ADVERTISEMENT

ಬಿಸಿಲು ಇಲ್ಲದ ಜಾಗದಲ್ಲಿ ವಾಕಿಂಗ್‌: ದರ್ಶನ್ ಅಳಲು

ಪ್ರಕರಣದಿಂದ ಬಿಡುಗಡೆ ಕೋರಿ ಅರ್ಜಿ, ಅ.9ಕ್ಕೆ ವಿಚಾರಣೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 0:30 IST
Last Updated 26 ಸೆಪ್ಟೆಂಬರ್ 2025, 0:30 IST
ದರ್ಶನ್‌ 
ದರ್ಶನ್‌    

ಬೆಂಗಳೂರು: ‘ನ್ಯಾಯಾಲಯ ಸೂಚನೆ ನೀಡಿದ್ದರೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳು ಯಾವುದೇ ಸೌಲಭ್ಯ ನೀಡಿಲ್ಲ. ಕಿರಿದಾದ ಜಾಗದಲ್ಲಿ ವಾಕಿಂಗ್‌ ಮಾಡಲು ಬಿಡುತ್ತಾರೆ. ಅಲ್ಲಿ ಬಿಸಿಲು ಸಹ ಬೀಳುವುದಿಲ್ಲ...’

–ಹೀಗೆ ನ್ಯಾಯಾಧೀಶರ ಎದುರು ಮತ್ತೆ ಅಲವತ್ತುಕೊಂಡವರು ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್‌.

57ನೇ ಸಿಸಿಎಚ್‌ ನ್ಯಾಯಾಲಯದಲ್ಲಿ ಗುರುವಾರ ನಡೆದ ವಿಚಾರಣೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ದರ್ಶನ್ ಹಾಗೂ ಪವಿತ್ರಾಗೌಡ ಅವರು ಹಾಜರಾಗಿದ್ದರು. ಉಳಿದ ಐವರು ಆರೋಪಿಗಳು ಖುದ್ದು ನ್ಯಾಯಾಲಯದಲ್ಲಿ ಹಾಜರಿದ್ದರು.

ADVERTISEMENT

‘ಜೈಲಿನಲ್ಲಿ ಕನಿಷ್ಠ ಮೂಲ ಸೌಲಭ್ಯಗಳನ್ನೂ ನೀಡುತ್ತಿಲ್ಲ. ಬ್ಯಾರಕ್‌ನಿಂದ ಹೊರಗೆ ಬರುವುದಕ್ಕೂ ಬಿಡುತ್ತಿಲ್ಲ. ಮೈಮೇಲೆ ಬಿಸಿಲು ಬಿದ್ದು ಹಲವು ದಿನಗಳೇ ಆಗಿವೆ. ಕೈಯಲ್ಲಿ ಫಂಗಸ್‌ ಕಾಣಿಸಿಕೊಂಡಿದೆ (ಚರ್ಮದ ಅಲರ್ಜಿ). ಬೇರೆ ಯಾರಿಗೂ ಬೇಡ; ನನಗೆ ಮಾತ್ರ ವಿಷ ನೀಡಲಿ. ಈ ಸಂಬಂಧ ಕೋರ್ಟ್‌ ಆದೇಶ ನೀಡಲಿ...’ ಎಂದು ಕಳೆದ ವಿಚಾರಣೆ ವೇಳೆಯೂ ದರ್ಶನ್ ಅವರು ಜೈಲಿನ ಸಿಬ್ಬಂದಿಯ ವಿರುದ್ಧ ಆರೋಪ ಮಾಡಿದ್ದರು. ಈಗ ಮತ್ತೊಮ್ಮೆ ನ್ಯಾಯಾಧೀಶರ ಎದುರು ಕಣ್ಣೀರು ಹಾಕಿದ್ದು ನ್ಯಾಯಾಲಯವು ಆದೇಶ ಮಾಡಿದ್ದರೂ ಪಾಲನೆ ಆಗುತ್ತಿಲ್ಲ ಎಂದು ಆರೋಪಿಸಿದರು. 

‘ಇನ್ನೂ ಕ್ವಾರಂಟೈನ್‌ ಸೆಲ್‌ನಲ್ಲೇ ಇರಿಸಿದ್ದಾರೆ. ಏನೇ ಕೇಳಿದರೂ ನ್ಯಾಯಾಲಯದ ಆದೇಶ ಕೊಡಿ ಎನ್ನುತ್ತಾರೆ. ಹಿಂದೆ ಹಾಸಿಗೆ ದಿಂಬು ಕೊಡುವಂತೆ ನ್ಯಾಯಾಲಯ ಸೂಚನೆ ನೀಡಿತ್ತು. ಆ ಸೂಚನೆಯನ್ನೂ ಪಾಲಿಸುತ್ತಿಲ್ಲ’ ಎಂದು ದರ್ಶನ್‌ ಅವರು ನ್ಯಾಯಾಧೀಶರ ಗಮನಕ್ಕೆ ತಂದರು.

ದರ್ಶನ್ ಪರ ವಕೀಲ ಸುನಿಲ್ ಅವರು, ‘ದರ್ಶನ್ ಅವರಿಗೆ ವಾಕಿಂಗ್ ಮಾಡಲು ಜೈಲಿನ ಆವರಣದೊಳಗೆ ಅವಕಾಶ ನೀಡಬೇಕೆಂದು ಕೋರಿದ್ದೆವು. ಅದಕ್ಕೆ ನ್ಯಾಯಾಲಯವೂ ಸಮ್ಮತಿಸಿತ್ತು. ಕಿರಿದಾದ ಜಾಗದಲ್ಲಿ ವಾಕಿಂಗ್‌ಗೆ ಅವಕಾಶ ನೀಡಲಾಗಿದೆ. ಅಲ್ಲಿ ಸೂರ್ಯನ ಬೆಳಕು ಬೀಳುತ್ತಿಲ್ಲ. ಜೈಲಿನ ಕೈ‍ಪಿಡಿಯಂತೆಯೇ ಸೌಲಭ್ಯ ಕಲ್ಪಿಸಿ ಎಂದರೆ, ಆದೇಶ ನೀಡಿ ಎಂದು 20 ಬಾರಿ ಕೇಳುತ್ತಾರೆ’ ಎಂದು ಆರೋಪಿಸಿದರು. 

‘ಕೊಲೆ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಈ ಪ್ರಕರಣದಿಂದ ನನ್ನನ್ನು ಕೈಬಿಡಬೇಕು’ ಎಂದು ಕೋರಿ ಗುರುವಾರ ನಡೆದ ವಿಚಾರಣೆ ವೇಳೆ ದರ್ಶನ್‌ ಅವರು ಅರ್ಜಿ ಸಲ್ಲಿಸಿದರು.

‘ಮುಂದಿನ ವಿಚಾರಣೆ ವೇಳೆ ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕರು ಖುದ್ದು ಹಾಜರಿರಬೇಕು’ ಎಂದು ಸೂಚಿಸಿದ ನ್ಯಾಯಾಧೀಶರು, ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್‌ 9ಕ್ಕೆ ಮುಂದೂಡಿದರು.

ಪವಿತ್ರಾಗೌಡ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.