
ಸಿದ್ದರಾಮಯ್ಯ
ಮೈಸೂರು: ‘ದೆಹಲಿಯ ಕೆಂಪುಕೋಟೆ ಬಳಿ ನಡೆದ ಸ್ಫೋಟದ ಬಗ್ಗೆ ಕೇಂದ್ರ ಸರ್ಕಾರವೇ ಸಮಗ್ರ ತನಿಖೆ ನಡೆಸಿ ಉತ್ತರಿಸಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಂಗಳವಾರ ಇಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ ‘ ದೇಶದಲ್ಲಿ ಚುನಾವಣೆ ವೇಳೆಯಲ್ಲೇ ಏಕೆ ಸ್ಫೋಟಗಳು ಆಗುತ್ತಿವೆ ? ದೆಹಲಿ ಸ್ಫೋಟ ಮಂಗಳವಾರದ ಬಿಹಾರ ಚುನಾವಣೆ ವೇಳೆ ಪ್ರಭಾವ ಬೀರುತ್ತದೆಯೇ’ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ ‘ಸ್ಫೋಟಗಳು ಆಗಬಾರದು. ಅದರಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಾರೆ. ಚುನಾವಣೆ ವೇಳೆಯಲ್ಲೇ ಏಕೆ ಸ್ಫೋಟಗಳು ಹೆಚ್ಚು ಎಂಬ ಬಗ್ಗೆ ಕೇಂದ್ರವೇ ಉತ್ತರಿಸಬೇಕು. ಈ ಸ್ಫೋಟವು ಬಿಹಾರ ಚುನಾವಣೆಯಲ್ಲಿ ಬಿಜೆಪಿ ಮೇಲೆ ಋಣಾತ್ಮಕ ಪ್ರಭಾವ ಬೀರುವ ಸಾಧ್ಯತೆಯೇ ಹೆಚ್ಚು’ ಎಂದರು.
15ರಂದು ದೆಹಲಿಗೆ:
‘ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಲು ನ. 15 ರಂದು ದೆಹಲಿಗೆ ಹೋಗುತ್ತಿದ್ದೇನೆ. ಅವತ್ತೇ ವಾಪಾಸ್ ಬರುವ ಅಂದಾಜಿದೆ. ರಾಹುಲ್ ಗಾಂಧಿ ಭೇಟಿಗೆ ಸಮಯ ಕೋರಿದ್ದು, ಅವಕಾಶ ಸಿಕ್ಕರೆ ಹೈಕಮಾಂಡ್ ಭೇಟಿಯಾಗುತ್ತೇನೆ’ ಎಂದರು.
ಭಾರತ ಹಿಂದೂ ರಾಷ್ಟ್ರ ಎಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಪ್ರತಿಕ್ರಿಯಿಸಿ ‘ಭಾರತ ಬಹುತ್ವದ ಸಂಸ್ಕೃತಿಯುಳ್ಳ ದೇಶ. ಎಲ್ಲ ಧರ್ಮೀಯರು ನಮ್ಮಲ್ಲಿ ಇದ್ದಾರೆ’ ಎಂದರು. ‘ ಆರ್‌ಎಸ್‌ಎಸ್‌ನವರು ಮೊದಲು ದೇಶದಲ್ಲಿನ ಅಸಮಾನತೆ, ಅಸ್ಪೃಶ್ಯತೆ ಬಗ್ಗೆ ಮಾತನಾಡಲಿ’ ಎಂದು ಸಲಹೆ ನೀಡಿದರು.
ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಕಾಂಗ್ರೆಸ್‌ನತ್ತ ವಾಲಿರುವ ಕುರಿತು ಪ್ರತಿಕ್ರಿಯಿಸಿದ ಅವರು ‘ಜಿ.ಟಿ. ದೇವೇಗೌಡ ಸೇರಿದಂತೆ ಯಾರನ್ನೂ ಪಕ್ಷಕ್ಕೆ ಆಹ್ವಾನಿಸುವುದಿಲ್ಲ. ಆದರೆ ಪಕ್ಷದ ಸಿದ್ದಾಂತ ಒಪ್ಪಿ ಬರುವವರಿಗೆ ಬೇಡ ಎನ್ನುವುದಿಲ್ಲ’ ಎಂದರು.
‘ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರ ಯಾವುದೇ ತಡೆ ನೀಡಿಲ್ಲ. ನೀಡುವುದೂ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.