ADVERTISEMENT

ಶಾಲೆಗಳಿಗೆ 30ರವರೆಗೆ ಮಧ್ಯಂತರ ರಜೆ, ‘ವಿದ್ಯಾಗಮ’ ಕಾರ್ಯಕ್ರಮ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 20:27 IST
Last Updated 11 ಅಕ್ಟೋಬರ್ 2020, 20:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಅ.12 ರಿಂದ 30ರವರೆಗೆ ರಾಜ್ಯದಶಾಲೆಗಳಿಗೆ ಮಧ್ಯಂತರ ರಜೆ ಘೋಷಿಸಿರುವ ಸರ್ಕಾರ, ‘ವಿದ್ಯಾಗಮ’ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ ಭಾನುವಾರ ಅದೇಶ ಹೊರಡಿಸಿದೆ.

‘ರಾಜ್ಯದಲ್ಲಿ ವ್ಯಾಪಕವಾಗಿ ಕೊರೊನಾಸೋಂಕು ಹರಡುತ್ತಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೂ ಸೋಂಕು ತಗುಲಿರುವ ಪ್ರಕರಣಗಳು ವರದಿಯಾಗಿರುವುದರಿಂದ ಸದ್ಯಕ್ಕೆ ಶಾಲೆ ಪ್ರಾರಂಭಿಸದಿರಲು ನಿರ್ಧರಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದು, ಶಿಕ್ಷಕರು–ವಿದ್ಯಾರ್ಥಿಗಳಿಗೆ ದಸರಾ ಶುಭಾಶಯ ಕೋರಿದ್ದಾರೆ.

ಮಧ್ಯಂತರ ರಜೆ ರದ್ದುಗೊಳಿಸಲಾಗುತ್ತದೆ ಎಂದು ಈ ತಿಂಗಳ ಮೊದಲ ವಾರದಲ್ಲಿ ಸರ್ಕಾರ ಹೇಳಿತ್ತು. ಅಲ್ಲದೆ, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿದ್ಯಾಗಮ, ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿ ಮುಂದುವರಿಯುತ್ತದೆ ಎಂದೂ ತಿಳಿಸಿತ್ತು.

ADVERTISEMENT

ಮಧ್ಯಂತರ ರಜೆ ರದ್ದುಗೊಳಿಸಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ‘ಕೊರೊನಾ ಸೋಂಕಿನ ಕಾರಣಕ್ಕೆ ಮಕ್ಕಳು ಶಾಲೆಗೆ ಬಾರದಿದ್ದರೂ, ಶಿಕ್ಷಕರನ್ನು ಅನ್ಯ ಸೇವೆಗೆ ಬಳಸಿಕೊಳ್ಳಲಾಗುತ್ತಿದೆ. ಆದಾಗ್ಯೂ, ಮಧ್ಯಂತರ ರಜೆ ರದ್ದುಪಡಿಸಿ ಸರ್ಕಾರ ಯಾವ ಪುರುಷಾರ್ಥ ಸಾಧನೆಗೆ ಹೊರಟಿದೆ? ಎತ್ತಿಗೆ ಜ್ವರ ಬಂದರೆ ಕೋಣಕ್ಕೆ ಬರೆ ಎಂಬಂತೆ ಸರ್ಕಾರ ವರ್ತಿಸುತ್ತಿದೆ’ ಎಂದು ಭಾನುವಾರ ಸರಣಿ ಟ್ವೀಟ್‌ ಮಾಡಿದ್ದರು.

ರಾಜ್ಯದ ಎಲ್ಲ ಪ್ರಾಥಮಿಕ–ಪ್ರೌಢಶಾಲೆಗಳಿಗೆ ಈ ರಜೆ ಅನ್ವಯಿಸುತ್ತದೆ. ಇದನ್ನೇ ದಸರಾ ರಜೆ ಎಂದು ಪರಿಗಣಿಸಬೇಕು ಎಂದು ಶಿಕ್ಷಣ ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.