಿ ಬೌದ್ಧ ಮಂದಿರಕ್ಕೆ ಬಂದ ದಲೈಲಾಮಾ ಅವರನ್ನು ಬಿಕ್ಕುಗಳು ಕೈಹಿಡಿದು ಕರೆತಂದರು
ಡ್ರೆಪುಂಗ್ ಲಾಚಿ ಬೌದ್ಧ ಮಂದಿರಕ್ಕೆ ಬಂದ ದಲೈಲಾಮಾ ಅವರನ್ನು ಬಿಕ್ಕುಗಳು ಕೈಹಿಡಿದು ಕರೆತಂದರು   

ಮುಂಡಗೋಡ: ಎರಡು ವರ್ಷಗಳ ನಂತರ, ಟಿಬೆಟನ್‌ ಧರ್ಮಗುರು ದಲೈಲಾಮಾ ಗುರುವಾರ ಇಲ್ಲಿನ ಟಿಬೆಟನ್ ಕ್ಯಾಂಪ್‌ಗೆ ಭೇಟಿ ನೀಡಿದರು.

ಸಹಸ್ರಾರು ಬಿಕ್ಕುಗಳು, ವಿದೇಶಿ ಬೌದ್ಧ ಅನುಯಾಯಿಗಳು,ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶದಿಂದ ಬಂದಿದ್ದ ಟಿಬೆಟನ್‌ರು ಧರ್ಮಗುರುವನ್ನು ಕಂಡು ಧನ್ಯತಾ ಭಾವ ಅನುಭವಿಸಿದರು. ಕ್ಯಾಂಪ್‌ ನಂ.2ರ ಡ್ರೆಪುಂಗ್ ಲಾಚಿ ಬೌದ್ಧ ಮಂದಿರಕ್ಕೆ ದಲೈಲಾಮಾ ಭೇಟಿ ನೀಡಿದಾಗ, ಸಾಂಪ್ರದಾಯಿಕ ವೇಷಭೂಷಣ ತೊಟ್ಟಿದ್ದ ಮಂದಿರದ ಹಿರಿಯ ಬಿಕ್ಕುಗಳು, ಬೌದ್ಧಧರ್ಮದ ಸಂಪ್ರದಾಯದಂತೆ ದಲೈಲಾಮಾರನ್ನು ಸ್ವಾಗತಿಸಿದರು.

ಮಂದಿರದ ಪ್ರವೇಶ ದ್ವಾರದಲ್ಲಿಯೇ ಗಾಲಿಕುರ್ಚಿಯಲ್ಲಿ ಕುಳಿತಿದ್ದ ಹಿರಿಯ ಬಿಕ್ಕುಗಳನ್ನು ಕಂಡ ದಲೈಲಾಮಾ, ಅವರ ಯೋಗಕ್ಷೇಮ ವಿಚಾರಿಸಿದರು. ನಂತರ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಉನ್ನತ ಪೀಠದಲ್ಲಿ ಆಸೀನರಾದರು. ಬಿಕ್ಕುಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಶತಮಾನಗಳಿಂದ ಭಾರತ ಕೊಡುಗೆಯಾಗಿ ನೀಡಿರುವ ಶಾಂತಿ, ಅಹಿಂಸೆ ಹಾಗೂ ಕರುಣೆಯಂತಹ ಮಾನವೀಯ ಮೌಲ್ಯಗಳು ಇಂದು ಹೆಚ್ಚು ಪ್ರಸ್ತುತವಾಗಿವೆ. ವಿಶ್ವಕ್ಕೆ ಅವುಗಳ ಮಹತ್ವ ತಿಳಿಸುವ ಕಾಲ ಕೂಡಿಬಂದಿದೆ. ಪರಂಪರೆ ಹಾಗೂ ಸಂಸ್ಕೃತಿಯು ಮನಸ್ಸು ಉಲ್ಲಸಿತಗೊಳಿಸಲು ನೆರವಾದರೆ, ಆಧುನಿಕ ಶಿಕ್ಷಣವು ಹೊರಗಿನ ಅಭಿವೃದ್ಧಿಗೆ ಪೂರಕವಾಗಿದೆ. ಇವೆರಡೂ ಜೊತೆಯಾಗಿ ಸಾಗಿದಾಗ ಮಾತ್ರ ಉತ್ತಮ ಸಮಾಜಕ್ಕೆ ಅನುಕೂಲ’ ಎಂದರು.

ADVERTISEMENT

12 ದಿನ ಟಿಬೆಟನ್ ಕಾಲೊನಿಯಲ್ಲಿ ವಾಸ್ತವ್ಯ ಮಾಡಲಿರುವ ದಲೈಲಾಮಾ ಅವರು, ರಷಿಯನ್ ನ್ಯೂರೊ ವಿಜ್ಞಾನಿ
ಗಳ ತಂಡದೊಂದಿಗೆ ಚರ್ಚೆ, ಡ್ರೆಪುಂಗ್ ಗೋಮಾಂಗ್ ಕೋರ್ಟ್ ಯಾರ್ಡ್ ಉದ್ಘಾಟನೆ, 8ನೇ ಶತಮಾನದ ಬೌದ್ಧ ಮುಖಂಡ ಜೆ.ಸೊಂಗಖಪಾ ಅವರ ವರ್ಷಾಚರಣೆ ಕಾರ್ಯಕ್ರಮ, ಲಾಂಗ್ ಲೈಫ್ ಪೂಜೆಯಲ್ಲಿ ಭಾಗಿಯಾಗುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.