ADVERTISEMENT

ಬೆತ್ತಲೆ ಮೆರವಣಿಗೆ: ಮತ್ತೆ ನಾಲ್ವರು ವಶಕ್ಕೆ

ಗುಂಡ್ಲುಪೇಟೆಯಲ್ಲಿ ನ್ಯಾಯಾಂಗ ಕಲಾಪಗಳಿಂದ ಹೊರಗುಳಿದ ವಕೀಲರು, ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 18:30 IST
Last Updated 12 ಜೂನ್ 2019, 18:30 IST
ದಲಿತ ಯುವಕನನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ ಪ್ರಕರಣ ಖಂಡಿಸಿ ಮೈಸೂರಿನಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ವತಿಯಿಂದ ‌ಬುಧವಾರ ಪ್ರತಿಭಟನೆ ನಡೆಯಿತು
ದಲಿತ ಯುವಕನನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ ಪ್ರಕರಣ ಖಂಡಿಸಿ ಮೈಸೂರಿನಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ವತಿಯಿಂದ ‌ಬುಧವಾರ ಪ್ರತಿಭಟನೆ ನಡೆಯಿತು   

ಗುಂಡ್ಲುಪೇಟೆ: ತಾಲ್ಲೂಕಿನ ವೀರನಪುರ ಗ್ರಾಮದಲ್ಲಿ ನಡೆದ ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಬುಧವಾರ ಉಳಿದ ನಾಲ್ವರು ಆರೋಪಿಗಳನ್ನೂ ವಶಕ್ಕೆ ಪಡೆದಿದ್ದಾರೆ.

ಶನೇಶ್ವರ ದೇವಾಲಯದ ಅರ್ಚಕ ಶಿವಪ್ಪ ಹಾಗೂ ಪುಟ್ಟಸ್ವಾಮಿ ಅವರನ್ನು ಮಂಗಳವಾರವೇ ಬಂಧಿಸಲಾಗಿತ್ತು. ಉಳಿದ ಆರೋಪಿಗಳಾದ ಬಸವರಾಜು, ಮಾಣಿಕ್ಯ, ಸತೀಶ್‌ ಮತ್ತು ಚನ್ನಕೇಶವಮೂರ್ತಿ ತಲೆಮರೆಸಿಕೊಂಡಿದ್ದರು.

‘ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ ನಾಲ್ವರು ಬೆಂಗಳೂರು, ಎಚ್‌.ಡಿ.ಕೋಟೆಯಲ್ಲಿ ತಲೆಮರೆಸಿಕೊಂಡಿದ್ದರು. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಶೀಘ್ರದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಮರಾಜನಗರ ಉಪವಿಭಾಗ ಡಿವೈಎಸ್‌ಪಿ ಸಿ.ಟಿ.ಜಯಕುಮಾರ್‌ ನೇತೃತ್ವದ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ.

ದಲಿತ ಎಂದು ಗೊತ್ತಿರಲಿಲ್ಲ?: ಈ ಮಧ್ಯೆ, ಹಲ್ಲೆಗೊಳಗಾದ ಪ್ರತಾಪ್‌ ಅವರು ದಲಿತ ಸಮುದಾಯಕ್ಕೆ ಸೇರಿದವರು ಎಂಬುದು ಘಟನೆಯ ಸಂದರ್ಭದಲ್ಲಿ ಹಲ್ಲೆ ನಡೆಸಿದವರಿಗೆ ಗೊತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ. ಈ ಪ್ರಕರಣದಲ್ಲಿ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರೂ ಭಾಗಿಯಾಗಿದ್ದಾರೆ ಎನ್ನಲಾಗಿದೆ.

‘ದೇವಸ್ಥಾನದ ವಿಗ್ರಹಗಳನ್ನು ನಾಶ ಮಾಡಿರುವುದಕ್ಕೆ ಆಕ್ರೋಶಗೊಂಡು ಸ್ಥಳೀಯರು ಪ್ರತಾಪ್‌ಗೆ ಹೊಡೆದಿದ್ದಾರೆ. ಮಾನಸಿಕ ರೋಗದಿಂದ ಬಳಲುತ್ತಿರುವ ಆ ಯುವಕ ಕಬ್ಬೆಕಟ್ಟೆ ದೇವಸ್ಥಾನಕ್ಕೆ ಬರುವ ಮೊದಲು ರಾಘವಾಪುರದಲ್ಲಿರುವ ಮಹದೇಶ್ವರ ದೇವಾಲಯದ ಬಳಿ ಇರುವ ಮನೆಯೊಂದರ ಕಾಂಪೌಂಡ್‌ ಹಾರಿ ಒಳಕ್ಕೆ ಹೋಗಿದ್ದಾರೆ. ಮನೆಯವರು ಬಾಗಿಲು ತೆಗೆದು ನೋಡಿದಾಗ ಇದೇ ವ್ಯಕ್ತಿ ಮನೆ ಎದುರು ನಿಂತಿದ್ದರು. ಆಗಲೇ ಅವರ ಮೈಮೇಲೆ ಬಟ್ಟೆ ಇರಲಿಲ್ಲ, ಏನೇನೋ ಮಾತನಾಡುತ್ತಿದ್ದರು ಎಂದು ಆ ಮನೆಯವರು ತಿಳಿಸಿದ್ದಾರೆ’ ಎಂದು ಪೊಲೀಸ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

***

ತಲೆಮರೆಸಿಕೊಂಡಿದ್ದ ಆರೋಪಿಗಳನ್ನೂ ಬುಧವಾರ ವಶಕ್ಕೆ ಪಡೆದಿದ್ದೇವೆ. ಸಮಗ್ರವಾಗಿ ತನಿಖೆ ನಡೆಸಲಾಗುತ್ತಿದೆ.

- ಎಚ್‌.ಡಿ.ಆನಂದ ಕುಮಾರ್‌, ಜಿಲ್ಲಾ ‍ಪೊಲೀಸ್‌ ವರಿಷ್ಠಾಧಿಕಾರಿ

ದಲಿತ, ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

ಘಟನೆ ಖಂಡಿಸಿ ಕೊಳ್ಳೇಗಾಲದಲ್ಲಿ ಅಂಬೇಡ್ಕರ್‌ ಸ್ಮಾರಕ ಸಂಘದ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಬುಧವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು

ದಲಿತ ಯುವಕನನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣ ಖಂಡಿಸಿ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಮೈಸೂರು, ಚಾಮರಾಜನಗರ, ಹಾಸನ ಹಾಗೂ ಮಂಡ್ಯದಲ್ಲಿ ಬುಧವಾರ ಪ್ರತಿಭಟನೆ ನಡೆಸಿದವು.

ಘಟನೆಗೆ ಚಾಮರಾಜನಗರ ಜಿಲ್ಲೆಯಾದ್ಯಂತ ಖಂಡನೆ ವ್ಯಕ್ತವಾಗಿದೆ.

ಕೊಳ್ಳೇಗಾಲದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಮಾರಕ ಸಂಘದ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು. ಪ್ರತಿಭಟನಾಕಾರರು, ಗುಂಡ್ಲುಪೇಟೆ ಶಾಸಕ ನಿರಂಜನಕುಮಾರ್‌ ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ತುಸು ಹೊತ್ತು ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌ 209) ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಗುಂಡ್ಲುಪೇಟೆಯಲ್ಲಿ ವಕೀಲರು ನ್ಯಾಯಾಲಯ ಕಲಾಪದಿಂದ ಹೊರಗುಳಿದರು.

ಮೈಸೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿ, ಪುರಭವನ, ತಾಲ್ಲೂಕು ಕಚೇರಿ ಹಾಗೂ ಮಾನಸ ಗಂಗೋತ್ರಿಯಲ್ಲಿ ಸೇರಿದ ನೂರಾರು ಪ್ರತಿಭಟನಾಕಾರರು, ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು.

ಚೋರನಹಳ್ಳಿ ಶಿವಣ್ಣ ನೇತೃತ್ವದ ದಸಂಸ ಜಿಲ್ಲಾ ಘಟಕದ ವತಿಯಿಂದ ಪುರಭವನ ಎದುರು ಪ್ರತಿಭಟನೆ ನಡೆಯಿತು.

ಹಾಸನದ ಚನ್ನರಾಯಪಟ್ಟಣ, ಮಂಡ್ಯದ ಪಾಂಡವಪುರ ಹಾಗೂ ಮಳವಳ್ಳಿಯಲ್ಲಿ ದಲಿತ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು.

***

ನೈತಿಕ ಹೊಣೆ ಹೊತ್ತು ಸಂಸದ ವಿ.ಶ್ರೀನಿವಾಸ ಪ್ರಸಾದ್, ಶಾಸಕ ನಿರಂಜನ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ರಾಜೀನಾಮೆ ನೀಡಬೇಕು.

- ಪ್ರೊ.ಬಿ.ಪಿ.ಮಹೇಶಚಂದ್ರ ಗುರು, ಪ್ರಗತಿಪರ ಚಿಂತಕ

ದಲಿತ ಯುವಕನ ಬೆತ್ತಲೆ ಮೆರವಣಿಗೆ ಮಾಡಿಸಿರುವುದು ಖಂಡನೀಯ. ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು ಖಚಿತ

- ವಿ.ಶ್ರೀನಿವಾಸ ಪ್ರಸಾದ್, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.