ADVERTISEMENT

ಡಿಕೆಶಿ ವಿರುದ್ಧ ತಂತ್ರ: ಸಿಎಂ, ಕೆಪಿಸಿಸಿ ಅಧ್ಯಕ್ಷಗಾದಿ ಮೇಲೆ ದಲಿತ ಸಚಿವರ ಕಣ್ಣು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2025, 21:14 IST
Last Updated 14 ಫೆಬ್ರುವರಿ 2025, 21:14 IST
<div class="paragraphs"><p>ಡಿಕೆಶಿ </p></div>

ಡಿಕೆಶಿ

   

ನವದೆಹಲಿ: ಮುಖ್ಯಮಂತ್ರಿ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ವೇದಿಕೆ ಸಜ್ಜುಗೊಳಿಸಲು ಮತ್ತೊಮ್ಮೆ ಪ್ರಯತ್ನ ಅರಂಭಿಸಿರುವ ಕಾಂಗ್ರೆಸ್‌ನ ದಲಿತ ಸಮುದಾಯದ ಸಚಿವರು ‘ಶೋಷಿತರ ಸಮಾವೇಶ’ದ ಹೆಸರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಅಣಿಯಾಗಿದ್ದಾರೆ.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್‌ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಸಮಾವೇಶದ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ.

ADVERTISEMENT

ಪಕ್ಷದ ವೇದಿಕೆಯಲ್ಲೇ ಸಮಾವೇಶ ನಡೆಸುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಹಣಿಯಲು ತಂತ್ರ ಹೆಣೆದಿದ್ದಾರೆ.

ಮುಂದಿನ ವಾರ ನವದೆಹಲಿಗೆ ಬರಲಿರುವ ದಲಿತ ಸಚಿವರ ಕೂಟದ ‘ಸಂಚಾಲಕ’ರೂ ಆಗಿರುವ ಗೃಹ ಸಚಿವ ಜಿ.ಪರಮೇಶ್ವರ ಅವರು ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ.   

‘ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು. ಒಂದು ವೇಳೆ ಅವರು ಅಧಿಕಾರ ಹಸ್ತಾಂತರಿಸುವ ಪ್ರಮೇಯ ಎದುರಾದರೆ ಅವರ ಸ್ಥಾನಕ್ಕೆ ದಲಿತ ನಾಯಕರನ್ನು ಪರಿಗಣಿಸಬೇಕು’ ಎಂದು ಸಚಿವರು ಹೈಕಮಾಂಡ್‌ ಮುಂದೆ ವಾದಿಸಿದ್ದಾರೆ. 

ಲೋಕಸಭೆ ಚುನಾವಣೆಯವರೆಗೆ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು 2023ರಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ‍ಪಕ್ಷದ ವರಿಷ್ಠರು ಹೇಳಿದ್ದರು. ಅದನ್ನು ಹೈಕಮಾಂಡ್‌ನ ಗಮನಕ್ಕೆ ತಂದಿರುವ ಸಚಿವರು, ‘ಹಲವು ರಾಜ್ಯಗಳ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆ ಆರಂಭವಾಗಿದೆ. ಅದೇ ಸಂದರ್ಭದಲ್ಲಿ, ಕೆಪಿಸಿಸಿ ಅಧ್ಯಕ್ಷರನ್ನೂ ಬದಲಿಸಬೇಕು. ಆ ಸ್ಥಾನವನ್ನು ದಲಿತ ನಾಯಕರಿಗೆ ನೀಡಬೇಕು’ ಎಂದು ಪಟ್ಟು ಹಾಕಿದ್ದಾರೆ. ಜಿಲ್ಲಾ–ತಾಲ್ಲೂಕು ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆ ತನಕ ಕೆಪಿಸಿಸಿ ಅಧ್ಯಕ್ಷ ಸ್ಥಾನ
ದಲ್ಲಿ ಮುಂದುವರಿಯಬೇಕು ಎಂಬುದು ಡಿ.ಕೆ. ಶಿವಕುಮಾರ್ ಅವರ ಅಭಿಲಾಷೆ. ಈ ಚುನಾವಣೆಗಳಲ್ಲಿ ಪಕ್ಷಕ್ಕೆ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಂಡು ಬಂದು ಸಹೋದರ ಡಿ.ಕೆ. ಸುರೇಶ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬುದು ಅವರ ಆಲೋಚನೆ. 

ಇದರ ಸುಳಿವು ಪಡೆದಿರುವ ಸಿದ್ದರಾಮಯ್ಯ ಬೆಂಬಲಿಗ ಸಚಿವರು, ಶಿವಕುಮಾರ್ ಅವರನ್ನು ಈಗಲೇ ಕೆಳಗಿಸಲು ತೀವ್ರ ‍ಪ್ರಯತ್ನ ಆರಂಭಿಸಿದ್ದಾರೆ.ಸಚಿವ ಸತೀಶ ಜಾರಕಿಹೊಳಿ ಅಥವಾ ಕೆ.ಎನ್.ರಾಜಣ್ಣ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಬೇಡಿಕೆ ಮುಂದಿಟ್ಟಿದ್ದಾರೆ. ಸಚಿವ ಸ್ಥಾನ ತ್ಯಜಿಸಿದರೆ ಬೆಳಗಾವಿ ಹಿಡಿತ ಕೈತಪ್ಪಲಿದೆ ಹಾಗೂ 2028ರಲ್ಲಿ ಮುಖ್ಯಮಂತ್ರಿಯಾಗುವ ಕನಸು ಕಮರಲಿದೆ ಎಂಬ ಆತಂಕದಲ್ಲಿರವ ಸತೀಶ ಅವರು, ಸಚಿವ ಸ್ಥಾನದ ಜತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಸಿದ್ಧರಾಗಿದ್ದಾರೆ. ‘ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ಸಚಿವ ಸ್ಥಾನ ತ್ಯಜಿಸುತ್ತೇನೆ’ ಎಂದು ರಾಜಣ್ಣ ಈಗಾಗಲೇ ಹೇಳಿಕೆ ನೀಡಿದ್ದಾರೆ. 

ಶೋಷಿತರ ಸಮಾವೇಶ ಸ್ವರೂಪ

ಯಾವಾಗ: ಏಪ್ರಿಲ್ ಅಥವಾ ಮೇ

ಎಲ್ಲಿ: ಚಿತ್ರದುರ್ಗ ಅಥವಾ ದಾವಣಗೆರೆ ಅಥವಾ ಹುಬ್ಬಳ್ಳಿ. ಚಿತ್ರದುರ್ಗಕ್ಕೆ ಆದ್ಯತೆ

ಎಷ್ಟು ಮಂದಿ: 4 ಲಕ್ಷದಿಂದ 5 ಲಕ್ಷ ಮಂದಿ ಸೇರಿಸಲು ತಯಾರಿ

ಆಹ್ವಾನ ಯಾರಿಗೆ?: ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್‌, ರಣದೀಪ್ ಸಿಂಗ್ ಸುರ್ಜೇವಾಲಾ

ಪರ್ಯಾಯ ಏನು?: ಶೋಷಿತರ ಸಮಾವೇಶ ನಡೆಸಲು ಹೈಕಮಾಂಡ್‌ ಒಪ್ಪಿಗೆ ನೀಡದಿದ್ದರೆ ಏನು ಮಾಡಬೇಕು ಎಂಬ ಪರ್ಯಾಯ ಯೋಜನೆಯನ್ನು ದಲಿತ ಸಚಿವರು ರೂ‍ಪಿಸಿದ್ದಾರೆ.

*ಸಮುದಾಯಗಳ ಸ್ವಾಮೀಜಿಗಳ ನೇತೃತ್ವದಲ್ಲಿ ಸಮಾವೇಶ ಸಂಘಟಿಸಿ ಸಂದೇಶ ರವಾನಿಸುವುದು

* ಶೋಷಿತ ಸಮುದಾಯದ ಎಲ್ಲ ಪ್ರಮುಖ ಸ್ವಾಮೀಜಿಗಳನ್ನು ಒಂದೇ ವೇದಿಕೆಗೆ ತರುವುದು 

* ಹೈಕಮಾಂಡ್‌ ಸಮ್ಮತಿ ಮೇರೆಗೆ ಸಮಾವೇಶದಲ್ಲಿ ಭಾಗಿಯಾಗಿ ಭವಿಷ್ಯದ ರಾಜಕೀಯ ಆದ್ಯತೆ ಬಗ್ಗೆ ಒತ್ತಿ ಹೇಳುವುದು

* ಪಕ್ಷದಲ್ಲಿ ದಲಿತ ನಾಯಕರಿಗೆ ಆದ್ಯತೆ ನೀಡುವಂತೆ ಸ್ವಾಮೀಜಿಗಳ ಮೂಲಕ ಒತ್ತಡ ಹೇರುವುದು

ಸಿದ್ದರಾಮಯ್ಯ ಅವರು ಸುದೀರ್ಘ ಅವಧಿಗೆ ಮುಖ್ಯಮಂತ್ರಿ ಯಾಗಿದ್ದು ದಾಖಲೆ ಮಾಡುವುದಾದರೆ ಮಾಡಲಿ. ಹಾಗಾದರೆ ಒಳ್ಳೆಯದೇ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸದ್ಯ ಯಾವುದೇ ಚರ್ಚೆಯಾಗಿಲ್ಲ. ಯಥಾಸ್ಥಿತಿ ಇದೆ
ಸತೀಶ ಜಾರಕಿಹೊಳಿ, ಲೋಕೋಪಯೋಗಿ ಸಚಿವ
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಮುಂದುವರಿಯುವ ಬಗ್ಗೆ ಮಾಧ್ಯಮದವರಿಗೆ ಅನುಮಾನ ಏಕೆ ಬರುತ್ತಿದೆ? ಅಧಿಕಾರ ಇರುವುದು ದಾಖಲೆ ಸರಿಗಟ್ಟಲು ಅಲ್ಲ. ಜನರ ಸೇವೆ ಮಾಡುವುದಕ್ಕೆ, ಅದನ್ನು ಅವರು ಮುಂದುವರಿಸಲಿದ್ದಾರೆ
ಡಾ.ಎಚ್‌.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ
ಪಕ್ಷದಲ್ಲಿ ಎಲ್ಲರ ಅಭಿಪ್ರಾಯ ಕೇಳಿ ಸಮಾವೇಶ ಮಾಡಲು ಸಾಧ್ಯವಿಲ್ಲ. ಕೆಪಿಸಿಸಿ ಅಧ್ಯಕ್ಷರು ದೊಡ್ಡವರಾ? ಅಥವಾ ಎಐಸಿಸಿ ಅಧ್ಯಕ್ಷರು ದೊಡ್ಡವರಾ? ಸಮಾವೇಶದ ಬಗ್ಗೆ ಎಐಸಿಸಿ ಅಧ್ಯಕ್ಷರ ಗಮನಕ್ಕೆ ತಂದಿದ್ದೇವೆ. ಈ ವಿಷಯದ ಕುರಿತು ಕೆಪಿಸಿಸಿ ಅಧ್ಯಕ್ಷರೊಂದಿಗೆ ಸಮಾಲೋಚಿಸಿಲ್ಲ. ಸಮಾವೇಶಕ್ಕೆ ಡಿ.ಕೆ.ಶಿವಕುಮಾರ್‌ ಬರಲಿದ್ದಾರೆ
ಕೆ.ಎನ್‌.ರಾಜಣ್ಣ, ಸಹಕಾರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.