ಮೈಸೂರು: ‘ದಸರಾ ಉದ್ಘಾಟಕರು ನಮ್ಮ ಸಂಪ್ರದಾಯ ಅರಿತು, ಅದಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಲಿ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಇಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನಂಬಿಕೆಗೆ, ಭಕ್ತಿಗೆ ಹಾಗೂ ಇತಿಹಾಸಕ್ಕೆ ಮತ್ತೊಂದು ಹೆಸರೇ ಚಾಮುಂಡಿ ಬೆಟ್ಟ. ಸರ್ಕಾರವು ಉದ್ಘಾಟಕರಿಗೆ ತಾಯಿ ಚಾಮುಂಡಿ ಇತಿಹಾಸ, ಉತ್ಸವ, ಆರಾಧನೆ, ಸಂಪ್ರದಾಯವನ್ನು ಮೊದಲು ತಿಳಿಸಲಿ. ಈಗ ಉದ್ಘಾಟಕರಾಗಿ ಆಯ್ಕೆಯಾಗಿರುವವರು, ಈ ಸ್ಥಾನಕ್ಕೆ ಅರ್ಹರೋ ಅಥವಾ ಇಲ್ಲವೋ ಎಂಬ ಚರ್ಚೆ ಮಾಡುವುದಿಲ್ಲ’ ಎಂದರು.
‘ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪದೇ ಪದೇ ಎಡವಟ್ಟು ಮಾಡುತ್ತಿದೆ. ಧಾರ್ಮಿಕ ಕೆಲಸದ ವಿಚಾರದಲ್ಲಿ ಏನೇ ಮಾಡಿದರೂ ನಡೆಯುತ್ತದೆ ಎಂದು ಭಾವಿಸಬಾರದು. ಉದ್ಘಾಟಕರು, ಸರ್ಕಾರಕ್ಕೆ ಚಾಮುಂಡಿ ಬೆಟ್ಟದ ಶಿಷ್ಟಾಚಾರ, ಸಂಪ್ರದಾಯ ಪಾಲಿಸುವ ಬುದ್ಧಿಯನ್ನು ತಾಯಿ ಚಾಮುಂಡೇಶ್ವರಿ ಕೊಡಲಿ. ಸಂಪ್ರದಾಯ ಪಾಲನೆಯಾದರೆ ಎಲ್ಲರಿಗೂ ಶೋಭೆ’ ಎಂದು ಹೇಳಿದರು.
‘ಸರ್ಕಾರ ಯಾರನ್ನೋ ತೃಪ್ತಿಪಡಿಸಲು ಕೆಲಸ ಮಾಡುವುದು ಸರಿಯಲ್ಲ. ಚಾಮುಂಡಿ ತಾಯಿಯ ಮನಸ್ಸು ಗೆಲ್ಲುವ ಕೆಲಸ ಮಾಡಿದರೆ ದೇಶ ಹಾಗೂ ರಾಜ್ಯಕ್ಕೆ ಒಳ್ಳೆಯದಾಗುತ್ತದೆ’ ಎಂದರು.
ಸಂತ್ರಸ್ತರಿಗೆ ಸ್ಪಂದಿಸಲಿ
‘ಪ್ರಕೃತಿ ವಿಕೋಪದಿಂದ ದಕ್ಷಿಣ ಹಾಗೂ ಉತ್ತರ ಭಾರತ ತಲ್ಲಣಗೊಂಡಿದೆ. ಪ್ರಕೃತಿಯು ನಮಗೊಂದು ಸಂದೇಶವನ್ನು ಕೊಟ್ಟಿದೆ. ಆದರೆ, ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಅತಿವೃಷ್ಟಿ, ಪ್ರವಾಹದಿಂದ ಆಗಿರುವ ಹಾನಿಗೆ ಪರಿಹಾರ ಕಲ್ಪಿಸಲು ರಾಜ್ಯ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಂಬಂಧಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಪರಿಶೀಲಿಸಿಲ್ಲ. ಉತ್ತರ ಭಾರತದಲ್ಲಿ ಅಲ್ಲಿನ ಸರ್ಕಾರಗಳು ತಕ್ಷಣ ಸ್ಪಂದಿಸಿ ಕೆಲಸ ಮಾಡುತ್ತಿವೆ. ಆದರೆ, ನಮ್ಮಲ್ಲಿ ಅದು ಕಾಣುತ್ತಿಲ್ಲ. ಮುಖ್ಯಮಂತ್ರಿಯು ರಾಜಕಾರಣ ಬಿಟ್ಟು ಅಭಿವೃದ್ಧಿ ಕೆಲಸ ಮಾಡಲಿ. ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ಕೆಲಸ ಮಾಡುವಂತೆ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚನೆ ಕೊಡಲಿ’ ಎಂದು ಒತ್ತಾಯಿಸಿದರು.
‘ಧರ್ಮಸ್ಥಳ ಪ್ರಕರಣದಲ್ಲಿ ರಾಜ್ಯ ಸರ್ಕಾರ ಎಡಪಂಥೀಯರ ಕುತಂತ್ರಗಳಿಗೆ ಕಿವಿಕೊಡಬಾರದು. ಸಾವಿರ ಬಾರಿ ಹೇಳಿದರೂ ಸುಳ್ಳು ಸುಳ್ಳೇ, ಅದು ಸತ್ಯವಾಗುವುದಿಲ್ಲ ಎನ್ನುವುದು ಧರ್ಮಸ್ಥಳ ವಿಚಾರದಲ್ಲಿ ಸಾಬೀತಾಗಿದೆ. ಬಾಲಂಗೋಂಚಿಗಳು, ಎಡಪಂಥೀಯರ ಮಾತಿಗೆ ಸರ್ಕಾರ ಇನ್ನಾದರೂ ಬಲಿಯಾಗದಿರಲಿ. ತಪ್ಪನ್ನು ಈಗಲಾದರೂ ಅರಿತುಕೊಳ್ಳಲಿ’ ಎಂದು ಹೇಳಿದರು.
ಇದಕ್ಕೂ ಮುನ್ನ ಸಚಿವರು, ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ತುಮಕೂರಲ್ಲಿ ಸ್ಪರ್ಧಿಸಲ್ಲ...
‘ಪಕ್ಷದ ವರಿಷ್ಠರು ದಿಢೀರನೆ ನನ್ನನ್ನು ತುಮಕೂರು ಕ್ಷೇತ್ರಕ್ಕೆ ಕಳುಹಿಸಿಕೊಟ್ಟರು. ಅಲ್ಲಿ 50 ವರ್ಷಗಳಿಂದ ಆಗಬೇಕಾಗಿದ್ದ ಕೆಲಸಗಳನ್ನೆಲ್ಲಾ ಮಾಡುವುದಕ್ಕೆ ಕೇವಲ ಒಂದು ವರ್ಷದಲ್ಲಿ ಚಾಲನೆ ಕೊಟ್ಟಿದ್ದೇನೆ. ಅಲ್ಲಿ ಸಾವಿರಾರು ಕೋಟಿ ರೂಪಾಯಿ ಮೊತ್ತದಲ್ಲಿ 23ಕ್ಕೂ ಹೆಚ್ಚು ಕೆಳಸೇತುವೆ ಹಾಗೂ ಮೇಲ್ಸೇತುವೆ ಕಾಮಗಾರಿಗಳು ನಡೆಯುತ್ತಿವೆ. ರಾಯದುರ್ಗ–ತುಮಕೂರು, ತುಮಕೂರು–ದಾವಣಗೆರೆ ಮಾರ್ಗದ ನಿರ್ಮಾಣ ಕಾರ್ಯ ಒಂದು ಹಂತಕ್ಕೆ ಬಂದಿದೆ. ತುಮಕೂರಿಗೆ ಬೈಪಾಸ್ ಕೂಡ ಆಗುತ್ತಿದ್ದು, ಕೆಲಸವೂ ನಡೆದಿದೆ’ ಎಂದು ಹೇಳಿದರು.
‘ಶಿರಾದಿಂದ–ಬಡುವನಹಳ್ಳಿ–ಬೈರನಹಳ್ಳಿ– ಚಿಕ್ಕಬಳ್ಳಾಪುರ ಮಾರ್ಗವಾಗಿ ತುಮಕೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ರಾಷ್ಟ್ರೀಯ ಹೆದ್ದಾರಿ ಸೃಷ್ಟಿಸಲು ಕೆಲಸ ಆರಂಭಿಸಿದ್ದೇನೆ. ಐದು ವರ್ಷಗಳಲ್ಲಿ ಎಲ್ಲವನ್ನೂ ಪೂರೈಸುವುದರಿಂದ, ಮುಂದಿನ ಚುನಾವಣೆಯಲ್ಲಿ ನಾನು ಅಲ್ಲಿ ಸ್ಪರ್ಧಿಸುವುದಿಲ್ಲ. ಮತ್ತೆಲ್ಲಾದರೂ ಹೋಗೋಣ ಎಂಬ ಚಿಂತನೆ ನಡೆಸಿದ್ದೇನೆ. ಹಾಸನ–ತಿಪಟೂರು–ಚಿಕ್ಕನಾಯಕನಹಳ್ಳಿ ಮಾರ್ಗದ ಕಾಮಗಾರಿ 50 ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ₹ 4,800 ಕೋಟಿ ಮೊತ್ತದ ಕಾಮಗಾರಿಗೆ ಸಮೀಕ್ಷೆ, ಟೆಂಡರ್ ಆಗಿದ್ದು, ಕೆಲಸ ಶುರು ಮಾಡಲಿದ್ದೇವೆ. 50 ವರ್ಷದಲ್ಲಾಗಬೇಕಿದ್ದ ಕೆಲಸ ಒಮ್ಮೆಲೇ ಮಾಡಿರುವ ಹೆಮ್ಮೆಯಿಂದ, ಮತ್ತೆ ಅಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಹೇಳಿದ್ದೇನೆ.
‘ನಮ್ಮ ನಾಯಕರು ಏನು ಹೇಳುತ್ತಾರೆಯೋ, ಎಲ್ಲಿ ಸ್ಪರ್ಧಿಸು ಎನ್ನುತ್ತಾರೆಯೋ ಹಾಗೆ ಮಾಡುತ್ತೇನೆ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.