
ಬೆಂಗಳೂರು: ‘ರಾಜ್ಯದ ಎರಡನೇ ಸ್ತರದ ನಗರಗಳಲ್ಲಿ ಸಿಫಿ ಟೆಕ್ನಾಲಜೀಸ್ ಮತ್ತು ಭಾರ್ತಿ ಎಂಟರ್‌ಪ್ರೈಸಸ್ ಡೇಟಾ ಕೇಂದ್ರಗಳನ್ನು ತೆರೆಯಲು ಆಸಕ್ತಿ ವ್ಯಕ್ತಪಡಿಸಿವೆ. ಪಾನೀಯ ತಯಾರಿಕೆ ವಲಯದಲ್ಲಿ ಕಾರ್ಲ್ಸ್ ಬರ್ಗ್ ಗ್ರೂಪ್ ₹350 ಕೋಟಿ ಹೂಡಿಕೆಯೊಂದಿಗೆ ಬಾಟ್ಲಿಂಗ್ ಘಟಕ ಸ್ಥಾಪಿಸುವ ಬದ್ಧತೆಯನ್ನು ಪುನರುಚ್ಚರಿಸಿದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ಸಮಾವೇಶದ ಮೂರನೆಯ ದಿನವಾದ ಬುಧವಾರ ಹಲವು ಕಂಪನಿಗಳ ಉನ್ನತ ಮಟ್ಟದ ಪ್ರತಿನಿಧಿಗಳ ಜೊತೆ ಬಂಡವಾಳ ಹೂಡಿಕೆ ಕುರಿತು ಅವರು ಮಾತುಕತೆ ನಡೆಸಿದರು.
ಭಾರ್ತಿ ಎಂಟರ್‌ಪ್ರೈಸಸ್ ಉಪಾಧ್ಯಕ್ಷ ರಾಜನ್ ಭಾರ್ತಿ ಮಿತ್ತಲ್ ಜತೆ ನಡೆದ ಮಾತುಕತೆಯ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಇದ್ದರು.
‘ಬೆಂಗಳೂರಿನಲ್ಲಿರುವ ಹಲವು ಡೇಟಾ ಕೇಂದ್ರಗಳಲ್ಲಿ ಸಿಫಿ ಟೆಕ್ನಾಲಜೀಸ್ ಈಗಾಗಲೇ ಸಾಕಷ್ಟು ಹೂಡಿಕೆ ಮಾಡಿದೆ. ಎರಡನೇ ಸ್ತರದ ನಗರಗಳಲ್ಲೂ ಹೂಡಿಕೆಗೆ ಆಸಕ್ತಿ ಹೊಂದಿರುವ ಈ ಸಂಸ್ಥೆಯು, ಸಂಪರ್ಕ ವ್ಯವಸ್ಥೆ ಮತ್ತು ಭೂಮಿಯ ಲಭ್ಯತೆ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದೆ’ ಎಂದಿದ್ದಾರೆ.
‘ರಾಜ್ಯದಲ್ಲಿ ಇದುವರೆಗೆ ₹13 ಸಾವಿರ ಕೋಟಿ ಹೂಡಿಕೆ ಮಾಡಿರುವ ಭಾರ್ತಿ ಎಂಟರ್‌ಪ್ರೈಸಸ್, ಮತ್ತೊಂದು ಡೇಟಾ ಕೇಂದ್ರ ಸ್ಥಾಪಿಸಲು ಬಯಸುವುದಾಗಿ ಹೇಳಿದೆ. ಫೊರ್ಜಿಂಗ್ ಮತ್ತು ಪ್ರಿಸಿಷನ್ ಎಂಜಿನಿಯರಿಂಗ್ ಕಂಪನಿಯಾಗಿರುವ ಭಾರತ್ ಫೋರ್ಜ್ ಲಿಮಿಟೆಡ್ ಕೂಡ ರಾಜ್ಯದಲ್ಲಿ ಮತ್ತಷ್ಟು ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಮಾಹಿತಿ ಪಡೆದುಕೊಂಡಿದೆ’ ಎಂದು ತಿಳಿಸಿದ್ದಾರೆ.
‘ಫ್ರಾನ್ಸ್ ಮೂಲದ ಎಐ ಕಂಪನಿ ಮಿಸ್ಟ್ರಾಲ್ ಎಐ, ಬೆಂಗಳೂರಿನಲ್ಲಿ ಹಂತಹಂತವಾಗಿ ಆರ್ ಆ್ಯಂಡ್ ಡಿ ಕೇಂದ್ರ ಅಭಿವೃದ್ಧಿಪಡಿಸಲು ಉತ್ಸುಕವಾಗಿದೆ. ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳಿಗೆ ಹೆಸರಾಗಿರುವ ಅಮೆರಿಕ ಮೂಲದ ಫಿಲಿಪ್ ಮಾರಿಸ್ ಕಂಪನಿ ಕೂಡ ಧೂಮರಹಿತ ಉತ್ಪನ್ನಗಳನ್ನು ತಯಾರಿಸುವ ಇಚ್ಛೆಯನ್ನು ಹಂಚಿಕೊಂಡಿದೆ. ಬೆಲ್ ರೈಸ್ ಕಂಪನಿ ಕೂಡ ಹೂಡಿಕೆ ಮಾಡಲು ಬಯಸಿದೆ’ ಎಂದು ಪಾಟೀಲ ಹೇಳಿದ್ದಾರೆ.
‘2045 ಗುರಿ ಇಟ್ಟುಕೊಂಡು ಬೆಂಗಳೂರಿನ ಸಂಪರ್ಕ ಅಭಿವೃದ್ಧಿ’
‘ಬೆಂಗಳೂರಿನ ಸಂಚಾರ ಹಾಗೂ ಮೂಲಸೌಕರ್ಯ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಾವು 2045ರ ಗುರಿ ಇಟ್ಟುಕೊಂಡು ಸಾರಿಗೆ ಸಂಪರ್ಕ ಅಭಿವೃದ್ಧಿಪಡಿಸುತ್ತಿದ್ದೇವೆ. ನೀವೆಲ್ಲರೂ ಬೆಂಗಳೂರಿಗೆ ಬನ್ನಿ’ ಎಂದು ಡಿ.ಕೆ. ಶಿವಕುಮಾರ್ ಅವರು ಉದ್ಯಮಿಗಳಿಗೆ ಆಮಂತ್ರಣ ಕೊಟ್ಟರು.
‘ಬೆಂಗಳೂರು ಭವಿಷ್ಯದ ನಗರ. ಇಲ್ಲಿನ ಹವಾಗುಣ ಸಂಸ್ಕೃತಿ ಮಾನವ ಸಂಪನ್ಮೂಲ ಅತ್ಯುತ್ತಮವಾಗಿದೆ. ವಿಶ್ವದ ಅನೇಕ ಕಂಪನಿಗಳು ಇಲ್ಲಿ ಕೆಲಸ ಮಾಡಿ ಬೆಳೆಯುತ್ತಿವೆ’ ಎಂದರು.
‘ನಮ್ಮಲ್ಲಿ ಅತ್ಯುತ್ತಮ ಮಾನವ ಸಂಪನ್ಮೂಲವಿದ್ದು ವಿಶ್ವದ ಪ್ರತಿಷ್ಠಿತ 500 ಕಂಪನಿಗಳು ಬೆಂಗಳೂರಿನಲ್ಲಿವೆ. ಏರೋಸ್ಪೇಸ್ ಐಟಿ ಮೆಡಿಕಲ್ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಇಲ್ಲಿನ ಮಾನವ ಸಂಪನ್ಮೂಲ ಕೌಶಲ ಹೊಂದಿದೆ. ಕರ್ನಾಟಕದಲ್ಲಿ 70 ಮೆಡಿಕಲ್ ಕಾಲೇಜುಗಳಿದ್ದು ಪ್ರತಿವರ್ಷ 1.50 ಲಕ್ಷ ಆರೋಗ್ಯ ಕ್ಷೇತ್ರದ ಸಿಬ್ಬಂದಿ ತಯಾರಾಗುತ್ತಿದ್ದಾರೆ. ಬೆಂಗಳೂರಿನಲ್ಲಿ 25 ಲಕ್ಷ ಎಂಜಿನಿಯರಿಂಗ್ ವೃತ್ತಿಪರರು ಇದ್ದಾರೆ’ ಎಂದು ತಿಳಿಸಿದರು.
ಇಂಪೀರಿಯಲ್ ಕಾಲೇಜಿನ ‘ಆರ್ ಆ್ಯಂಡ್ ಡಿ’ ಕೇಂದ್ರ
‘ಲಂಡನ್‌ನ ಅಗ್ರಗಣ್ಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಇಂಪೀರಿಯಲ್ ಕಾಲೇಜು ಡಾಬಸ್-ದೊಡ್ಡಬಳ್ಳಾಪುರದ ಮಧ್ಯೆ ಅಸ್ತಿತ್ವಕ್ಕೆ ಬರುತ್ತಿರುವ ಕ್ವಿನ್ ಸಿಟಿಯಲ್ಲಿ ತನ್ನ ಸಂಶೋಧನಾ ಮತ್ತು ಅಭಿವೃದ್ಧಿ (ಆರ್ & ಡಿ) ಕೇಂದ್ರ ಆರಂಭಿಸುವ ಕುರಿತು ಮಾತುಕತೆ ನಡೆಸಿದೆ. ಇಂಪೀರಿಯಲ್ ಕಾಲೇಜು ಈಗಾಗಲೇ ಬೆಂಗಳೂರಿನಲ್ಲಿ ಇನೋವೇಶನ್ ಹಬ್ ಹೊಂದಿದ್ದು ಭಾರತೀಯ ವಿಜ್ಞಾನ ಸಂಸ್ಥೆಯೊಂದಿಗೆ ಸಹಭಾಗಿತ್ವ ಹೊಂದಿದೆ. ಆ ವಿಶ್ವವಿದ್ಯಾಲಯದ ಮುಖ್ಯಸ್ಥ ಪ್ರೊ.ಹಗ್ ಬ್ರಾಡಿ ಅವರು ಕ್ಯಾಂಪಸ್‌ಗೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ’ ಎಂದು ಪಾಟೀಲ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.