ADVERTISEMENT

ಪಂಚಾಯಿತಿ ಚುನಾವಣೆಯಲ್ಲೂ ಪಕ್ಷಗಳ ಚಿಹ್ನೆಗಳಡಿ ಅಭ್ಯರ್ಥಿಗಳ ಸ್ಪರ್ಧೆ?

1987ರಲ್ಲಿ ಇದ್ದಂತೆ ನಿಯಮ ಮರುಜಾರಿಗೆ ಚಿಂತನೆ, ಸದನದಲ್ಲೂ ಚರ್ಚೆಗೆ ಸಮ್ಮತಿ

ಚಂದ್ರಹಾಸ ಹಿರೇಮಳಲಿ
Published 15 ಡಿಸೆಂಬರ್ 2024, 19:51 IST
Last Updated 15 ಡಿಸೆಂಬರ್ 2024, 19:51 IST
<div class="paragraphs"><p>ಚುನಾವಣೆ</p></div>

ಚುನಾವಣೆ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಚಿಹ್ನೆಗಳಡಿ ಅಭ್ಯರ್ಥಿಗಳ ಸ್ಪರ್ಧೆಗೆ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ADVERTISEMENT

ಪ್ರಜಾಪ್ರಭುತ್ವದ ಬುನಾದಿ ಎನಿಸಿಕೊಂಡಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೂರು ದಶಕಗಳ ಹಿಂದೆ ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ಬಳಸಿಕೊಳ್ಳಲಾಗುತ್ತಿತ್ತು.

ಕರ್ನಾಟಕದಲ್ಲಿ ಮೊದಲ ಬಾರಿ 1987ರಲ್ಲಿ ನಡೆದಿದ್ದ ಗ್ರಾಮ ಪಂಚಾಯಿತಿ (ಆಗ ಮಂಡಲ ಪಂಚಾಯಿತಿ) ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಆ ಬಳಿಕ ರೂಪಿಸಿದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ ರಾಜ್‌ ಅಧಿ ನಿಯಮ–1993ರ ಪ್ರಕಾರ ರಾಜಕೀಯ ಪಕ್ಷಗಳ ಚಿಹ್ನೆ ಬಿಟ್ಟು ಚುನಾವಣೆ ನಡೆಸಲು ನಿಯಮ ರೂಪಿಸಲಾಗಿತ್ತು.

1993ರಿಂದ ಇಲ್ಲಿಯವರೆಗೆ ಮೂರು ದಶಕಗಳಲ್ಲಿ ಗ್ರಾಮ ಪಂಚಾಯಿತಿಗಳಿಗೆ ನಡೆದ ಯಾವುದೇ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ಬಳಸಿಲ್ಲ.

ಆದರೆ, ಎಲ್ಲ ಪಕ್ಷಗಳೂ ಸ್ಪರ್ಧಿಸಿದ ಅಭ್ಯರ್ಥಿಗಳನ್ನು ಬೆಂಬಲಿತ ಎಂದೇ ಬಿಂಬಿಸುತ್ತಾ ಚುನಾವಣೆ ನಡೆಸುತ್ತಾ ಬಂದಿವೆ. ಅಭ್ಯರ್ಥಿಗಳೂ ಚುನಾವಣಾ ಆಯೋಗ ತಮಗೆ ಹಂಚಿಕೆ ಮಾಡಿದ ಚಿಹ್ನೆಯ ಜತೆಗೆ, ಪಕ್ಷದ ಚಿಹ್ನೆಗಳನ್ನೂ ಬಳಸಿಕೊಂಡು ಪ್ರಚಾರ ನಡೆಸುವುದು ಸಾಮಾನ್ಯ ಸಂಗತಿಯಾಗಿದೆ. ಗೆದ್ದ ಅಭ್ಯರ್ಥಿಗಳನ್ನು ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಅಭ್ಯರ್ಥಿಗಳೆಂದೇ ಬಿಂಬಿಸಿಕೊಳ್ಳುತ್ತವೆ. ಇದು ಗ್ರಾಮ ಗದ್ದುಗೆ ಏರುವಲ್ಲಿ ಹಲವು ಗೊಂದಲಗಳಿಗೆ ದಾರಿ ಮಾಡಿಕೊಡುತ್ತಿದೆ. ಪಕ್ಷಾಂತರ ನಿಷೇಧ ಕಾಯ್ದೆಯ ಹಂಗಿಲ್ಲದ ಕಾರಣ ವಿಜೇತರಾದ ಅಭ್ಯರ್ಥಿಗಳು ತಮ್ಮ ಅನುಕೂಲ ನೋಡಿಕೊಂಡು ಬಣಗಳನ್ನು ಬದಲಿಸುತ್ತಾರೆ. 

‘ಇಂತಹ ಅನಿಶ್ಚಿತ ಸ್ಥಿತಿಗೆ ತೆರೆ ಎಳೆಯಲು ಪಕ್ಷದ ಚಿಹ್ನೆ ಅಡಿಯಲ್ಲೇ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು’ ಎಂದು ಹಲವು ಶಾಸಕರು, ವಿಧಾನಪರಿಷತ್‌ ಸದಸ್ಯರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ವಿಷಯ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲೂ ಚರ್ಚೆಗೆ ಬರಲಿದೆ. 

ಪ್ರಸ್ತುತ ಕೇರಳದಲ್ಲಿ ಪಕ್ಷಗಳ ಚಿಹ್ನೆ ಅಡಿಯಲ್ಲೇ ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆಯುತ್ತಿದ್ದು, ಅಲ್ಲಿನ ಪಂಚಾಯಿತಿಗಳು ಕರ್ನಾಟಕದ ಗ್ರಾಮಗಳಿಗಿಂತಲೂ ಹೆಚ್ಚಿನ ಅಭಿವೃದ್ಧಿ ಸಾಧಿಸಿವೆ. ಉತ್ತಮ ಆಡಳಿತಕ್ಕೆ ಮಾದರಿಯಾಗಿವೆ. ಎಲ್ಲ ರಾಜಕೀಯ ಪಕ್ಷಗಳ ಬುನಾದಿಯೂ ಗಟ್ಟಿಗೊಂಡಿವೆ ಎನ್ನುವ ಮಾಹಿತಿಯನ್ನು ಸರ್ಕಾರಕ್ಕೆ ನೀಡಲಾಗಿದೆ.

ಈಗಿರುವ ನಿಯಮಗಳು
  • ಪಕ್ಷಗಳ ಚಿಹ್ನೆ ರಹಿತ ಚುನಾವಣೆ 

  • ಅಭ್ಯರ್ಥಿಗಳಿಗೆ ಮುಕ್ತ ಚಿಹ್ನೆಗಳ ಹಂಚಿಕೆ 

  • ಪ್ರಚಾರದಲ್ಲಿ ಪಕ್ಷಗಳ ಬಾವುಟ, ಬ್ಯಾನರ್‌ ನಿಷೇಧ

  • ರಾಜಕೀಯ ಪಕ್ಷಗಳ ಸಭೆ, ಸಮಾರಂಭ ನಿಷೇಧ

  • ಅಭ್ಯರ್ಥಿಗಳನ್ನು ‘ಬೆಂಬಲಿತರು’ ಎಂದು ಬಿಂಬಿಸುವಂತಿಲ್ಲ  

  • ರಾಜಕೀಯ ಮುಖಂಡರ ಭಾವಚಿತ್ರದ ಕರಪತ್ರ ನಿಷೇಧ

ಹಲವು ಶಾಸಕರು, ರಾಜಕೀಯ ತಜ್ಞರು, ಸಂಘಟನೆಗಳ ಪ್ರಮುಖರು ಬೇಡಿಕೆ ಇಟ್ಟಿದ್ದಾರೆ. ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಟ್ಟು, ಅಭಿಪ್ರಾಯ ಸಂಗ್ರಹದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು.
–ಪ್ರಿಯಾಂಕ್‌ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ
ಕೇರಳ ಮಾದರಿಯಲ್ಲಿ ಸದಸ್ಯ ಕ್ಷೇತ್ರಗಳನ್ನು ಮರುನಿಗದಿ ಮಾಡಬೇಕು. ಪಕ್ಷದ ಚಿಹ್ನೆ ಆಧಾರದಲ್ಲೇ ಚುನಾವಣೆ ನಡೆಸಬೇಕು ಎಂಬ ಬೇಡಿಕೆ ಇಟ್ಟಿದ್ದೇವೆ. ಈ ಕುರಿತು ಸದನದಲ್ಲಿ ಚರ್ಚಿಸಲು ಅನುಮತಿ ದೊರೆತಿದೆ.
–ಮಂಜುನಾಥ ಭಂಡಾರಿ, ವಿಧಾನಪರಿಷತ್‌ ಸದಸ್ಯ
1987ರ ನಿಯಮ ಬದಲಿಸಿದ್ದೇಕೆ?
  • ಪಕ್ಷ ರಾಜಕೀಯದಿಂದ ಹಳ್ಳಿಗಳ ಸಾಮರಸ್ಯಕ್ಕೆ ಧಕ್ಕೆ 

  • ಗುಂಪುಗಾರಿಕೆ ಕಾರಣ ಗ್ರಾಮಗಳ ಅಭಿವೃದ್ಧಿಗೆ ಹಿನ್ನಡೆ

  • ಗೆದ್ದ ಪಕ್ಷಗಳ ಬೆಂಬಲಿಗ ರಿಗಷ್ಟೇ ಸೌಲಭ್ಯಗಳು

  • ಸೋತ ಪಕ್ಷಗಳ ಬೆಂಬಲಿಗರ ಕಡೆಗಣನೆ

  • ಎಲ್ಲರನ್ನೂ ಒಳಗೊಂಡ ಗ್ರಾಮಸ್ವರಾಜ್‌ ಪರಿಕಲ್ಪನೆ

ಪಕ್ಷ ಚಿಹ್ನೆ ಬೇಕು ಎನ್ನುವವರ ವಾದ
  • ಪಕ್ಷಗಳ ಚಿಹ್ನೆ ಇಲ್ಲದಿದ್ದರೂ ಪರೋಕ್ಷವಾಗಿ ಪಕ್ಷಗಳ ಪ್ರವೇಶ

  • ಗೆದ್ದ ಅಭ್ಯರ್ಥಿಗಳನ್ನು ತಮ್ಮ ಬೆಂಬಲಿಗರೆಂದೇ ಬಿಂಬಿಸುವ ಪರಿಪಾಟ

  • ಗುಂಪುಗಾರಿಕೆಗೆ ಕಡಿವಾಣ ಹಾಕಲು ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ

  • ರಾಜಕೀಯ ಪಕ್ಷಗಳ ಬೇರು ಗಟ್ಟಿಮಾಡಲು ಪಕ್ಷಗಳ ಪ್ರವೇಶ ಅಗತ್ಯ

  • ಇತರೆ ಚುನಾವಣೆಗಳ ಮೇಲೂ ಹಿಡಿತ ಸಾಧಿಸಲು ಅನುಕೂಲ

ಮುಂದಿನ ಡಿಸೆಂಬರ್‌ಗೆ ಚುನಾವಣೆ
ರಾಜ್ಯದ ಗ್ರಾಮ ಪಂಚಾಯಿತಿಗಳ ಅವಧಿ ಒಂದು ವರ್ಷದ ಒಳಗೆ ಪೂರ್ಣಗೊಳ್ಳಲಿದೆ. 2025ರ ಡಿಸೆಂಬರ್‌ಗೆ ಚುನಾವಣೆ ನಡೆಯಲಿದೆ. ಮೀಸಲಾತಿ, ಕೋರ್ಟ್‌ ಪ್ರಕರಣ ಮತ್ತಿತರ ಕಾರಣಕ್ಕೆ ವಿಳಂಬವಾದ ಪಂಚಾಯಿತಿಗಳ ಚುನಾವಣೆ ಆಯಾ ಅವಧಿ ಪೂರ್ಣಗೊಂಡ ನಂತರ ಪ್ರತ್ಯೇಕವಾಗಿ ನಡೆಯಲಿವೆ. 2020ರಲ್ಲಿ ರಾಜ್ಯದ 5,728 ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಡಿ. 22ರಂದು ಮೊದಲ ಹಂತ, ಡಿ. 27ರಂದು ಎರಡನೇ ಹಂತದ ಚುನಾವಣೆ ನಡೆದಿತ್ತು. ಎರಡೂ ಹಂತಗಳಿಂದ 2,14,740 ಅಭ್ಯರ್ಥಿಗಳು ಪಂಚಾಯಿತಿ ಉಮೇದುವಾರಿಕೆ ಬಯಿಸಿ, ಸ್ಪರ್ಧೆಗೆ ಇಳಿದಿದ್ದರು. ಬೀದರ್‌ ಜಿಲ್ಲೆಯಲ್ಲಿ ಮಾತ್ರ ಇವಿಎಂ ಬಳಸಲಾಗಿತ್ತು. ಉಳಿದ ಕಡೆಗಳಲ್ಲಿ ಮತ ಪತ್ರಗಳ ಬಳಸಿ, ಮತದಾನ ಮಾಡಲು ಅವಕಾಶ ನೀಡಲಾಗಿತ್ತು.
ಕೇರಳ ಮಾದರಿ ಸದಸ್ಯ ಕ್ಷೇತ್ರಗಳಿಗೆ ಪಟ್ಟು

ಪಂಚಾಯಿತಿವಾರು ಸದಸ್ಯ ಕ್ಷೇತ್ರಗಳನ್ನು ಕೇರಳ ಮಾದರಿಯಲ್ಲಿ ಪುನರ್‌ ನಿಗದಿ ಮಾಡಲು ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದ ವಿಧಾನಪರಿಷತ್‌ ಸದಸ್ಯರು ಪಟ್ಟುಹಿಡಿದಿದ್ದಾರೆ.

ಕೇರಳದಲ್ಲಿ 1,500ರಿಂದ 1,800 ಜನಸಂಖ್ಯೆಗೆ ಒಬ್ಬರು ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಪಂಚಾಯಿತಿ ಅಧ್ಯಕ್ಷರಿಗೆ ಮಾಸಿಕ ₹15,000, ಉಪಾಧ್ಯಕ್ಷರಿಗೆ ₹12,000 ಹಾಗೂ ಸದಸ್ಯರಿಗೆ ₹7,000 ಗೌರವಧನವಿದೆ. ಪ್ರತಿ ಗ್ರಾಮ ಪಂಚಾಯಿತಿಯ ವಾರ್ಷಿಕ ಬಜೆಟ್‌ ಕನಿಷ್ಠ ₹12 ಕೋಟಿ ಇದೆ.  

ಕರ್ನಾಟಕದಲ್ಲಿ 400 ಹಾಗೂ ಅದಕ್ಕಿಂತ ಕಡಿಮೆ ಜನಸಂಖ್ಯೆ ನಿಗದಿ ಮಾಡಲಾಗಿದೆ. ಇದರಿಂದ ಸದಸ್ಯರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಗ್ರಾಮಗಳ ಅಭಿವೃದ್ಧಿ, ಸದಸ್ಯರ ಗೌರವಧನ ಹೆಚ್ಚಳಕ್ಕೂ ತೊಡಕಾಗಿದೆ ಎಂದು ಸರ್ಕಾರದ ಗಮನ ಸೆಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.