
ಬೆಂಗಳೂರು: ‘ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ವಿವಿಧ ಕಂಪನಿಗಳು ರಾಜ್ಯಕ್ಕೆ ₹13,070 ಕೋಟಿ ಮೊತ್ತದ ಹೂಡಿಕೆಯನ್ನು ದೃಢಪಡಿಸಿವೆ’ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.
‘ದಾವೋಸ್ ಸಮಾವೇಶ ಫಲಪ್ರದವಾಗಿದೆ. ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ 45ಕ್ಕೂ ಹೆಚ್ಚು ಉದ್ಯಮ ಸಂಸ್ಥೆಗಳ ಜತೆಗಿನ ಸಭೆಯಲ್ಲಿ ವಿವರಿಸಲಾಗಿದೆ. ಹಲವು ಕಂಪನಿಗಳು ರಾಜ್ಯದಲ್ಲಿ ಹೂಡಿಕೆಗೆ ಆಸಕ್ತಿ ತೋರಿಸಿವೆ’ ಎಂದು ದಾವೋಸ್‌ನಿಂದ ವಾಪಸಾದ ನಂತರ ಎಂ.ಬಿ.ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಆರ್.ಪಿ.ಸಂಜೀವ್ ಗೋಯೆಂಕಾ ಉದ್ಯಮ ಸಮೂಹವು ಮುಂದಿನ ಮೂರು ವರ್ಷಗಳಲ್ಲಿ ವಿಜಯಪುರ ಮತ್ತು ಬಳ್ಳಾರಿಯಲ್ಲಿ ಮರುಬಳಕೆ ಇಂಧನ ತಯಾರಿಕೆ ಘಟಕ ಆರಂಭಕ್ಕೆ ₹10,500 ಕೋಟಿ ಹೂಡಿಕೆ ಮಾಡಲಿದೆ. ಜಾಗತಿಕ ಮದ್ಯ ತಯಾರಿಕಾ ಕಂಪನಿ ಕಾರ್ಲ್ಸ್‌ಬರ್ಗ್, ನಂಜನಗೂಡಿನಲ್ಲಿ ಬಾಟ್ಲಿಂಗ್ ಘಟಕ ಸ್ಥಾಪನೆಗೆ ₹350 ಕೋಟಿ ಹೂಡಿಕೆ ಮಾಡಲಿದೆ’ ಎಂದು ವಿವರಿಸಿದ್ದಾರೆ.
‘ಐನಾಕ್ವ್ ಜಿಎಲ್ಎಕ್ಸ್ ಕಂಪನಿಯು ಕುಷ್ಟಗಿಯಲ್ಲಿನ ತನ್ನ ಪವನ ವಿದ್ಯುತ್ ಘಟಕಗಳ ಟರ್ಬೈನ್ ಬ್ಲೇಡ್ ತಯಾರಿಕೆ, ದೈತ್ಯ ಗೋಪುರ ಮತ್ತು ಸೌರ ಫಲಕ ತಯಾರಿಕಾ ಘಟಕ ವಿಸ್ತರಣೆಗೆ ₹400 ಕೋಟಿ ವೆಚ್ಚ ಮಾಡಲಿದೆ. ಸ್ನೈಡರ್ ಎಲೆಕ್ಟ್ರಿಕ್ ಕಂಪನಿಯು ಐಟಿ ಕ್ಷೇತ್ರದಲ್ಲಿ ₹1,520 ಕೋಟಿಯ ಹೂಡಿಕೆ ಘೋಷಿಸಿದೆ. ದ್ವಿಚಕ್ರ ವಾಹನಗಳ ಬಿಡಿಭಾಗಗಳ ತಯಾರಿಕಾ ಕಂಪನಿ ಬೆಲ್‌ರೈಸ್ ಇಂಡಸ್ಟ್ರೀಸ್ ಮೈಸೂರಿನಲ್ಲಿ ತನ್ನ ಘಟಕವನ್ನು ₹300 ಕೋಟಿ ವೆಚ್ಚದಲ್ಲಿ ವಿಸ್ತರಣೆ ಮಾಡಲಿದೆ’ ಎಂದಿದ್ದಾರೆ.
‘ಕೋಕ ಕೋಲಾ ಕಂಪನಿಯು ಭಾರತದಲ್ಲಿ ₹25,000 ಕೋಟಿ ಹೂಡಿಕೆಗೆ ಮುಂದಾಗಿದೆ. ಈ ಬಂಡವಾಳದಲ್ಲಿ ರಾಜ್ಯಕ್ಕೂ ಸ್ವಲ್ಪ ಭಾಗವನ್ನು ಆಕರ್ಷಿಸುವ ಸಲುವಾಗಿ ಮಾತುಕತೆ ನಡೆದಿದೆ. ದಾಬಸ್‌ಪೇಟೆ–ದೊಡ್ಡಬಳ್ಳಾಪುರ ಮಧ್ಯೆ ಸ್ಥಾಪಿಸಲಾಗುವ ಕ್ವಿನ್ ಸಿಟಿಯಲ್ಲಿ ಹೂಡಿಕೆಗೆ ಹಲವು ಜಾಗತಿಕ ಕಂಪನಿಗಳು ಆಸಕ್ತಿ ತೋರಿಸಿವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.